ವಿಸ್ಕಿ ಜೊತೆ ಸೋಡಾ ok, ಪೆಟ್ರೋಲ್ ಯಾಕೆ...?


ಕುಡಿದು ವಾಹನ ಓಡಿಸಬಾರದೆಂದಾದರೆ ಬಾರಿನೆದುರು ಪಾರ್ಕಿಂಗ್ ಜಾಗ ಏಕಿರುತ್ತದೆ ಎಂದು ಕಿಲಾಡಿ ಬೀರ್‌ಬಲ್ಲರು ಪ್ರಶ್ನಿಸಬಹುದು. ಬಿಡಿ, ಕುಡುಕರಿಗೆ ಸಬೂಬುಗಳಿಗೇನೂ ಕೊರತೆಯಿಲ್ಲ. ವಾಲಾಡುತ್ತಲಿದ್ದರೂ ಸ್ಪಷ್ಟೀಕರಣ ಮಾತ್ರ ನೇರವಾಗಿಯೇ ನೀಡುತ್ತಾರೆ.
ನಿಮ್ಮಂಥ ಕೆಲವು ಸಾತ್ವಿಕರು ಮಧ್ಯಪಾನ ಮಾಡಿ ವಾಹನ ಚಲಿಸಬೇಡಿ ಎಂದು ಬಸ್ಸಿನ ಹಿಂದೆ ಬರೆದಿರುವುದನ್ನು ನೋಡಿ, ಸರ್ಕಾರ ಮಧ್ಯಪಾನ ಮಾಡಿ ಎನ್ನುವುದನ್ನು ಒತ್ತಿ ಹೇಳುತ್ತಿದೆಯೋ ಅಥವಾ ವಾಹನ ಚಲಿಸಬೇಡಿ ಎನ್ನುವುದನ್ನು ಒತ್ತಿ ಹೇಳುತ್ತಿದೆಯೋ ಎಂದು ಕೆಲವೊಮ್ಮೆ ತಲೆ ಕೆರೆದುಕೊಂಡಿರಬಹುದು. ಆದರೆ ಪಾಪ ನಮ್ಮ ಸರ್ಕಾರ ಹೇಳಲು ಪ್ರಯತ್ನಿಸಿರುವುದು ಅವೆರಡನ್ನೂ ಮಿಕ್ಸ್ ಮಾಡಬೇಡಿ ಎಂದು.
ಅವರು ಹೇಳುವುದೂ ಸರಿಯೇ. ಏಕೆಂದರೆ ಈ ಎಣ್ಣೆ ಮಾಡುವ ಕರಾಮತ್ತು ಅಷ್ಟಿಷ್ಟಲ್ಲ. ಅದರಲ್ಲೂ ಇದು ಯುವ ದೇಹಗಳನ್ನು ಹೊಕ್ಕರೆ ಕೇಳುವುದೇ ಬೇಡ. ಮೊದಲೇ ಬಿಸಿಯಿರುವ ರಕ್ತ. ಮತ್ತಷ್ಟು ಬಿಸಿಯಾಗಿ ಶರವೇಗದಲ್ಲಿ ಎಲ್ಲಾ ಅಂಗಗಳಲ್ಲೂ ಸುಳಿದಾಡಿ, ಕೈ ಕಾಲೆಲ್ಲಾ ಸಡಿವಾಗಿ, ಇಡೀ ಮೈಗೆ ಮೈಕೆಲ್ ಜಾಕ್ಸನ್ ಎಫೆಕ್ಟ್ ಕೊಡುತ್ತದೆ.
ಈ ಎಫೆಕ್ಟ್ ಹೆಚ್ಚಾಗಿ ಒಂದಷ್ಟು ಸೈಡ್ ಎಫೆಕ್ಟ್‌ನಿಂದಾಗಿ ರೋಡ್‌ಸೈಡ್ ಹೋಗಿ ಬೀಳುವ ದಿನಚರಿ ಬೆಳೆಸಿಕೊಂಡವರು ಕೆಲವರಿರುತ್ತಾರೆ. ಅವರನ್ನೇನೋ ನಾವು full-time ಕುಡುಕರು ಎಂದು ಪಕ್ಕಕ್ಕಿಡಬಹುದು. ಆದರೆ ಇನ್ನೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಕುಡಿಯುವ ಚಟ ಅದೇಕೋ..? ವಿದ್ಯಾರ್ಥಿ ದಿಸೆಯಲ್ಲಿ ಬಾರಿಗೆ ಹೋಗಿ ಕುಡಿದು ನೇರವಾಗಿ ಕಾಲೇಜಿಗೆ ಬಂದು ಡಿ-ಬಾರ್ ಆದವರ ಉದಾಹರಣೆ ಕಣ್ಮುಂದೆಯೇ ಇದ್ದರೂ ಇವರು ಪಾಠ ಕಲಿಯುವುದಿಲ್ಲವಲ್ಲ...
ಹೇಳಿ ಕೇಳಿ ಮನೆಯಲ್ಲಿವರು ಯುವರಾಜರು. ಇವರ ಬಯಕೆ ಈಡೇರಿಸುವ ಸಲುವಾಗಿ ಓದುವ ಹುಡುಗ, ಪಾಪ ಚೆನ್ನಾಗಿ ಓದಲಿ ಎಂದು ತಂದೆ ಮಹಾರಾಜರು ಬೈಕನ್ನು ದಯಪಾಲಿಸಿರುತ್ತಾರೆ. ಮತ್ತೆ ಕೇಳುವುದೇ ಬೇಡ. ಆಸೆ ಕುದುರೆ ಬೆನ್ನ ಏರಿದ ಇವರು ಮರೀಚಿಕೆ ಅರಸುತ್ತಾ ಓಡುತ್ತಾರೆ. ಆ ಮರೀಚಿಕೆ ಸ್ಪಷ್ಟವಾಗಿ ಕಾಣಲು ಪೆನ್ ಹಿಡಿಯುವ ಕೈಯ್ಯಾರೆ ಒಂದೆರಡು ಪೆಗ್ ಏರಿಸುತ್ತಾರೆ.
ಆದರೂ ಇವರನ್ನು ಹಾಗೆಲ್ಲಾ ವಿನಾಕಾರಣ ಕುಡಿಯುವವರು ಎಂದು ಸುಮ್ಸುಮ್ನೆ ದೂಷಿಸಬೇಡಿ. ಇವರಿಗೆ ಕುಡಿಯಲು ಹಲವು ಸಕಾರಣಗಳಿರುತ್ತವೆ. ಪರೀಕ್ಷೆ, ಅಸೈನ್ಮೆಂಟು ಇತ್ಯಾದಿ ಒತ್ತಡಗಳಿಂದ ಹೊರಬರುವ ಕಾರಣ ಕೆಲವರಿಗಾದರೆ, ಇನ್ನು ಕೆಲವರ ಮೇಲೆ ಹೆಣ್ಣೆಂಬ ಮಾಯೆಯ ಪ್ರಭಾವ. ಪ್ರೀತಿಸಿದ ಹುಡುಗಿ ಕೈಕೊಟ್ಟ ನೋವು ಮರೆಯಬೇಕಲ್ಲ?!
ಕುಡಿದು ಕುಡಿದು ದಣಿದ ಮನಸ್ಸಿಗೆ ಒಂದಷ್ಟು ಹೊತ್ತು ಗಾಳಿಯಲ್ಲಿ ಮೈಯೊಡ್ಡುವ ಮನಸ್ಸಾಗುತ್ತದೆ. ಹೇಗಿದ್ದರೂ ಬೈಕೆಂಬ ಬ್ರಹ್ಮರಾಕ್ಷಸ ಇರುತ್ತಾನಲ್ಲ. ಅವನ ಬೆನ್ನೇರಿ ಕಿವಿ ಹಿಂಡಿದರೆ ಸಾಕು, ಆಹಾ..! ಬದುಕು ಜಟಕಾ ಬಂಡಿಯಲ್ಲ, ಪುಷ್ಪಕ ವಿಮಾನ ಎಂದು ಅನಿಸಲು ಶುರುವಾಗುತ್ತದೆ. ಆದರೆ ಇವರಿಗೆ ಅದನ್ನೇರಿ ಸೋತ ರಾವಣನ ನೆನಪೇ ಆಗದಿರುವುದು ದುರಾದೃಷ್ಟ.
ಆ ರಾವಣನೂ ಹಾಗೇ. ಮನುಷ್ಯ ಒಳ್ಳೆಯವನೇ ಅಂತೆ. ಆದರೆ ಸೀತೆಗೆ ಕೈಚಾಚಿ ಗ್ರಹಚಾರ ಕೆಡಿಸಿಕೊಂಡ. ಅವನು ಅವನಷ್ಟಕ್ಕೇ ಇದ್ದಿದ್ದರೆ ಈ ಎಲ್ಲಾ ರಾಮಾಯಣವೇ ಇರುತ್ತಿರಲಿಲ್ಲ. ಆ ರಾವಣನಿಗೇನೋ ಶ್ರೀರಾಮನಿದ್ದ. ಆದರೆ ಗಾಂಧಿ ತಾತನ ಕನಸಾದ ನಮ್ಮ ರಾಮರಾಜ್ಯದಲ್ಲಿ ಅವನೇ ಇಲ್ಲವಲ್ಲ. ಏನ್ಮಾಡೋದು, ಕಲಿಕಾಲ!
ಆದರೆ ಕಲಿಗಾಲದ ಕುಡುಕರಿಗೆ ಒಂದು ವಿಚಾರ ಗೊತ್ತಿರಲಿ. ಕುಡಿದಾಗ ವ್ಯಕ್ತಿಯ ದೇಹ-ಮನಸ್ಸು ಪ್ರತಿಕ್ರಿಯೆ ನೀಡುವ ಸಮಯ ಗಣನೀಯವಾಗಿ ಇಳಿಯುತ್ತದೆ. ರಸ್ತೆಯಲ್ಲಿ ಒಂದು ನಾಯಿಮರಿ ಅಡ್ಡ ಬಂದರೂ ಸಾಕು, ಅದನ್ನು ನೋಡಿ ತಕ್ಷಣ ಬ್ರೇಕ್ ಹಾಕಬೇಕೆಂದು ಕೈ ಕಾಲಿಗೆ ಸಂದೇಶ ಕಳಿಸಲು ಮನಸ್ಸು ವೇಗವಾಗಿ ಓಡುವುದಿಲ್ಲ. ಕಣ್ಣುಗಳು ಸ್ಪಷ್ಟವಾಗಿ ನೋಡುವುದಿಲ್ಲ. ರಸ್ತೆಯ ತಿರುವೂ ನೇರವಾಗಿ ಕಂಡರೆ ಅಚ್ಚರಿಯಿಲ್ಲ.
ನಾವೆಲ್ಲ ಮನುಷ್ಯರು. ಸಮಾಜ ಜೀವಿಗಳು. ಕುಡಿದು ವಾಹನ ಓಡಿಸಿ ಯಾರ‍್ಯಾರಿಗೋ ಗುದ್ದಿ ಅವರ ಪ್ರಾಣಕ್ಕೂ ಸಂಚಕಾರ ತರುವುದು ಎಷ್ಟು ಸರಿ? ಜೀವ ತೆಗೆಯುವ ಹಕ್ಕು ನಮಗೆ ಇಲ್ಲ ಅಲ್ವ... ಏನಂತೀರಿ?