ಶಾಯಿ ಬರೆದ ಶಾಯರಿ...



ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ.. ಎಂಬ ಪದ್ಯದ ಸಾಲುಗಳನ್ನು ಕೇಳಿದ ಕೂಡಲೆ ಹೇಳಬಹುದು ಇದು ಜಯಂತ ಕಾಯ್ಕಿಣಿ ರಚನೆ ಎಂದು. ಸದ್ಯದ ಗೀತ ರಚನೆಕಾರರ ಪೈಕಿ ಕಾಯ್ಕಿಣಿಯವರಿಗೆ ಮಾತ್ರ ಇಂಥ ಕಲ್ಪನೆ ಮೂಡಲು ಸಾಧ್ಯ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ಪಡುತ್ತಾರೆ. ಅವಲೋಕಿಸಿದಾಗ ನಿಮಗೂ ಹೌದೆನನಿಸಬಹುದು. ಯಾಕೆಂದರೆ ಓಲೆ ಗೀಚಿ ಗೀಚಿ ಬೆರಳೆಲ್ಲ ಮಸಿಯಾಗುವ ಅನುಭವ; ಅಂದರೆ ಇಂಕ್ ಪೆನ್ನನು ಬಳಸಿದ ಅನುಭವ ಇಂದಿನ ಯುವ ಕವಿಗಳಿಗೆ ಕಡಿಮೆ.
ಈ ಹಾಡನ್ನು ಕಾಯ್ಕಿಣಿ ಬಾಲ್ ಪೆನ್ನಿನಲ್ಲಿ ಬರಿದಿದ್ದಾಗಿರಲೂ ಬಹುದು. ಆದರೆ ಅವರಿಗೆ ಶಾಯಿ ಪೆನ್ನಿನಲಿ ಬರೆದ ಮಧುರಾತಿ ಮಧುರ ನೆನಪುಗಳು ಪೆನ್ನಿನೆಳಗಿನ ಇಂಕಿನಂತೆ ಹಸಿಯಾಗಿಯೇ ಇರುವುದು ಖಂಡಿತ. ಆ ಕಾಲಕ್ಕೆ ಬಾಲ್ ಪೆನ್ನುಗಳು ಅಷ್ಟಾಗಿ ಪ್ರಚಲಿತದಲ್ಲಿ ಇರಲಿಲ್ಲ.
ಹೀಗೊಂದು ಪ್ರಸ್ತಾಪ ಮಾಡಲು ಕಾರಣವಿಷ್ಟೆ. ನೀವೊಮ್ಮೆ ಈಗಿನ ಬರೆಯುವ ಮಕ್ಕಳ ಕೈಗಳನ್ನು ಹಾಗೇ ಸುಮ್ಮನೆ ಗಮನಿಸಿ, ಬೆರಳುಗಳಲ್ಲಿ ಇಂಕಿನ ಗುರುತುಗಳು ಹುಡುಕಿದರೂ ಸಿಗುವುದಿಲ್ಲ. ನೀವು ಕಲೆ ಹುಡುಕ್ತಾನೇ ಇರ‍್ತೀರ. ಹೌದು, ಇಂದಿನ ಮಕ್ಕಳ ಬಳಿ ಇಂಕ್ ಪೆನ್ನೇ ಇರುವುದಿಲ್ಲ. ಅವರ ಬರಹ ಮೂಡುವುದೇನಿದ್ದರೂ ಬಾಲ್ ಪೆನ್ನುಗಳಿಂದ. ಅವುಗಳಿಗೆ ಇಂಕ್ ತುಂಬಿಸುವ ಜಂಜಾಟವಿಲ್ಲ, ಕೆಲವಕ್ಕೆ ರೀಫಿಲ್ಲೂ ಹಾಕಬೇಕಾಗಿಲ್ಲ; ಬಳಸಿ ಬಿಸುಟಿದರಾಯಿತು.
ಪೆನ್ನುಗಳ ಕುರಿತ ಜಾಹೀರಾತುಗಳನ್ನೊಮ್ಮೆ ಸುಕ್ಷ್ಮವಾಗಿ ಗಮನಿಸಿ - ಸರ್ವಂ ಬಾಲ್ ಪೆನ್ನುಮಯಂ. ಅಪರೂಪಕ್ಕೊಮ್ಮೊಮ್ಮೆ ಕಾಣುವ ಪಾರ್ಕರ್ ಪೆನ್ನಿನ ಜಾಹೀರಾತಿನಲ್ಲಿ ಬಾಲ್ ಪೆನ್ನಿನ ಬಗಲಲ್ಲಿ ಇರಲಿ ಎಂದು ಒಂದು ಇಂಕ್ ಪೆನ್ನಿನ ಚಿತ್ರವೂ ಇರುವುದನ್ನು ಕಾಣಬಹುದಷ್ಟೆ.
ಪೆನ್ನಿನ ಇತಿಹಾಸವನ್ನು ಗಮನಿಸಿದರೆ ಬಾಲ್ ಪೆನ್ನಿನ ಅನ್ವೇಷಣೆಯಾದದ್ದು ಸೇನೆಯಲ್ಲಿ ಬಳಕೆಯ ಉದ್ದೇಶಕ್ಕಾಗಿ - ಭೂಪಟದ ಅಲ್ಲಲ್ಲಿ ಗುರುತು ಹಾಕಲು ಮತ್ತು ಕೆಲವು ಸಂಕ್ಷಿಪ್ತ ವಿವರ ಬರೆಯಲು. ಅಲ್ಲಿ ಯುದ್ಧ ಯೋಜನೆ ನಡೆಯುವ ಅಷ್ಟೂ ಹೆತ್ತು ಮುಚ್ಚಳ ಹಾಕದೆ ಇದ್ದರೂ ಒಣಗದ ತುದಿಯ ಅಗತ್ಯವಿದೆ ಮತ್ತು ಇಂಕಿನ ಸಾಗಾಟ-ಸಂಗ್ರಹವೂ ಕಷ್ಟ. ಸೇನೆಯಲ್ಲಿನ iಟಿsಣಚಿಟಿಣ ಅಗತ್ಯ ಹಾಗೂ ತುರ್ತು ಬಳಕೆ ಬಾಲ್ ಪೆನ್ನಿನ ಆವಿಷ್ಕಾರಕ್ಕೆ ಮುಖ್ಯ ಕಾರಣ.
ಆದರೆ ಇಂಥ ಗುಣಗಳಿಂದ ಬಾಲ್ ಪೆನ್ನು ಬಹು ಬೇಗ ಜನಸಾಮಾನ್ಯರ ಕೈ ಸೇರಿತು. ಇಂಕ್ ಪೆನ್ನಿನ ವಾಕರಿಕೆ ಬರುವ ಖಾಯಿಲೆ ಇದಕ್ಕಿಲ್ಲ. ಆಗಾಗ ತುಂಬಿಸಬೇಕೆನ್ನುವ ಖಯಾಲಿಯೂ ಇದಕ್ಕಿಲ್ಲ. ಬೆರಳು ಮತ್ತು ಅಂಗಿ ಶುಭ್ರ-ಸುಂದರ.
ಆದರೆ ಬಾಲ್ ಪೆನ್ನಿಗೊಂದು ಭಯಂಕರ ದುರ್ಗುಣವಿದೆ. ಅದು ಅಲ್ಪಾಯುಷಿ. ಬಳಸಿ ಬಿಸಾಡುವ ಕಾರಣದಿಂದ ಬರಹಗಾರನಿಗೆ ಪೆನ್ನಿನ ಮೇಲೊಂದು ಪ್ರೀತಿಯೇ ಬೆಳೆಯದಂತೆ ಮಾಡುತ್ತದೆ. ನೆನಪಿರಲಿ, ದೊಡ್ಡ ದೊಡ್ಡ ಗೆಲುವುಗಳಿಗಿಂತ, ಮಹತ್ ಸಾಧನೆಗಳಿಗಿಂತ ಹೆಚ್ಚಾಗಿ ಮಾನವನ ಮನಸ್ಸು ಸಂತೋಷ ಕಂಡುಕೊಳ್ಳುವುದು ಸಣ್ಣ-ಸಣ್ಣ ವಿಚಾರಗಳಲ್ಲಿ. ಒಂದು ಸುಂದರ ಮುಂಜಾನೆ; ಮಿಂಚಿ ಮರೆಯಾಗುವ ಅವಳದೊಂದು ಕಿರು ನಗೆ - ಇಂಥವೇ ಅಲ್ಲವೆ ನಮ್ಮನ್ನು ನಿರಂತರವಾಗಿ ಜೀವಂತಿಕೆಯಿಂದ ತುಂಬಿರುವಂತೆ ಪ್ರೇರೇಪಿಸುವುದು. ಸುಖ ಎಂದರದು ಪೆಕೇಟಿನಲ್ಲಿ ಸಿಗುವ ಸಿದ್ದ ಆಹಾರವಲ್ಲ, ಅದು ಗಂಗಾ ನದಿಯಂತೆ; ಅಲ್ಲಿ ಸದಾ ಹಿರಿವು ಇರಲೇಬೇಕು.
ಪೆನ್ನಿನ ಮೇಲೆ ಪ್ರೀತಿ ಹುಟ್ಟಿದಾಗ ಹಾಗೆಯೇ. ಪೆನ್ನಿನ ಮೇಲಣ ಪ್ರೀತಿಯೂ ಅವಳೆಡೆಗಿನ ಪ್ರೀತಿಯಷ್ಟೇ ಉತ್ಕಟ, ತಾಜಾ. ಅದಕ್ಕೆ ದಿನವೂ ಶಯಿ ತುಂಬಿಸುವುದು, ವರೆಸಿ ಅದನ್ನು ಫಳ ಫಳ ಹೊಳೆಯುವಂತೆ ಮಾಡುವುದು, ಅಪ್ಪಿ ತಪ್ಪಿ ಕೈ ಜಾರಿ ಬೀಳದಂತೆ ಎಚ್ಚರ ವಹಿಸುವುದು. ಹೌದು, ಪೆನ್ನೂ ಪ್ರೇಯಸಿಯಂತೆ.
ನಿಬ್ಬೇ ಆಭರಣ, ಮಚ್ಚಳವು ಕಿರೀಟ
ಬಳುಕುತ್ತ ಮೂಡುವ ಅಕ್ಷರಗಳು
ಅಳಿಸಲಾರದ ಹೆಜ್ಜೆ ಗುರುತುಗಳು.
ಬರಹದ ಅಂದದ ದೃಷ್ಟಿಯಿದ ನೋಡಿದಾಗಲೂ ಅಷ್ಟೆ. ಎಂದೂ ಇಂಕ್ ಪೆನ್ನಿನ ಬರಹವೇ ಸುಂದರ. ಒತ್ತಡವಿಲ್ಲದೆ ಮುಂದೆ ಮುಂದೋಡುವ ಇದರ ಸೊಬಗೇ ಸೊಬಗು. ಇದಲ್ಲದೆ ಕೈ ಬರಹಕ್ಕೂ ವ್ಯಕ್ತಿತ್ವಕ್ಕೂ ನೇರಾ ನೇರ ಸಂಬಂಧವಿದೆಯೆಂದು ಕೈಬರಹ ವಿಮರ್ಷಕರ ಅಭಿಪ್ರಾಯ. ಹೆಚ್ಚು ಒತ್ತಿ ಬರೆಯುವವರು ಸದಾ ಒತ್ತಡದಲ್ಲಿಯೇ ಬದುಕುತ್ತಿರುತ್ತಾರೆ. ಹಾಗಾಗಿಯೇ ಏನೋ ಈಗಿನವರು ಒತ್ತಡದಲ್ಲಿಯೇ ಜೀವಿಸುವುದು.
ನಿಮ್ಮ ಕೈಯಲ್ಲಿರುವ ಬಾಲ್ ಪೆನ್ನನ್ನು ಬದಿಗಿರಿಸಿ ಅಲ್ಲೊಮ್ಮೆ ಇಂಕ್ ಪೆನ್ನನ್ನಿಟ್ಟು ನೋಡಿ. ಸ್ವಲ್ಪವೇ ದಿನಗಳಲ್ಲಿ ಅದು ನಿಮಗೆ ಹಿಡಿಸಿಬಿಡುತ್ತದೆ. ಅದರೊಂದಿಗೊಂದು ಬಾಂಧವ್ಯವೂ ಏರ್ಪಡುತ್ತದೆ. ಮತ್ತು ಇಂಕ್ ಪೆನ್ನು ಮರು ಬಳಕೆ ಮಾಡಬಹುದಾದ್ದರಿಂದ, ಪ್ಲಾಸ್ಟಿಕ್ ಬಳಕೆ ಕಡಿಮೆ ಇರುವುದರಿಂದ ಅದು ಪರಿಸರ ಸ್ನೇಹಿಯೂ ಹೌದು.