ಈ ದಶಕದಿ "ಕಾಣೆಯಾದವರ ಬಗ್ಗೆ ಪ್ರಕಟಣೆ"
ಪ್ರತಿ ವರ್ಷದಂತೆ ಈ ವರ್ಷವೂ ಹೊಸ ವರ್ಷ ಬರುತ್ತಿದೆ. ಅದೂ ಭರ್ತಿ ೩೬೫ ದಿನಗಳ ನಂತರ. ’ನಾನು ಇಂದಿನಿಂದ ಸಿಗರೇಟು ಸೇದುವುದಿಲ್ಲ’, ’ಇಂದಿನಿಂದ ಕೋಪ ನಿಯಂತ್ರಿಸುತ್ತೇನೆ’, ’ತೂಕ ಇಳಿಸುತ್ತೇನೆ’ ಎಂದು ಪ್ರತಿ ಹೊಸ ವರ್ಷದ ದಿನ ಪ್ರತಿಜ್ಞೆ ಮಾಡಿದಂತೆ ಈ ವರ್ಷವೂ ಪ್ರತಿಜ್ಞಾ ವಿಧಿ ಸ್ವೀಕರಿಸುವ ಆರಂಭ ಶೂರರು ಸುತ್ತ ಮುತ್ತ ಹಲವರಿರುತ್ತಾರೆ. ಇಂಥವರು ಪ್ರತಿ ವರ್ಷವೂ ’ರಾಜ್ಯದ ಜನತೆ, ಮಠಾಧೀಶರ’ ಮೇಲೆ ಪ್ರಮಾಣ ಮಾಡಿ ದೊಡ್ಡ ಮಾತು ಆಡುತ್ತಾರೆ.
ವರ್ಷದ ಮೊದಲ ದಿನ ರಜ ಹಾಕದೆ ನೀಯತ್ತಿನಿಂದ ಕಾಯಕ ಮಾಡುವುದು ಕೆಲವರ ನಿಲುವು. ಇದಕ್ಕೆ ವ್ಯತಿರಿಕ್ತ ಮತ್ತೊಂದು ವರ್ಗವಿದೆ. ಅವರದು ನಡುರಾತ್ರಿಯಲ್ಲಿ ಉತ್ಕಟ ಆಚರಣೆ. ಡಿಸೆಂಬರ್ ೩೧ರ ರಾತ್ರಿ ಬಾರ್ ಹೊಕ್ಕು ಇಡೀ ವರ್ಷದ ಭಾರ ಇಳಿಸು ಭಾರತೀಯರಿವರು. ಎರಡು ವರ್ಷಕ್ಕೆ ಹಿಂದೆ ಪಂಚತಾರಾ ಹೊಟೆಲೊಂದು ಮಲ್ಲಿಕಾ ಶೆರಾವತ್ ನೈಟ್ ಆಚರಿಸಿ ಟೈಟ್ ಆದವರಿಗೆಲ್ಲ ಪಂಚ್ ನೀಡಿತ್ತು. ಕಳೆದ ವರ್ಷ ಭಯೊತ್ಪಾದಕ ಧಾಳಿ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಅದು ಪುನರಾವರ್ತನೆ ಆಗಲಿಲ್ಲ. ಈ ವರ್ಷ ಬಿಪಾಶಾನಂತಹ ತಾರೆಯರು ಈಗಾಗಲೇ ಪಂಚತಾರಾ ಹೋಟೆಲ್ಲಿನ ನೈಟಿಗೆ ಬುಕ್ ಆಗಿದ್ದಾರಂತೆ.
ಇವೆಲ್ಲ ಐಲುಗಳ ಮಧ್ಯದಲ್ಲಿ ನನ್ನಂತಹ-ನಿಮ್ಮಂತಹ ಕೆಲವು ಸಾತ್ವಿಕರಿರುತ್ತಾರೆ. ಅವರಿಗೆ ದಶಂಬರ ೩೧ಕ್ಕೂ ಜನವರಿ ೧ಕ್ಕೂ ಇರುವ ವ್ಯತ್ಯಾಸ ಗೋಡೆಯ ಮೇಲೆ ತೂಗುವ ಕ್ಯಾಲೆಂಡರು ಮತ್ತು ಬರೆಯುವ ಡೈರಿ ಮಾತ್ರ. ’ಅಷ್ಟಕ್ಕೂ ಅದನ್ನು ಹೊಸ ವರ್ಷ ಅಂತ ಹೇಳ್ದೋರ್ ಯಾರು? ಹೋಗ್ ಹೋಗ್ರಿ, ಹೊಸ ವರ್ಷ ಬರೋದು ಯುಗಾದಿಗೆ. ಬಂದ್ಬುಟ್ರು ದೊಡ್ದಾಗಿ...’ ಅಂತ ಹೇಳೋ ಈ ಮನಸ್ಥಿತಿಯವರೊಂದಿಗೆ ವಾದಕ್ಕಿಳಿಯುವುದು ವ್ಯರ್ಥ. ನಮಗೆ ಹೊಸ ವರ್ಷ ಜನವರಿಗೋ ಯುಗಾದಿಗೋ ಎಂಬ ಗಹನ ವಿಚಾರದ ಫೈಲನ್ನು ಸದ್ಯದ ಮಡ್ಡಿಗೆ ಮುಚ್ಚಿ ಹಾಕೋಣ. ಇದನ್ನು ಕ್ಯಾಲೆಂಡರ್ ಮಟ್ಟಿಗಾದರೂ ಹೊಸ ವರ್ಷ ಅಂತ ಗುರುತು ಹಾಕಿಕೊಳ್ಳೋಣ.
೧೯೯೯ ರಿಂದ ೨೦೦೯ರ ಈ ಹತ್ತು ವರ್ಷದಲ್ಲಿ ಆದ ಒಂದಷ್ಟು ಮಹತ್ವದ ಬದಲಾವಣೆಗಳ ಕುರಿತು ಒಂದು ಕ್ಷ-ಕಿರಣ.
ಮೊನ್ನೆ ಮೊನ್ನೆ ಯಾವುದೋ ಕೆಸೆಟ್ ಕೇಳಿದೆ. ಭಾರೀ ಒಳ್ಳೇ ಹಾಡು ಅಂತ ನಾವೇ ಕೆಲವೊಮ್ಮೆ ಹೇಳುತ್ತೇವೆ. ಆದರೆ ಸ್ವಲ್ಪ ಆಲೋಚಿಸಿ, ಅದು ಕೆಸೆಟ್ಟೋ ಸಿಡಿಯೋ? ಈಗ ಕೆಸೆಟ್ಟಂಬ ಧ್ವನಿ ಸುರುಳಿ ಸುತ್ತಿ ಮಲಗಿದೆ. ನಾವೀಗ ಹಾಡು ಕೇಳುವುದು ಟೇಪ್ ರೆಕಾರ್ಡರಿನಲ್ಲಲ್ಲ. ಆ ಜಾಗಕ್ಕೆ ಈಗ ಕಂಪ್ಯೂಟರು, ಮೊಬೈಲು, ಐಪಾಡುಗಳು ಬಂದು ಕೂತಿವೆ. ಮೈಸೂರು ಅನಂತಸ್ವಾಮಿ, ಯಶವಂತ ಹಳಿಬಂಡಿ, ಸಿ.ಅಶ್ವತ್,ಪಿ.ಕಾಳಿಂಗರಾಯರು, ಯೇಸುದಾಸ್, ಎಸ್ಪಿಬಿ, ಪಿಬಿಎಸ್, ಮುಖೇಶು, ಕಿಶೋರ್ ಕುಮಾರು ಅಲ್ಲದೆ ಮೈಕೆಲ್ ಜಾಕ್ಸನ್ನೂ ನಮ್ಮ ಮೊಬೈಲಿನಲ್ಲಿ ಬಂದು ಕೂತಿದ್ದಾರೆ. ಗುಂಡಿ ಒತ್ತಿದ ಕೂಡಲೆ ಹಾಡಲು ಶುರುಮಾಡಿತ್ತಾರೆ. ಅರೆ! ಒಂದು ದಶಕದಲ್ಲಿ ಏನೆಲ್ಲಾ ಆಗಿ ಹೋಯ್ತಲ್ಲ...
ಸಂಗೀತದಲ್ಲಿ ಹೀಗಾದರೆ ಕಂಪ್ಯೂಟರ್ ಕ್ಷೇತ್ರದಿಂದ ಮರೆಯಾದ ಒಂದು ಸಾಧನವಿದೆ. ಅದು ಪ್ಲಾಪಿ. ಅದರ ಸಾಮರ್ಥ್ಯ ಜುಜುಬಿ ೧.೪೪ ಎಂಬಿ. ನನ್ನ ಕೆಲವು ಆರಂಭದ ಬರಹಗಳನ್ನು ಪ್ಲಾಪಿಯಲ್ಲಿ ಹೆಮ್ಮೆಯಿಂದ ಸಂಗ್ರಹಿಸಿ ಇಟ್ಟದ್ದು ನನಗೆ ಈಗಲೂ ಚೆನ್ನಾಗಿ ನೆನಪಿದೆ. ಈಗ ಸಿಡಿ, ಡಿವಿಡಿ, ಯುಎಸ್ಬಿ ಡ್ರೈವ್ಗಳು ಪಾಪದ ಪ್ಲಾಪಿಯನ್ನು ಹೇಳ ಹೆಸರಿಲ್ಲದಂತಾಗಿಸಿದೆ. external hard discನ ೫೦೦ ಜಿಬಿಯೆದುರು ೧.೪೪ ಎಂಬಿ ಕೇಳುವಾಗ ಹ್ಹೆ ಹ್ಹೆ ಹ್ಹೆ... ಆದರೆ ಅವತ್ತು ಕಳಕೊಂಡರೆ ಒಂದು ಪೆಟ್ಟಿಗೆ ೧.೪೪ ಎಂಬಿ ಮಾತ್ರ ಕಳಕೊಳ್ಳುತ್ತಿದ್ದೆವು. ಅದೇ ಈಗ ಹೋದರೆ ಒಮ್ಮೆಗೇ ೫೦೦ ಜಿಬಿ! ರಾಮ ರಾಮ!!
ಈ ಹತ್ತು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮಿಂದ ದೂರವಾದ ಒಂದುಷ್ಟು ಸಂಗತಿಗಳನ್ನು ಮೊನ್ನೆ ’ದಿ ಗಾರ್ಡಿಯನ್’ ಪತ್ರಿಕೆ ಪಟ್ಟಿ ಮಾಡಿ ಪ್ರಕಟಿಸಿತ್ತು. ಅಲ್ಲಿನ ಕೆಲವನ್ನು ನೋಡಿದಾಗ ಅರರೆ ಹೌದಲ್ವ ಎಂದು ಅನಿಸಿದರೆ ಇನ್ನು ಕೆಲವು ಓದಲು ಮಜಬೂತಾಗಿದೆ.
ಕಪ್ಪು ಖಡ್ಗಮೃಗ ಮತ್ತು ಧೃವಗ ಐಸು(polar ice cap)ಗಳನ್ನು ಕೇಳುವಾಗ ಮನಸ್ಸು ತನ್ನಿಂದ ತಾನೇ ಜಗತ್ತಿನ ಭವಿಷ್ಯದ ಬಗ್ಗೆ ಯೋಚಿಸಿ ಕೊಪೆನ್ಹೇಗನ್ನಿಗೆ ಒಂದು ಗಿರಕಿ ಹೊಡೆದು ಬರುತ್ತದೆ.
ಸೂಪರ್ ಸಾನಿಕ್ ವಿಮಾನ ಯಾನ, ಪ್ಯಾಕ್ಸ್ ಯಂತ್ರ (ನೀವು ಈಗಲೂ ಉಪಯೋಗಿಸುತ್ತಿರಬಹುದು, ಆದರೆ ಈಗ ಅಂಗಡಿಗೆ ಹೋಗಿ ಕೇಳಿದರೆ ನಿಮ್ಮನ್ನೊಮ್ಮೆ ಆಪಾದ ಮಸ್ತಕ ನೋಡುತ್ತಾರೆ), ಪ್ಲಾಟ್ ಟಿವಿ (ಈಗ ತೆಳುವಾದ ಎಲ್ಸಿಡಿಗಳು ಬಂದು ತುಂಬಿದೆ) ಎಲೆಕ್ಟ್ರಾನಿಕ್ ವಿಬಾಗದಿಂದ ಮರೆಯಾದ ಪ್ರಮುಖ ವಸ್ತುಗಳು.
ಇವುಗಳ ನಡುವೆ ಭಾರತೀಯರಾದ ನಮ್ಮ ಮಟ್ಟಿಗೆ ಹೊಸ ಸೇರ್ಪಡೆ ಮರೆಯಾದ ಹಮಾರಾ ಬಜಾಜ್. ಬಾರೆ ರಾಜಕುಮಾರಿ/ ನಾವು ಹೋಗೋಣ ಜಂಬೂ ಸವಾರಿ/ ನಮ್ಮ ಹಳೆಯ ಸ್ಕೂಟರನ್ನೇರಿ ಎಂದು ’ಅವಳನ್ನು’ ಕುಳ್ಳಿರಿಸಿಕೊಂಡು ಒಂದು ರೌಂಡ್ ಹೊಡೆಯಲಾದರೂ ಒಂದು ಸ್ಕೂಟರಿದ್ದಿದ್ದರೆ ಚೆನ್ನ ಎಂದು ಅನಿಸುತಿದೆ ಯಾಕೋ ಇಂದು.
ನಮ್ಮ ಟೆಕ್ಕಿಗಳು, ಮ್ಯಾನೇಜ್ಮೆಂಟ್ ಗುರುಗಳು ಮರೆಯಲಾರದ ಒಂದು ’ಮರೆಯಾದ ಸಾಮ್ರಾಜ್ಯ’ ಅಮೆರಿಕಾದ ಲೀಮನ್ ಬ್ರದರ್ಸ್. ಅದನ್ನು ಮರೆಯುವವರುಂಟೆ? ವಿಶ್ವದ ಕುಸಿದ ಅರ್ಥ ವ್ಯವಸ್ಥೆಯ ಮೊದಲ ಇಸ್ಪೀಟೆಲೆ ಅಲ್ಲವೇ... ಆದರೆ ಗಮ್ಮತ್ತು ಅದಲ್ಲ. ಅಮೆರಿಕಾದ ಹಿಂದಿನ ಅಧ್ಯಕ್ಷ ಜಾರ್ಜ ಬುಷ್ಷನ್ನೂ ಜನ ಮರೆತಿದ್ದಾರಂತೆ. ಹೌದು ಪಬ್ಲಿಕ್ ಮೆಮೊರಿ ಬಹು ಅಲ್ಪ.
ಆದರೆ ಇವೆಲ್ಲವುಗಳ ಜತೆ ಜತೆಗೆ ನಾವು ಕಳೆದುಕೊಂಡ ಇನ್ನೂ ಒಂದು ಅಂಶ ಕೊಂಚ ಗಲಿಬಿಲಿ ಹುಟ್ಟಿಸುತ್ತದೆ. ಅಂತರಾಷ್ಟ್ರೀಯ ಬ್ಯಾಂಕುಗಳು ಲಾಭದ ಆಸೆಗೆ ಬಿದ್ದು ಕಂಡ ಕಂಡವರಿಗೆ ಕರೆದು ಕರೆದು ಸಾಲ ಕೊಟ್ಟು ಕೊನೆಗೆ ದುಡ್ಡಿಟ್ಟವರಿಗೆಲ್ಲ್ಲ ಮಕ್ಮಲ್ ಟೋಪಿ ಹಾಕಿತಲ್ಲ, ಅವೆಲ್ಲದರ ಪರಿಣಾಮವಾಗಿ ಈ ದಶಕದೊಂದಿಗೆ ನಾವು ಕಳಕೊಂಡ ಮತ್ತೊಂದು ಅಂಶ ’ನಂಬಿಕೆ’ ಛೆ! ಇದು ಬೇಕಿತ್ತ?