ಅವನು ವಿಮಾನದಲ್ಲಿ ಕುಳಿತಿದ್ದಾನೆ. ಹೆಚ್ಚಿನ ಏಕಾಂಗಿ ಯಾನಿಗಳಿಗಿರುವಂತೆ ಅವನಿಗೂ ಪಕ್ಕದಲ್ಲಿ ಎಂಥವರು ಬಂದು ಕೂರಬಹುದೆಂಬ ಕುತೂಹಲ. ಸುಂದರಿಯೊಬ್ಬಳು ಬಂದು ಕೂರಲಿ, ಮುಂದಿನ ಪಯಣದ ಮಟ್ಟಿಗಾದರೂ ಸಂಗಾತಿಯಾಗಲಿ ಎಂಬ ಮೌನ ಬಯಕೆ ಅವನದು.
ಅಷ್ಟರಲ್ಲಿ ತಕ್ಕ ಮಟ್ಟಿಗಿನ ತುಂಬು ಯವ್ವನದ ಹುಡುಗಿಯೊಬ್ಬಳು ಪಕ್ಕದ ಆಸನ ತುಂಬುತ್ತಾಳೆ. ಒಳಗೊಳಗೇ ಸಂತಸಪಡುತ್ತಾ ಇನ್ನೇನವನು ಅವಳನ್ನು ಮಾತಿಗೆಳೆಯಬೇಕು, ಅಷ್ಟರಲ್ಲಿ ಅದೇ ವಿಮಾನದ ಪಯಣಿಗ ಅವಳಪ್ಪ ಬಂದು ಹಿಂದಿನ ಸೀಟಿಗೆ ತೆರಳಲು ವಿನಂತಿಸುತ್ತಾನೆ. ಇವನಿಗೋ, ಪುನಃ ಮೌನ ಸಂಕಟ. ಆದರೂ ತನ್ನೊಳಗಿನ ಸಂಭಾವಿತ ಆ ಅಪ್ಪನ ಮನವಿ ಪುರಸ್ಕರಿಸಲು ಪ್ರೇರೇಪಿಸುತ್ತಾನೆ. ಒಲ್ಲದ ಮನಸ್ಸಿಂದಲೇ ಹಿಂದಿನ ಸೀಟಿಗೆ ತೆರಳಿದ ಅವನಿಗೆ ಅಚ್ಚರಿಯೋ ಅಚ್ಚರಿ; ಅಪರೂಪಕ್ಕೊಲಿದ ಕರ್ನಾಟಕ ರಾಜ್ಯ ಲಾಟರಿ.
ಹೊಸದಾಗಿ ಸಿಕ್ಕ ಸೀಟಿನ ಎರಡೂ ಬದಿಯಲ್ಲಿ ಹುಡುಗಿಯರು. ಆಗಿನ ಹುಡುಗಿಯದ್ದು ತುಂಬು ಯವ್ವನವಾದರೆ ಇವರಿಬ್ಬರದ್ದೂ ಉಕ್ಕಿ ಹರಿಯುವ ಯವ್ವನ. ಕೂರುತ್ತಿದ್ದಂತೆಯೇ ಪಕ್ಕದ "ಬೆಚ್ಚಗಿನ ಹುಡುಗಿ"ಯ ನಿದ್ರಿಸುತ್ತಿದ್ದ ತಲೆ ಇವನ ಹೆಗಲ ಮೇಲೆ!!
ಹೌದು, ಇದು ಟಾಟಾ ಡೊಕೊಮೊ Life can change in a second ಎಂದು ಹೇಳಿದ ರೀತಿ. ಇದು ಈಗಿನ ಜಮಾನ, ಮೊಬೈಲೆಂಬ ಮಾಂತ್ರಿಕ ಕ್ಷಣ ಕ್ಷಣದಲ್ಲಿ ಏನೆಲ್ಲಾ ಮಾಡುತ್ತಾನೆ! ಮೊದಲು ಕಾಲವೊಂದಿತ್ತು, ಟೆಲಿಫೋನ್ ಬುಕ್ ಮಾಡಿ ಐದು ವರ್ಷಗಳಷ್ಟು ಕಾಯಬೇಕಿತ್ತು. ಇನ್ಫೋಸಿಸ್ಸಿನ ಮುಂಬೈ ಕಚೇರಿಗೆ ಮೊದಲ ಫೋನ್ ಬರಲು ಬುಕ್ ಮಾಡಿ ಬರೋಬ್ಬರಿ ಎರಡು ವರ್ಷ ಕಾದಿದ್ದರು! ಈಗ ಇದು ಕಲ್ಪನೆಗೂ ದೂರ.
ಮೊಬೈಲ್ ಮಾಡಿದ ಕ್ರಾಂತಿ ಇದೆಯಲ್ಲ ಅದು ಶಾಂತಿ ಕ್ರಾಂತಿಯಂಥ ಚಿತ್ರಗಳಲ್ಲಿ ನಮ್ಮ ರವಿಚಂದ್ರನ್ ಮಾಡಿದ್ದಕ್ಕಿಂತಲೂ ದೊಡ್ಡದು ಮತ್ತು ಅದ್ಧೂರಿ. ಅದರಲ್ಲೂ ಬ್ಲ್ಯಾಕ್ ಬೆರಿ ಬರೀ ಮೊಬೈಲಷ್ಟೇ ಅಲ್ಲ, ಅದೊಂದು ಮಂತ್ರವಾದಿ. ಬಿಪಾಶಾಳ ಬ್ಲ್ಯಾಕ್ ಬ್ಯೂಟಿಯನ್ನೂ ಮೀರಿಸುವ ಶಕ್ತಿ ಬ್ಲ್ಯಾಕ್ ಬೆರಿಗಿದೆ.
ವಿಂಡೋಸ್ ೭ನ ಬ್ಲ್ಯಾಕ್ ಸ್ಕ್ರೀನ್ ಸಮಸ್ಯೆಗೆ ತಲೆಕೆಡಿಸಿಕೊಂಡಷ್ಟು ಮಂದಿ ಬ್ಲ್ಯಾಕ್ ಬೆರಿ ಬಗ್ಗೆ ಇನ್ನೂ ತಲೆ ಕೆಡಿಸಿಕೊಂಡಿಲ್ಲವೆಂದು ನೀವು ಹೇಳಬಹುದು. ಸರಿ. ನನ್ನದೂ ಅದೇ ಅಭಿಪ್ರಾಯ. ಬ್ಲ್ಯಾಕ್ ಬೆರಿ ನಮ್ಮ ಸಾಮಾನ್ಯ ಜನರ ಕೈಗಳಿಗೆ ಇನ್ನೂ ಬಂದಿಲ್ಲ. ಕೇವಲ ಟೆಕ್ಕಿಗಳು ಮತ್ತು ಹೈ-ಟೆಕ್ಕಿಗಳನ್ನು ಮಾತ್ರ ತಲುಪಿದೆ. ಅವರ ಪಾಲಿಗೆ ಬ್ಲ್ಯಾಕ್ ಬೆರಿ ಆಪ್ತ ಸಂಗಾತಿ. ಖಾಸಗಿ ಕಂಪೆನಿಗಳ ಸಿಇಒಗಳಿಗೆ ಖಾಸಾ ಜತೆಗಾರ್ತಿ.
ಅದ್ಸರಿ, ಆದರೆ ಈ ಬ್ಲ್ಯಾಕ್ ಬೆರಿಯಲ್ಲಿ ಪುರುಷರನ್ನು ಸೆಳೆಯಲು ಅಂಥಾದ್ದೇನಿದೆ ಎಂದು ನಿಮಗನಿಸಬಹುದು. ಇಲ್ಕೇಳಿ. ಬ್ಲ್ಯಾಕ್ ಬೆರಿಗೆ ಕಣ್ ಕುಕ್ಕುವ ಲುಕ್ಕಿದೆ, ಮೂಲೆ ಮೂಲೆಯೂ ನುಣುಪು, ಸದಾ ಕೇಳುವಂತಹ ಕಿವಿ ಇದೆ. ಮದುವೆಯಾದ ಮೇಲೆ ಅದು ದಪ್ಪಗಾಗುವುದಿಲ್ಲ ಮತ್ತು ಅದರ ಮೂಡು ತಿಂಗಳ ಅಷ್ಟೂ ದಿನ ಒಂದೇ ರೀತಿಯಿರುತ್ತದೆ! ಪುರುಷರ ಕಣ್ಸೆಳೆಯಲು, ಕೈ ಹಿಡಿಯಲು ಇವಿಷ್ಟು ಸಾಲದಾ...
ಸಿಇಒಗಳು ಎಷ್ಟರ ಮಟ್ಟಿಗೆ ಈ ನೂತನ ಸಂಗಾತಿಗೆ ದಾಸರಾಗಿದ್ದಾರೆಂದರೆ ಸೆಕ್ರೆಟರಿ ಮಿನಿ ಸ್ಕರ್ಟ್ ತೊಟ್ಟು, ಢಾಳಾಗಿ ಲಿಪ್ಸ್ಟಿಕ್ ಹಚ್ಚಿ ಸೆಳೆದರೂ ಇವರ ಮನಸು ಬ್ಲ್ಯಾಕ್ ಬೆರಿ ಬಿಟ್ಟು ಕದಲಲೊಲ್ಲದು. ಆದರೆ ಈ ಬೆಳವಣಿಗೆ ಅವರ ಹೆಂಡತಿಯರಿಗೆ ಖುಶಿಯನ್ನೇನೂ ನೀಡುತ್ತಿಲ್ಲ. ಬ್ಲ್ಯಾಕ್ ಬೆರಿ ದೆಸೆಯಿಂದ ಸಿಇಒ ಪತಿರಾಯರು ಧರ್ಮಪತ್ನಿಯನ್ನು ಸರಿಯಾಗಿ ಗಮನಿಸುತ್ತಿಲ್ಲವಂತೆ.
ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ನ sedition and prediction ಈ ಕುರಿತು ಒಂದು ಸಮೀಕ್ಷೆ ನಡೆಸಿತು. ಬ್ಲ್ಯಾಕ್ ಬೆರಿ ಬಳಸುವ ಸಿಇಒಗಳ ಹೆಂಡತಿಯರಲ್ಲಿ 76% ಜನ ತಮ್ಮ ಪತಿರಾಯರು ಬ್ಲ್ಯಾಕ್ ಬ್ಯೂಟಿಯೊಂದಿಗೆ ಡ್ಯೂಟಿ ನಡೆಸುವ ಬಗ್ಗೆ ಚಕಾರವೆತ್ತಿದ್ದಾರೆ. ಐವರಲ್ಲಿ ಮೂವರು ಸಿಇಒ ಪತ್ನಿಯರು ಪತಿರಾಯರ ಬ್ಲ್ಯಾಕ್ ಬೆರಿಯನ್ನು ಇಷ್ಟರಲ್ಲೇ ಪುಡಿಗೈವ ಗಾಢ ಚಿಂತನೆಯಲ್ಲಿದ್ದಾರಂತೆ. ರಜಾ ದಿನಗಳಲ್ಲೂ ಕಿರಿ ಕಿರಿ ಮಾಡುವ ಈ ಬೆರಿ ಅವರ ಪಾಲಿಗೆ ಸಹಿಸಲಾರದ ಸವತಿ.
ಪಾಪ. ಅಲ್ಲೊಬ್ಬ ಸಿಇಒನ ಹರೆಯದ ಮಗಳು ಅದ್ಯಾವನನ್ನೋ ಲವ್ ಮಾಡುತ್ತಿದ್ದಾಳಂತೆ. ಮಗ ಡ್ರಗ್ಸ್ ತೆಂಗೊಂಡು ಬರ್ಬಾದ್ ಆಗಿದ್ದಾನೆ. ಹೆಂಡತಿ ಡೈವೋರ್ಸ್ ನೀಡುವ ಇಂಗಿತದಲ್ಲಿದ್ದಾಳೆ. ಆದರೆ ಬೆರಿಯಲ್ಲಿ ಮುಳುಗೇಳುತ್ತಿರುವ ಆ ಆಸಾಮಿಗೆ ಇವ್ಯಾವುದರ ಪರಿವೆಯೇ ಇಲ್ಲ.
ಮೊದಲೆಲ್ಲ ಡೈವೋರ್ಸ್ ಗೆ ವಿವಾಹೇತರ ಸಂಬಂಧಗಳು ಹೆಚ್ಚಾಗಿ ಬುನಾದಿ ಹಾಕುತ್ತಿದ್ದರೆ ಈಗ ಅಲ್ಲಿ ಬ್ಲ್ಯಾಕ್ ಬೆರಿಯೂ ಬಂದು ಕೂತಿದೆ. ಅಲ್ಲ ಮತ್ತೆ. ಹೆಂಡತಿ ಜೊತೆ ಏಕಾಂತದಲ್ಲಿ ಕೋಣೆಯೊಳಗೆ ಲೈಟ್ ಆರಿಸಿ ಫ್ಯಾನ್ ಹಾಕಿ ಅಡ್ಡಾದಾಗ ಇದ್ದಕ್ಕಿದ್ದಂತೆಯೇ ಬ್ಲ್ಯಾಕ್ ಬೆರಿ ಈ-ಮೇಲ್ ಬಂತು ಅಂತ ಬೊಬ್ಬಿಟ್ಟರೆ ಪಾಪ ಆ ಫೀಮೇಲಿಗೆ ಹೇಗಾಗಬೇಡ?
ಸದ್ಯ. ನನ್ನ ಕೈಯಲ್ಲಂತೂ ಬ್ಲ್ಯಾಕ್ ಬೆರಿಯಿಲ್ಲ. ಅಷ್ಟರ ಮಟ್ಟಿಗೆ ನಾನು ಸೇಫ್. ನನಗೆ ಹೆಂಡತಿಯೂ ಇಲ್ಲದಿರುವುದರಿಂದ ನಾನು ಸೇಫೋ ಸೇಫು.
(ವಿಸೂ: ಮಹಿಳಾ ಸಿಇಒಗಳ ಕಥ ಇಲ್ಲಿ ಪ್ರಸ್ತಾಪಿಸದೆ ಇರುವುದಕ್ಕೆ ಕ್ಷಮಿಸಿ. ಅವರಿಂದ ಪತಿರಾಯರು ಬೇಸತ್ತ ಯಾವುದೇ ಗಂಭೀರ ಸುದ್ದಿ ಇದುವರೇಗೂ ಬಂದಿಲ್ಲ. ಪುರುಸೊತ್ತಿದ್ದರೆ ನೀವೇ ಒಂದು ಸಮೀಕ್ಷೆ ಮಾಡ್ರಲ್ಲ...)