ಝೋರ್ ಕಾ ಝಟ್ಕಾ... ಧೀರೇ ಸೆ...



ಇತ್ತ ರೇಣುಕಾಚಾರ್ಯ ಎಂಬ ಏಕ ಸದಸ್ಯ ಬಣಕ್ಕೆ ಮಂತ್ರಿಗಿರಿ ದಯಪಾಲಿಸಿದ್ದು ತೀರ್ವ ಅಪಸ್ವರಕ್ಕೆ ಕಾರಣವಾಗಿದೆ. ಇಷ್ಟು ದಿನ ರಾಜ್ಯ ಸರಕಾರದ ಶೃತಿ ತಪ್ಪುತ್ತಿದೆ ಎಂದು ’ಪ್ರಜ್ಞಾವಂತ ಮತದಾರರು’ ಮಾತಾಡಿಕೊಳ್ಳುತ್ತಿದ್ದರು. ಆದರೆ ಈಗ ಬರಿ ಶೃತಿಯಷ್ಟೇ ಅಲ್ಲ ತಾಳವೂ ತಪ್ಪಿದೆ ಎಂದು ಜನತೆಗೆ ಅರಿವಾಗಿದೆ. ಇದಕ್ಕೆಲ್ಲ ಕಾರಣ ನರ್ಸ್ ಜಯಲಕ್ಷ್ಮಿ ಖ್ಯಾತಿಯ ಹೊನ್ನಾಳಿ ಶಾಸಕ, ಹುಟ್ಟು ಹೋರಾಟಗಾರ, ಪುಂಡರ ಪುಂಡ, ಚಂಡ ಪ್ರಚಂಡ ರೇಣುಕಾಚಾರ್ಯ.
ಆಂಧ್ರದ ಬೆಂಕಿಗೆ ತುಪ್ಪ:

ಅತ್ತ ಆಂಧ್ರದ ರಾಜಭವನದಿಂದ pussy cat pussy cat where have you been ಎಂದು ನರ್ಸರಿ ಹಾಡು ಕೇಳಿಬಂದಿದೆ. ಅಲ್ಲಿನ ರಾಜ್ಯಪಾಲ ತಿವಾರಿ ಸಿಗಬಾರದ ರೀತಿಯಲ್ಲಿ, ಸಿಗಬಾರದ ಭಂಗಿಯಲ್ಲಿ, ಸಿಗಬಾರದ ವಯಸ್ಸಿನಲ್ಲಿ ಹೆಂಗಸರೊಂದಿಗೆ ಕೆಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆಂಧ್ರದ ಎಬಿಎನ್ ಆಂಧ್ರ ಜ್ಯೋತಿ ಡಿ.೨೫ರ ಬೆಳಗ್ಗೆ ಈ ರಾಜರಹಸ್ಯವನ್ನು ಬಿತ್ತರಿಸಿ ನೋಡುಗರಿಗೆ ಚಳಿಗಾಲದ ಭರ್ಜರಿ ಮಸಾಲ ನೀಡಿದೆ.
ಕೂಡಲೇ ಎಚ್ಚೆತ್ತ ರಾಜಭವನ ದೃಶ್ಯ ಪ್ರಸಾರ ನಿಲ್ಲಿಸಲು ಯೋಜನೆ ಹಾಕಿತು. ಹೈಕೋರ್ಟ್ ಮೊರೆ ಹೊಕ್ಕು ದೃಶ್ಯ ಪ್ರಸಾರ ತಡೆ ಹಿಡಿಯಿತು. ರಾಜಭವನದಲ್ಲಿ ಇದ್ದ ಬದ್ದ ಬೆಡ್‌ಶೀಟುಗಳನ್ನೆಲ್ಲ ಹೊತ್ತು ತಂದ ಅಧಿಕಾರಿಗಳು ರಾಜ್ಯಪಾಲರ ಮಾನ ಮುಚ್ಚಲು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಅಷ್ಟರಲ್ಲಿ ಹರಾಜು ಆಗಬಾರದ್ದು ಹರಾಜಾಗಿ ಹೋಗಿತ್ತು. ಇಷ್ಟೆಲ್ಲ ಆದ ಮೇಲೆ ಪಾಪ ತಿವಾರಿಗೆ ಭಯಂಕರ ಸುಸ್ತಾಗಿರಬೇಕು. ಅಲ್ರೀ ಮೂರ್ಮೂರ್ ಜನ ಹುಡ್ಗೀರು, ಅದೂ ಒಂದೇ ಸಲಕ್ಕೆ ಅಂದ್ರೆ ಎಂಥವರೂ

ಸುಸ್ತಾಗಲೇಬೇಕು, ಸಹಜ. ಹಾಗಾಗಿ ಕೊನೆಯಲ್ಲಿ ನಾರಾಯಣ ದತ್ತ ತಿವಾರಿ ’ಆರೋಗ್ಯ’ದ ಕಾರಣ ನೀಡಿ ರಾಜೀನಾಮೆ ಕೊಟ್ಟು ಖಾದಿ ಟೋಪೀಲಿ ಬೆವರೊರೆಸಿಕೊಂಡರು. ಏನೇ ಆಗ್ಲಿ ನಮಗೆ ಆರೋಗ್ಯ ಮುಖ್ಯ ನೋಡಿ...
ಮತ್ತೆ ನೋಡಿದರೆ ತಿವಾರಿಯವರ ಬಗ್ಗೆ ಈ ಹಿಂದೆಯೇ ಅಂಬರೀಷ್ ಕಾಲದ ಸಿನಿಮಾ ಸ್ಟೈಲಿನ ಕಥೆಯೊಂದು ಬಂದು ಹೋಗಿದೆ.
ವಿಲನ್ ವಜ್ರಮುನಿ ಒಂದಾನೊಂದು ಕಾಲದಲ್ಲಿ ಹೆಣ್ಣೆಬ್ಬಳನ್ನು ವಂಚಿಸಿರುತ್ತಾನೆ. ಆ ವಂಚನೆಯ ಉತ್ತುಂಗ ಸ್ಥಿತಿಯಲ್ಲಿ ನಮ್ಮ ನಾಯಕ ಜನಿಸಿರುತ್ತಾನೆ. ಮುಂದೆ ಬೆಳೆದು ಯುವಕನಾದಾಗ ಅವನಿಗೆ ತನ್ನ ಜನ್ಮ ರಹಸ್ಯ ತಿಳಿಯುತ್ತದೆ. ನ್ಯಾಯಕ್ಕಾಗಿ ಹೋರಾಡಿ, ಕೂಗಾಡಿ, ಹೊಡೆದಾಡಿ ಕೊನೆಗೆ ಹದಿನೈದು ನಿಮಿಷಗಳ ಕ್ಲೈಮ್ಯಾಕ್ಸಿನಲ್ಲಿ ಆತ ನ್ಯಾಯ ದಕ್ಕಿಸಿಕೊಳ್ಳುತ್ತಾನೆ.
ತಿವಾರಿ ಜೀವನದಲ್ಲೂ ಅಂಥದ್ದೇ ಘಟನೆ ನಡೆದಿತ್ತಂತೆ. ಹೀಗೆಂದು ಹೇಳಿದವನು ೨೯ವರ್ಷದ ರೋಹಿತ್ ಶೇಖರ್ ಎಂಬ ಯುವಕ. ತಿವಾರಿಯೇ ನನ್ನ ತಂದೆ ಎಂದು ಇವನು ದೆಹಲಿ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಹೈಕೋರ್ಟು ಇದನ್ನು ಒಪ್ಪಲಿಲ್ಲ. ರೋಹಿತ್ ಶೇಖರ್ ೧೯೯೭ರಲ್ಲಿಯೇ ೧೮ನೆ ವಯಸ್ಸಿಗೆ ಕಾಲಿಟ್ಟಿದ್ದ. ಈ ವಿಚಾರವಾಗಿ ಆತ ಮುಂದಿನ ಮೂರು ವರ್ಷಗಳ ಒಳಗೇ ಅರ್ಜಿ ಸಲ್ಲಿಸಿದ್ದಿದ್ದರೆ ಪರಿಗಣಿಸಬಹುದಿತ್ತು. ಇಷ್ಟು ಸಮಯದ ನಂತರ ಅವನು ಇಲ್ಲಿ ಬಂದದ್ದು ಇತರ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಸುಮ್ಮನೆ ಕಥೆ ಹೊಡೆಯುತ್ತಿದ್ದಾನೆ ಎಂಬ ಅನುಮಾನ ಬರುತ್ತದೆ ಎಂದು ಕೇಸನ್ನು ವಜಾ ಮಾಡಿತು. ನೆನಪಿಸಿಕೊಳ್ಳಿ, ನಮ್ಮ ಕನ್ನಡ ಸಿನಿಮಾ ನಾಯಕನಿಗೂ ನ್ಯಾಯಾಯದಲ್ಲಿ ನ್ಯಾಯ ಸಿಕ್ಕಿರುವುದಿಲ್ಲ. ಸಿಕ್ಕಿದ್ದರೆ ಚಿತ್ರದಲ್ಲಿ ’ಒಂದು ಸೆಂಟಿಮೆಂಟಲ್ ಸಾಂಗು, ಎರಡು ಫೈಟು’ ಮಿಸ್ಸಾಗುತ್ತಿತ್ತು.
ರೋಹಿತ್ ಶೇಖರ್ ’ನಮ್ಮ ತಾಯಿ ಮೇಲಾಣೆ, ಅವನೇ ನಮ್ಮಪ್ಪ, ಬೇಕಾದ್ರೆ DNA ಪರೀಕ್ಷೆ ನಡೆಯಲಿ’ ಎಂದು ಥೇಟ್ ಬಬ್ರುವಾಹನನಂತೆ ಅಬ್ಬರಿಸಿ ಬೊಬ್ಬರಿಸಿದ. ಅದಕ್ಕೂ ಶ್ರೀ ತಿವಾರಿಯವರು ’ನನಗೆ ವಯಸ್ಸಾಗಿದೆ. ಹಾಗಾಗಿ ನಾನು ಯಾವುದೇ ಪರೀಕ್ಷೆಗೆ ಸಿದ್ದನಿಲ್ಲ’ ಎಂದು ರಂಗೋಲಿ ಕೆಳಗೆ ನುಗ್ಗಿದರು.
ಮತ್ತೆ! ತಿವಾರಿ ಅಂದ್ರೇನು ಸುಮ್ನೇನಾ? ೧೯೨೫ರಲ್ಲಿ ಹುಟ್ಟಿರೋ ಇವರು ೧೯೪೨-೪೪ರಲ್ಲಿ ಭಾರತದ ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿದ್ದರು. ವಿವಿಧ ಕೇಂದ್ರ ಸರಕಾರಗಳಲ್ಲಿ ವಿತ್ತ, ವಾಣಿಜ್ಯ, ವಿದೇಶಾಂಗ ಮತ್ತು ಪೆಟ್ರೋಲಿಯಂ ಖಾತೆ ನೋಡಿಕೊಂಡವರು. ಇದಕ್ಕೆಲ್ಲ ಕಳಶವಿಟ್ಟಂತೆ ಅವಿಭಜಿತ ಉತ್ತರ ಪ್ರದೇಶಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿ ಮತ್ತು ೨೦೦೨ರಲ್ಲಿ ಉತ್ತರಾಂಚಲ ರಾಜ್ಯ ರಚನೆಯಾದಾಗ ಅದರ ಪ್ರಥಮ ಮುಖ್ಯಮಂತ್ರಿಯಾಗಿದ್ದರು. ಇವುಗಳ ನಡುವೆ ರಾಜೀವ್ ಗಾಂಧಿ ಹತ್ಯೆಯಾದಾಗ ಪ್ರಧಾನ ಮಂತ್ರಿ ಆಗಲಿಕ್ಕೆ ನಾನು ರೆಡಿ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಪಿ.ವಿ.ನರಸಿಂಹರಾವ್ ಸರಕಾರ ವಿವಿಧ ನೆಪವೊಡ್ಡಿ ತಿವಾರಿಯವರಯನ್ನು ಪಕ್ಷದಿಂದಲೇ ಉಚ್ಛಾಟಿಸಿತ್ತು. ನಂತರ ಸ್ವತಂತ್ರವಾದ ಪಕ್ಷ ಕಟ್ಟಿ ಅದರಲ್ಲಿ ಯಶಸ್ಸು ಸಿಗದೆ ಕೊನೆಗೆ ಮತ್ತೆ ಕಾಂಗ್ರೆಸ್ಸಿನಲ್ಲೇ ಲೀನವಾದರು.
ಇವರ ಖಾಸಗಿ ಬದುಕಿನಲ್ಲಿ ಆಗಾಗ ನಮ್ಮ ಕುಮಾರಣ್ಣ, ಯೆಡಿಯೂರಪ್ನೋರ ವಿಚಾರದಲ್ಲಿ ಕೇಳಿ ಬಂದಂತೆ ಅಪಸ್ವರ ಕೇಳಿಬಂದಿತ್ತು. ಕೆಲವು ಹಿರಿಯ ಕಾಂಗ್ರೆಸ್ಸಿಗರ ಪ್ರಕಾರ ತಿವಾರಿಯವರ ಗಂಡ ಹೆಂಡಿರ ಸಂಬಂಧ ಉಂಡು ಮಲಗಲಷ್ಟೇ ಸೀಮಿತವಾಗಿತ್ತಂತೆ. ೧೯೯೦ರಲ್ಲಿ ಪತ್ನಿ ವಿಧಿವಶರಾದ ಮೇಲಂತೂ ಹಲವು ಹೆಂಗಸರು ಇವರ ವೀಕ್‌ನೆಸ್ಸಾಗಿದ್ದರು ಎಂಬ ಅಂಶವನ್ನು ಅದೇ ಹಳೇ ಕಾಂಗ್ರೆಸ್ಸಿಗರೇ ಹೊರಗೆಡವುತ್ತಾರೆ.
ಬೆಂಗಳೂರಿನ ರಾಜಭವನದಲ್ಲಿ:

ಮತ್ತೊಂದು ಸುದ್ದಿ ನಮ್ಮ ರಾಜ್ಯದ ರಾಜಭವನಕ್ಕೆ ಸಂಬಂಧಿಸಿದ್ದು. ಬೆಂಗಳೂರಿನಲ್ಲಿ ರಾಜಭವನವಿದೆಯಲ್ಲ. ವಿಧಾನ ಸೌಧದಷ್ಟು ’ಚಟುವಟಿಕೆ’ ಕೇಂದ್ರವಲ್ಲದ್ದರಿಂದ ಅದು ಬಹಳಷ್ಟು ಪ್ರಜೆಗಳಿಗೆ ಪರಿಚಯವಿಲ್ಲ. ಇರಲಿ, ಸಮಸ್ಯ ಏನೆಂದರೆ ರಾಜಭವನದ ಮುಂದೆ ಮತ್ತು ಪಕ್ಕದಲ್ಲಿ ಒಂದು ಟ್ರಾಫಿಕ್‌ಮಯ ರಸ್ತೆಯಿದೆ. ಸರಿಯಾಗಿ ರಾಜಭವನದ ಗೇಟಿನೆದುರಿಗೆ ಬಂದು ಒಂದು s ತಿರುವು ಪಡೆದು ಆ ರಸ್ತೆ ಮುಂದೆ ಸಾಗುತ್ತದೆ. ಎಡವಟ್ಟು ಆಗಿರೋದೇ ಇಲ್ಲಿ. ಅತಿ ವೇಗದಿಂದ ಮತ್ತು ಅಜಾರೂಕತೆಯಿಂದ ಬರುವ ಕೆಲ ವಾಹನ ಸವಾರರು ಸೀದಾ ರಾಜಭವನದ ಗೇಟಿಗೇ ಬಂದು ಢಿಕ್ಕಿ ಹೊಡೆಯುತ್ತಾರೆ. ಮೊನ್ನೆ ಮೊನ್ನೆ ಟಾಟಾ ಸುಮೊವೊಂದು ಬಂದು ಗೇಟಿಗೆ ಹೊಡೆದು ಗೇಟಿನಲ್ಲಿ ವಿರಾಜಮಾನವಾಗಿದ್ದ ಸರಕಾರಿ ಚಿಹ್ನೆ ಗಂಡಭೇರುಂಡವನ್ನೇ ನಜ್ಜುಗುಜ್ಜಾಗಿಸಿದೆ.
ಪದೇ ಪದೆ ನಡೆವ ಇಂಥ ಘಟನೆಯಿಂದ ರಾಜಭವನದ ರಕ್ಷಣೆ ಜವಾಬ್ದಾರಿ ಹೊತ್ತ ಪೊಲೀಸರಿಗೂ ರೋಸಿ ಹೋಯಿತು. ಹಾಗಾಗಿ ಈಗ ಅಲ್ಲಿ ಗೇಟಿನ ಮುಂಭಾಗ ರಸ್ತೆ ಉಬ್ಬುಗಳನ್ನು ನಿರ್ಮಿಸಿದ್ದಾರೆ. ವಾಹನಗಳು ಬಂದು ಗುದ್ದುವುದಿದ್ದರೂ ಸ್ವಲ್ಪ ನಿಧಾನವಾಗಿ

ಬಂದು ಗುದ್ದಲಿ ಎಂಬ ದೂರಾಲೋಚನೆ ಅವರದು. ವ್ಹಾ! ವಾಟ್ಟೆನ್ ಐಡಿಯಾ ಸರ್ಜೀ.
ಆದರೆ ಈ ಐಡಿಯಾದಿಂದಾಗಿ ರಾಜಭವನಕ್ಕೆ ಬರುವ ಗಣ್ಯಾತಿಗಣ್ಯರು ಒಮ್ಮೆ ಕಾರಿನೊಳಗೆ ಕುಳಿತಲ್ಲೇ ಕುಲುಕುತ್ತಾರೆ. ಇತ್ತೀಚೆಗೆ ನೆರೆ ರಾಜ್ಯದ ರಾಜಭವನದಲ್ಲಿ ನಡೆದ ವಿವಾದದಿಂದಾಗಿ ರಾಜಭವನವೂ ಅಲುಗಾಟಕ್ಕೆ ಹೊರತಲ್ಲ ಮತ್ತು ಝಟ್ಕಾ ಧೀರೇ ಸೆ ಒಳಗೆ ಹೋಗಬೇಕು ಎಂಬ ಸೂಚನೆಯನ್ನು ರವಾನಿಸಲು ಈ ಕ್ರಮ ಎಂದು ಯಾವ ಅಧಿಕಾರಿ ಹೇಳಿದ್ದೂ ವರದಿಯಾಗಿಲ್ಲ.