ಕಳೆದು ಹೋದ ಅನಾಮಿಕಾ


ಅನಾಮಿಕಾ ನೀನೆ ನನಗೆ
ಎದೆಯ ನೋವು ಕಲಿಸಿದೆ
ಮೌನವಾದ ಹಾಡಿನಲ್ಲಿ
ನನ್ನ ನೋವು ಧ್ವನಿಸಿದೆ

ನೆನಪೆಲ್ಲ ಸೇರಿ ನಕ್ಕು
ನಗುವನ್ನೇ ಮರೆಸಿದೆ
ಆ ಚಂದ್ರ ಕೂಗಿ ಕರೆದು
ಒಂಟಿತನವ ಕಲಿಸಿದೆ

ಬೀಸು ಗಾಳಿ ಕೈಗೆ ಸಿಗದೆ
ದೂರ ದೂರ ಸರಿದಿದೆ
ನಿನ್ನ ಕಡೆಗೆ ನೋಟ ಬೀರಿ
ಸೇರಲಾರದೆ ಮರಳಿದೆ

ಇತಿಹಾಸ ಮಡಿಲಿನಲ್ಲಿ
ಕಾಲರಾಯ ಕಂಡನು
ನೀ ನಡೆವ ಹಾದಿಯಲ್ಲಿ
ಹಳೆಯ ನೆನಪು ತಂದನು

ರವಿಯ ಕರೆದು ಮಳೆಯ ಬಿಲ್ಲು
ಬಣ್ಣ ಮರೆತು ಮಾಸಿದೆ
ನೋವಿನಲ್ಲೂ ಬಣ್ಣಗಳಿಗೆ
ಅಥ೯ವುಂಟೆ ಕೇಳಿದೆ..

ಮಹಾತ್ಮ ಗಾಂಧಿ ರಸ್ತೆ


ಮಹಾತ್ಮ ಗಾಂಧಿ ರಸ್ತೆ ,
ಅಯ್ಯೋ ! ನಿನ್ನ ದುರವಸ್ಥೆ ..

ಸೀರೆ - ಪಂಚೆ ಬಿಟ್ಟೆ
ಜೀನ್ಸು - ಸ್ಕಟು ತೊಟ್ಟೆ
ಖಾದಿ ...?
ನೆನೆಪಾಗುವ ಮೊದಲೇ ಮರೆತೆ

ಬಹು ಮಹಡಿ ಮಹಲು
ಒಳಗೆ ಮಿನುಗುವ ದೀಪ
ಅದರೊಳು ಬಂಧಿ ಜ್ಞಾನರೂಪ ,
ತಪ್ಪು ನಿನ್ನದಲ್ಲವಿದು
ಕಲಿಯುಗದ ಶಾಪ

ಅಹಿಂಸೆ ತತ್ವವನು ಮೀರಿ
ಉಣುವ ತಟ್ಟೆಯಲ್ಲಿ
ಉಂಡವರ ಹೊಟ್ಟೆಯಲ್ಲಿ
ಕೋಳಿ ತುಂಡು - ನೆತ್ತರು !
ಮುಡಿಗೆ ಹೂವ ಮರೆತರೂ
ಮೈಗೆ ಮಲ್ಲಿಗೆ ಅತ್ತರು

ಮೆರೆದ ಸಂಸ್ಕೃತಿ ಮರೆತ ವ್ಯಾಪಾರ
ನೆರೆದ ಜನರಲ್ಲಿ ಅವರ ಆಚ್ಆರ
ಎಲ್ಲಾ ಗೊಂದಲದೊಳಗೆ ಸೆರೆ
ಬೇಕೆಂದರೆ ಇಗೋ ಸುರೆಯಾಸರೆ !

ಮಹಾತ್ಮ ಗಾಂಧಿ ರಸ್ತೆ
ಅಯ್ಯೋ ! ನಿನ್ನ ದುರವಸ್ಥೆ ..

ನುಗ್ಗಬೇಕು ಕತ್ತಲಿನೊಳಗೆ


ನೆರಳೂ ಬೆಳಕೂ ಕೂಡಿದೆ
ಗುರುತೇ ಸಿಗದಂತೆ
ಹಕ್ಕಿ ಮರಳಿ ಗೂಡು ಸೇರಿದೆ
ದಿನವನ್ನೇ ಮರೆತಂತೆ,
ಇದಕ್ಕೆ ಕಾರಣವಾರು?
ಘಂಟೆಯಾಗಿದೆ ಸಂಜೆಯ ಆರು...!

ನಡು-ದರಿವರೆಗೂ ಬಂದಿಹೆ ,
ಗುರಿ ಮುಟ್ಟುವುದು ಆಗದ ಕನಸು,
ತಿರುಗಿ ಮನೆ ಸೇರಲು?
ಕೇಳುತ್ತಿಲ್ಲ ಮನಸು
ಮುಂದೆಂದೋ ಸಾಧಿಸುವೆನೆಂಬ ಸಮಾಧಾನ
ಇದ್ದರೂ ಇಲ್ಲ
ಕಾಯುವ ವ್ಯವಧಾನ

ಬೆಳಕೂ ಆರದೆ
ಒಡನೆ ಕತ್ತಲಿನ ಮಬ್ಬು,
ಅರಿವನ್ನೇ ಮಾಡಿಹುದು
ರಸ ಹಿಂಡಿದ ಕಬ್ಬು ,
ಒಡನೆ ಸೇರಿ ಅಣಕಿಸುತಿಹುದು
ಕಾಲರಾಯನ ಅಟ್ಟಹಾಸದ ನಗು

ನುಗ್ಗಿಬಿಡಬೇಕು ಕತ್ತಲಿನೊಳಗೆ
ಆರಿದ ಬೆಳಕು
ಮತ್ತೆ ಕಾಣುವವರೆಗೆ

ಕಥೆಯಾದ ಅವಳು


ಕವಿಯಾದೆನು, ಕವಿಯಾದೆ ನಾನು
ನಿನ್ನ ಕಂಡ ಮರುಕ್ಷಣ ಕಲಾವಿದನಾದೆನು

ನಿನ್ನ ಕಣ್ಣಿನ ಕುಂಚದಲ್ಲಿ
ಅರಳಿದೆ ಹೊಸತೊಂದು ಬಣ್ಣ ,
ಆ ಬಣ್ಣ ಚೆಲ್ಲಿದೆ , ನನ್ನೆದೆಯಲ್ಲಿ
ಹೊಸತೊಂದು ರಂಗು ತುಂಬಿದೆ ,
ಆ ರಂಗಿನಲ್ಲೇ ಮಿಂದೆ
ನವ್ಯ ಕಲಾವಿದ ನಾನಾದೆ

ನಿನ್ನ ಅರಿಯದೇ ನಾನು

ಕಲೆಯ ನೆಲೆಯಲ್ಲಿ ಮರೆತೆ ,
ನನ್ನ ಕೇಳದೇ ನೀನು
ಕವಿತೆಯಾಗಿ ನನ್ನಲ್ಲೇ ಕುಳಿತೆ ,
ಆ ನೆನಪಿನಲ್ಲೇ ಬರೆದೆ
ನಾನು ಕವಿಯಾದೆ

ಬರಹದೊಳಗೆ ಸುಳಿದು
ಕಥೆಯಾಗಿ ಮೂಡಿದೆ
ನನ್ನ ಕಥೆಗಾರನಾಗಿ ಮಾಡಿದೆ ,
ಇಂದು ನೀನು ಇತಿಹಾಸ ;
ಕಥೆ ಹೇಳಿದವಳು ,
ಕಥೆಯಾಗಿ ಹೋದವಳು ..!

ಅನಾಮಿಕಾಳ ಜೊತೆಗೆ...


ಅನಾಮಿಕ ನಿನ್ನ ಜೊತೆಗೆ
ಮೌನ
ಸಂಭ್ರಮ ನಡೆದಿದೆ
ಮಾತು ಮರೆತು ನನ್ನ ಮನಸ್ಸು
ಮೂಕವಾಗಿ
ಹಾಡಿದೆ

ನೀ ಬಂದು ಹೋದ ನೆನಪು
ನಿನ್ನಂತೆ ನಗುತಿದೆ
ನೀ ಬೆಳಗಿ ಹೋದ ಬೆಳಕು
ನನ್ನನ್ನೇ ಬೆಳಗಿದೆ
ಗಾಳಿ ತೀಡಿ ತಂಪು ನೀಡಿ ನನ್ನ ಬಿಟ್ಟು ಓಡಿತು
ನಿನ್ನ ತಾಗಿ ಹರುಷ ನೀಡಿ ಸೇರು ಎಂದು ಹೇಳಿತು


ನಿನ್ನ ನಗುವ ಕಂಡು ಅಲ್ಲೇ
ಕಾಲರಾಯ ನಿಂತನು
ಭೂಮಿ ತಿರುಗೋ ವೇಗದೊಂದಿಗೆ
ತಾನು ನಡೆಯಲು ಮರೆತನು
ಮಳೆಯ ಬಿಲ್ಲು ಬಣ್ಣ ತು೦ಬಿ ಬೆನ್ನು ಬಾಗಿಸಿ ಮಲಗಿದೆ
ನಿನ್ನ ಜೊತೆಗೆ ಸೇರಿ ಒಮ್ಮೆ ಜಾರು ಎಂದು ಕರೆದಿದೆ