ನುಗ್ಗಬೇಕು ಕತ್ತಲಿನೊಳಗೆ


ನೆರಳೂ ಬೆಳಕೂ ಕೂಡಿದೆ
ಗುರುತೇ ಸಿಗದಂತೆ
ಹಕ್ಕಿ ಮರಳಿ ಗೂಡು ಸೇರಿದೆ
ದಿನವನ್ನೇ ಮರೆತಂತೆ,
ಇದಕ್ಕೆ ಕಾರಣವಾರು?
ಘಂಟೆಯಾಗಿದೆ ಸಂಜೆಯ ಆರು...!

ನಡು-ದರಿವರೆಗೂ ಬಂದಿಹೆ ,
ಗುರಿ ಮುಟ್ಟುವುದು ಆಗದ ಕನಸು,
ತಿರುಗಿ ಮನೆ ಸೇರಲು?
ಕೇಳುತ್ತಿಲ್ಲ ಮನಸು
ಮುಂದೆಂದೋ ಸಾಧಿಸುವೆನೆಂಬ ಸಮಾಧಾನ
ಇದ್ದರೂ ಇಲ್ಲ
ಕಾಯುವ ವ್ಯವಧಾನ

ಬೆಳಕೂ ಆರದೆ
ಒಡನೆ ಕತ್ತಲಿನ ಮಬ್ಬು,
ಅರಿವನ್ನೇ ಮಾಡಿಹುದು
ರಸ ಹಿಂಡಿದ ಕಬ್ಬು ,
ಒಡನೆ ಸೇರಿ ಅಣಕಿಸುತಿಹುದು
ಕಾಲರಾಯನ ಅಟ್ಟಹಾಸದ ನಗು

ನುಗ್ಗಿಬಿಡಬೇಕು ಕತ್ತಲಿನೊಳಗೆ
ಆರಿದ ಬೆಳಕು
ಮತ್ತೆ ಕಾಣುವವರೆಗೆ