ಆಡು ಆಟ ಆಡು

ಮೊದಲೆಲ್ಲ ಪತ್ರಿಕೆಗಳ ಸಿನಿಮಾ ಪುರವಣಿ ಮಾತ್ರ ಗ್ಲಾಮರಸ್‌ ಆಗಿರುತ್ತಿತ್ತು,. ಈಚೀಚೆಗೆ ಕ್ರೀಡಾ ಪುರವಣಿಗಳೂ ಹಾಗೆ ಆಗುತ್ತಿವೆ. ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರ ಎಂಬ ಭಾವನೆ ನಮ್ಮಿಂದ ದೂರವಾಗುತ್ತಿದೆ. ಮ್ಯಾಚ್ ಪ್ರಸಾರವಾಗುತ್ತಿದ್ದಾಗ ವಿದ್ಯುತ್ ಕೈ ಕೊಟ್ಟರೆ ಕೂಡಲೆ ರೆಡಿಯೋ ತಿರುಗಿಸಿ ಕಮೆಂಡ್ರಿ ಕೇಳುವು ಹುಚ್ಚು ಮೊಡಲಿನಂತೆ ಈಗ ಇಲ್ಲ. ಇದನ್ನೆಲ್ಲ ಅರಿತೇ ಅದರ ಜನಪ್ರಿಯತೆ ಉಳಿಸಿಕೊಳ್ಳಲು ತುಳು ಯಕ್ಷಗಾನದಂತೆ T20 ಆರಂಭವಾದ್ದು.
ಈಗೀಗ ಸ್ಕ್ವಾಶ್‌ನಂಥ ಅಟಗಳೂ ಹೆಸರೇ ತಿಳಿಯದಷ್ಟು ಅಪರಿಚಿತವಲ್ಲ. ಫಾರ್ಮುಲಾ ವನ್ ಎಂದರೆ ಏನು ಎಂಬುದು ನಮ್ಮ ಯುವ

ಜನಾಂಗಕ್ಕೆ ಗೊತ್ತು. ಅದನ್ನೀಗ "ಕಾರ್ ರೇಸ್" ಎಂದು ಹೇಳುವವರು ಕಡಿಮೆ. ಅದು F1 ಎಂದು ನಿಖರವಾಗಿ ತಿಳಿದಿದೆ. ನಮ್ಮ ಕಾರ್ತಿಕೇಯನ್ F1 ಕಾರ್ ಓಡಿಸಿದ್ದು ನಮ್ಮವರಿಗೆ ಅರಿವಿದೆ. ವಿಜಯ್ ಮಲ್ಯ ಸಾರಥ್ಯದಲ್ಲಿ ಫೋರ್ಸ್ ಇಂಡಿಯಾ ಪ್ವಾಶವಾದ ಮೇಲೆ ಪ್ರಾದೇಶಿಕ ಪತ್ರಿಕೆಗಳೂ ಆ ಕ್ರೀಡೆಯ ಪೋಟೋ ಪ್ರಕಟಿಸುತ್ತಿವೆ.
ರೇಸಿನ ಆರಂಭದಲ್ಲಿ ಕಾರುಗಳ ಪಕ್ಕ ಕೊಡೆ ಹಿಡಿದು ನಿಲ್ಲುವ ಮಾಡೆಲ್‌ಗಳು ಈಗಿನ ಹೊಸ ಮಾಡೆಲ್ ಯುವಕರ ಲ್ಯಾಪ್ಟಾಪುಗಳಲ್ಲಿ ವಾಲ್ ಪೇಪರುಗಳಾಗಿದ್ದಾರೆ. ಯುವಕರು F1ನತ್ತ ವಾಲಿದ್ದಕ್ಕೆ ಇಂಥ ವಾಲ್‌ಪೇಪರುಗಳು ಒಂದು ಸ್ಣ ಸಾಕ್ಷಿ. ಈ ಕಾರಣಕ್ಕಾಗಿ ಇಂಥ ಹಾಲ್‌ಗೆನ್ನೆ ಕನ್ನೆಯರು T20 ಯಲ್ಲೂ ಕಣಿದು ಟಿಕ್ ಟ್ವೆಂಟಿ ಕುಡಿಸುತ್ತಾರೆ.
ಮೆನ್ನೆ ಮೊನ್ನೆ ಕ್ರೀಡಾ ವಿಭಾಗದಲ್ಲಿ ಭೀಕರ ಸುದ್ದಿಗೆ ಗ್ರಾಸವಾದದ್ದು ಗ್ರೀನ್ ಗ್ರಾಸಿನ ಮೇಲೆ ಗಾಲ್ಪ್ ಆಡುವ ಟೈಗರ್ ವೂಡ್ಸ್. ಈ ಪರಾಕ್ರಮಿ ಟೈಗರ್ ಗಾಲ್ಪ್ ಅಂಗಣದ ಆಚೆಯೂ ಗಾಲ್ಪ್ ಆಡಿದ್ದು ಆ ಆಡದ ಗಂಧ ಗಾಳಿ ಇಲ್ಲದವರಿಗೂ ಒಂದಷ್ಟು ಕುತೂಹಲದ ಗಾಳಿ ಬೀಸಿತು. ವೂಡ್ಸಿಗೆ ಹುಲ್ಲು ಹಾಸು ಸಿಕ್ಕರೆ ಆಡುವುದು ಮಾತ್ರವಲ್ಲ, ಮೇಯುವ ಖಯಾಲಿಯೂ ಇದೆ ಎಂದು ತಿಳಿದಾಗ ಜಾಹೀರಾತಿಗಾಗಿ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪೆನಿಗಳೆಲ್ಲ ಒಂದೊಂದಾಗಿ ಅವನಿಂದ ಜಾರಿಕೊಂಡವು. ಸಾಮಾನ್ಯ ಜನರಿಗೆ ಇದೆಲ್ಲ ಸಿನಿಮಾದಷ್ಟೇ ಆಸಕ್ತಿದಾಯಕ ರಂಜನಾ ಕ್ಷೇತ್ರವಾಯಿತು.
ಕ್ರೀಡಾ ಜಗತ್ತಿನಿಂದ ಬಂದ ಹೊಸ ಸುದ್ದಿಯೆಂದರೆ ಸಾನಿಯಾ ಮಿರ್ಜಾ ಮದುವೆಯ ನಂತರ ಟೆನಿಸ್ ಅಂಗಣದಲ್ಲಿ ಟೆನಿಸ್ ಆಡುವುದಿಲ್ಲ ಎಂದು ಘೋಷಿಸಿದ್ದು.

ಈ ಹೈದರಾಬಾದಿ ಮೂರ‍್ನಾಲ್ಕು ವರ್ಷಗಳ ಹಿಂದೆ ಸೃಷ್ಟಿಸಿದ್ದ ಹವಾ ನೋಡ್ಬೇಕಿತ್ತು. ಕಾಲೇಜು ಮಕ್ಕಳ ನೋಟ್ ಪುಸ್ತಕದ ಮೇಲ್ಕವಚದಲ್ಲೆಲ್ಲ ಬಿಗಿಯಾದ ಮೇಲ್ಕವಚದಲ್ಲಿ ಸಾನಿಯಾ! ಟೆನಿಸ್ ಲಕದಲ್ಲಿ ಮಹೇಶ್ ಭೂಪತಿ - ಲಿಯಾಂಡರ್ ಪೇಸ್ ಒಂದಷ್ಟು ಕೀರ್ತಿ ಗಳಿಸಿದ್ದರೂ ಅವರ‍್ಯಾರೂ ಸಾನಿಯಾಳಂತೆ ಈ ಪರಿ ರಾರಾಜಿಸಿರಲಿಲ್ಲ. ಅಂಗಣದಲ್ಲಿ ರ‍್ಯಾಕೆಟ್ ಹಿಡಿದು ಬೆವರಿಳಿಸುತ್ತ ಆಡುವ ಬೆಡಗಿಯ ಫೋಟೊ ಪ್ರಕಟಿಸಿ ಪತ್ರಿಕೆಗಳು  ಓದುಗರ ಬೆವರಿಳಿಸಿದ್ದರು. ಟೆನಿಸ್ ಕೋರ್ಟಿನ ಉದ್ದ ಅಗಲ ತಿಳಿಯದವರಿಗೂ ಸಾನಿಯಾ ಸೋನಿಯಾಷ್ಟೇ ಪರಿಚಿತಳಾದಳು.
ಅಲ್ಲಿಯವರೆಗೆ ಅಮೆರಿಕಾದ ಸೆರೆನಾ ವಿಲಿಯಮ್ಸ್ ಎಂಬ "ಗಂಡುಗಲಿ ಮಹಿಳೆ" ನಮ್ಮವರಿಗೆ ಹಿಡಿಸಿರಲಿಲ್ಲ. ನಂತರವೂ ಅಷ್ಟೆ, ಮರಿಯಾ ಶೆರಾಪೋವಾ ಕೂಡ ಹಳಿಕೊಳ್ಳುವಷ್ಟು ಆಕರ್ಷಿಸಿರಲಿಲ್ಲ. ಬಿಡಿ, ಭಾರತೀಯ ಯುವಕರ ಟೇಷ್ಟೇ ಅಲ್ಲ ಅಂಥವರು. ಹಾಗಾಗಿಯೇ ಹೈದರಾಬಾದಿ ಮೂಗುತಿ ಸುಂದರಿ ಅಷ್ಟು ಬೇಗ ಪುಸ್ತಕಗಳಿಗೆ ಬೈಂಡುಗಳಾದದ್ದು.
ಇಷ್ಟಾಗುವಷ್ಟರಲ್ಲಿ ಮುಕ್ರಿಯೊಬ್ಬನಿಗೆ ಈ ಮುಸಲ್ಮಾನ ಹುಡುಗಿಯ ಟಿ ಶರ್ಟಿನ ಮೇಲೆ ಕಣ್ಣು ಬಿತ್ತು(!) ಅಲ್ಲಿಂದ ಇವಳ ವಸ್ರ ಸಂಹಿತಯ ವಿರುದ್ಧ ಫತ್ವವೂ ಹೊರಬಿತ್ತು. ಆದರೆ ಯಾವ ಕಾಲಕ್ಕೂ ಬುರ್ಖಾ ಧರಿಸಿ ಈ ಆಟ ಆಟಲು ಸಾಧ್ಯವೇ ಇಲ್ಲವೆಂಬ ಸತ್ಯ ಅರಿತಿದ್ದ ನಮ್ಮ ಯುವಕರು ಮನಃಪೂರ್ವಕ ಆನಂದಪಟ್ಟರು. (ವಿ.ಸೂ: ಇತ್ತೀಚೆಗೆ ಬುರ್ಖಾಕ್ಕೂ ಶೇಪ್ ಕೊಡಲಾಗುತ್ತಿದೆ. ಆದರೂ ಟೂ ಪೀಸ್ ಬುಖಾ ಎಂದರೆ ಅದು ಕೇವಲ ಎಂ.ಎಪ್.ಹುಸೇನ್‌ನಂಥ ಕಲಾಕಾರರ ಕಲ್ಪನೆಯಾದೀತಷ್ಟೆ.) ಮಗಳು ಬಿಗಿಯಾದ ಟಿ ಶರ್ಷ್ಧರಿಸಿ ಆಡುವುದು ಅವಳ ತಂದೆಗೆ ಅಷ್ಟಾಗಿ ಸಮಾಧಾನವೇನೂ ಇಲ್ಲವಂತೆ ಎಂಬ ಸುದ್ದಿಯೂ ಹೊರಬಿತ್ತು. ಆದೆರೆ ಪಾಪದ ಅಪ್ಪನಿಗೆ ತಿಳಿಯದ ಒಂದು ಪರದೆ ಕೆ ಪೀಛೆ ಕಾ ಸಂಗತಿಯೆಂದರೆ, ಅವಳ ಏಕ್‌ದಂ ಜನಪ್ರಿಯತೆಗೆ ಅವಳ ಟೀ ಶರ್ಟೂ ತನ್ನ ಕೈಲಾದ ಕೊಡುಗೆ ನೀಡಿತ್ತು.


ಕಳೆದ ಒಂದೂವರೆ ಎರಡು ವರ್ಷಗಳಿಂದ ಮಾತ್ರ ಸಾನಿಯಾ ಅಷ್ಟೊಂದು ಸುದ್ದಿಯಲ್ಲಿಲ್ಲ. ಅವಳಿನ್ನು ಆಟ ಆಡಿದರೂ ಆಡದಿದ್ದರೂ ಹೆಚ್ಚಿನ ತಲೆಬಿಸಿ ಮಾಡಲು ಯಾವ ಯುವಕನೂ ತಯಾರಿಲ್ಲವೆನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ದಶಕಗಳ ಮೊದಲಿದ್ದಂತೆ ಹೇಮಾಮಾಲಿನಿಗೆ ಮಗುವಾಗಿದ್ದಕ್ಕೂ ತಲೆಬಿಸಿ ಮಾಡುವ ಜಾಯಮಾನದವರಲ್ಲ ಇಂದಿನ ಯುವಕರು. ಊರಿಗೊಬ್ಬಳೇ ಸುಧಾರಾಣಿ ಎಂಬ ಹೇಳಿಕೆ ಈ ಕಾಲಕ್ಕೆ ಹೇಳಿ ಮಾಡಿಸಿದ್ದಲ್ಲ. ಮಲ್ಲಿಕಾ ಶೆರಾವತ್ತೇ ನಾಳೆ ಒಂದೆರಡಿಂಚು ದಪ್ಪಗಾದರೆ ಅವಳೂ ಯುವ ಮನಗಳಿಂದ ಔಟ್. ಇಷ್ಟೆಲ್ಲ ಯಾಕೆ, ಕ್ಲಾಸಿನಲ್ಲಿ ಎದುರು ಬೆಂಚಿಲ್ಲಿ ಸದ್ದಿಲ್ಲದೆ ಕೂರುವ ಬಟ್ಟಲು ಕಂಗಳ ಚೆಲುವೆಯ ಮದುವೆಯಂತೆ ಎಂಬ ಬ್ರೇಕಿಂಗ್ ನ್ಯೂಸ್ ಬಂದರೂ ಇವರ ಮನ ಕಲಕುವಷ್ಟು ತಾಕತ್ತು ಆ ಸಿದ್ದಿಗೂ ಇಲ್ಲ. ಇನ್ನು ಜುಜುಬಿ ಸಾನಿಯಾ ಮಿರ್ಜಾ ಯಾವ ಲೆಕ್ಕ..

ಹೊಸ ದಾರಿ. . . .


"ಅಭಿವೃದ್ಧಿಗಾಗಿ ರಸ್ತೆಗಳು", ಬೆಂಗಳೂರಿನಿಂದ ಮಂಗಳೂರು ಕಡೆಗೆ ನೀವು ಮೈಸೂರು ಬಳಸಿ ಬಂದಿದ್ದೀರೆಂದರೆ ಈ ಫಲಕವನ್ನು ನೋಡಿರುತ್ತೀರಿ. ಬೆಂಗಳೂರಿನಿಂದ ಹುಣಸೂರಿನ ವರೆಗೆ ಚತುಷ್ಪತ, ನಂತರ ಕುಶಾಲನಗರದ ವರೆಗೆ ದ್ವಿಪಥ, ಆದರೆ ಕುಶಾಲನಗರದಿಂದ ಮುಂದೆ ಎಲ್ಲವೂ ತಟ ಪಟ. ಕೆಲವು ಕಡೆ ರಸ್ತೆ ರಿಪೇರಿ ಕಾಮಗಾರಿ ನಡೆಯುತ್ತಿದೆ, ಎಚ್ಚರಿಕೆಯಿಂದ ಚಲಿಸಬೇಕು. ಮತ್ತೆ ಕೆಲವು ಕಡೆ ರಿಪೇರಿಯೇ ನಡೆಯುತ್ತಿಲ್ಲ, ಮತ್ತು ಎಷ್ಟೋ ವರ್ಷದಿಂದ ರಿಪೇರಿ ನಡೆದೇ ಇಲ್ಲ. ಅಲ್ಲೂ ಎಚ್ಚರಿಕೆಯಿಂದ ಚಲಿಸಬೇಕು.
ಇನ್ನೇನು ಈ ರಸ್ತೆ ಅಭಿವೃದ್ಧಿ ಆಗಿಯೇ ಬಿಟ್ಟಿತು ಎಂಬ ಕನಸು ಹೊತ್ತು ನಾನೂ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಸಾಗಿದ್ದೇ ಸಾಗಿದ್ದು. ಉಹುಂ.. ಮೈಗೆ ಒಂದಷ್ಟು ಧೂಳು ಅಂಟಿದೆಯೇ ವಿನಃ ಕಂಡ ಕನಸು ನನಸಾಗಿಯೇ ಇಲ್ಲ. "ನಾನು, ನನ್ನ ಕನಸು" ಎಂದು ನಾನೂ ಒಂದು ಸಿನಿಮಾ ಮಾಡಿದರೆ ಹ್ಯಾಗೆ? ಗಾಂಧಿನಗರಕ್ಕೆ ಹೋಗಿ "ಪಿಚ್ಚರ್ ಫುಲ್ಲು ಔಟ್ ಡೋರೇ ತೆಗ್ದಿದೀವಿ. ಎಡಿಟಿಂಗ್ ಎಲ್ಲಾ ರಾಂ ಗೋಪಾಲ್ ವರ್ಮಾ ಸ್ಟೈಲಲ್ಲಿದೆ. ನಾಲಕ್ ಚೇಸಿಂಗ್ ಸೀನು, ಮೂರ್ ಫೈಟು.." ಎಂದು ನಾನೂ ಮಾತಾಡಬಹುದಿತ್ತು.
ಮೊನ್ನೆ ಮೈಸೂರಿಗೆ ಹೋಗುವಾಗಲೇ ಯಾವುದಾದರೂ ಬೇರೆ ದಾರಿ ಇದೆಯಾ ಎಂದು ಲೆಕ್ಕ ಹಾಕಿದ್ದೆ. ಸಮಯದ ಅಭಾವದಿಂದಾಗಿ ಅನ್ವೇಷಣೆಗೆ ಹೊರಡದೆ ಹಳೆ ಪಾತ್ರೆ ಹಳೆ ಕಬ್ಣ ಎಂದು ಅದರಲ್ಲೇ ಸಾಗಿದೆ. ಆದರೆ ಅಲ್ಲಿಗೆ ಹೋದ ಮೇಲೆ ಒಂದು ಹೊಸ ದಾರಿ (ನನ್ನ ಮಟ್ಟಿಗೆ) ಇರುವ ವಿಚಾರ ತಿಳಿಯಿತು. ಸರಿ ಬರುವಾಗ ಪ್ರಯೋಗಿಸಿಯೇ ಬಿಡೋಣವೆಂದು ತೀರ್ಮಾನಿಸಿದೆ.

ಕುಶಾಲನಗರದ ಕಾವೇರಿ ನಿಸರ್ಗಧಾಮ ಕಳೆದು ಸುಮಾರು ಒಂದು ಕಿಲೋಮೀಟರಿಗೆ ದುಬಾರೆಗೆ ಹೋಗುವ ಮಾರ್ಗ ಎಡಕ್ಕೆ ತಿರುಗುತ್ತದೆ. ನಾಲ್ಕೈದು ಗೂಡಂಗಡಿಯ ಸನಿಹ ಒಂದು ಪುಟ್ಟದಾದ ಹಸಿರು ಫಲಕದಲ್ಲಿ ಆನೆ ಶಿಬಿರದ ಬೋರ್ಡು! ಆ ರಸ್ತೆಗೆ ತಿರುಗಿ ಹತ್ತು ಕಿಮೀ ಸಾಗಿದರೆ ಎಡಕ್ಕೆ ದುಬಾರೆ. ಆ ಒಳದಾರಿ ನೋಡಿದರೆ ಅದು ಆನೆಗೇ ಸೈ, ನಮಗಲ್ಲ ಎಂದು ಅನಿಸುತ್ತದೆ.
ಇದ್ಯಾವುದಕ್ಕೂ ವಿಚಲಿತರಾಗದೆ ನಾವು ಮುಖ್ಯ ರಸ್ತೆಯಲ್ಲಿ ಮುಂದಕ್ಕೆ ಸಾಗಬೇಕು. ಐದು ಕಿಮೀ ಸಾಗಿದಾಗ ಬಲ ಬದಿಗೆ ಒಂದು ಪುಟ್ಟ ರಸ್ತೆ, ಅದರ ಪಕ್ಕದಲ್ಲಿ ಒಂದು ದೊಡ್ಡ ಬೋರ್ಡು. ಈ ರಸ್ತಯೇ ನಮ್ಮನ್ನು ರಾಜ್ಯ ಹೆದ್ದಾರಿ ೮೯ಕ್ಕೆ ಸಂಪರ್ಕಿಸುವುದು. ಹೆಚ್ಚೇನಿಲ್ಲ, ಬರೇ ಎರಡು ಕಿಮೀ ಮಟ್ಟಿಗೆ ಆ ಮಾರ್ಗವನ್ನು ಸಹಿಸಿದರಾಯಿತು. ಹೆದ್ದಾರಿ ಸಿಕ್ಕ ಕೂಡಲೆ ಬಲಕ್ಕೆ ಹೊರಳಬೇಕು.
ಮುಂದಿನ ನಾಲ್ಕನೇ ಕಿ.ಮೀಗೆ ಚೆಟ್ಟಳ್ಳಿ, ಬಲಕ್ಕೆ ತಿರುಗುವ ಶುಂಟಿಕೊಪ್ಪ ಮಾರ್ಗವನ್ನು ಗಮನಿಸದೆ ನೇರ ಮಡಿಕೇರಿಗೆ ಸಾಗಿದರಾಯಿತು. ಕುಶಾಲನಗರ - ಮಡಿಕೇರಿ ರಸ್ತೆಯಷ್ಟು ಹದಗೆಟ್ಟಿಲ್ಲ. ವಾಹನ ದಟ್ಟಣೆಯೂ ಕಮ್ಮಿ. ಈ ಎಲ್ಲಾ ಅಂಶಗಳನ್ನು ಬದಿಗೊತ್ತಿದರೂ ಈ ದಾರಿಗೆ ಇದರದ್ದೇ ಆದ ಸೊಗಸಿಗೆ. ಮದ್ಯಾಹ್ನ ೨ ಗಂಟೆಯಲ್ಲೂ ಬೀಸುವ ತಂಪು ಗಾಳಿ, ಕೀ ಕೊಡುವ ಗೋಡೆ ಗಡಿಯಾರದ ವೈಂಡಿಂಗಿನಂತೆ ಸುರುಳಿ ಸುರುಳಿ ತಿರುವು. ಎಡಕ್ಕೆ ಎತ್ತರದಲ್ಲಿ ಕಾಫಿ ತೋಟ, ಬಲಕ್ಕೆ ಆಳ ಆಳದ ಕಣಿವೆ, ಕಣಿವೆಗಳಲ್ಲಿ ಕಣ್ಣು ಹಾಯಿಸುವಾಗ ಮಂಗಳೂರು ಬೆಂಗಳೂರು ಹಗಲು ರೈಲು ನೆನಪಾದರೆ ಆಕಸ್ಮಿಕವಲ್ಲ.
ಇಲ್ಲಿ ಸಾಗುತ್ತಿದ್ದಾಗ ನನ್ನಷ್ಟೇ ಹೊಸ ಹುರುಪು ನನ್ನ ಬೈಕಿಗೆ. ದಣಿವೇ ಇಲ್ಲದಂತೆ ಡೀಸಿಲ್ ಎಂಜಿನ್ ಹೊತ್ತ ಬುಲೆಟ್ ಬೈಕು

ತಿರುವುಗಳಲ್ಲಿ ಬಾಗುತ್ತ ಮಾಗುತ್ತ ಚಳಿಯನ್ನೂ ನಿಶ್ಶಬ್ದವನ್ನೂ ಏಕಕಾಲಕ್ಕೆ ಸೀಳಿ ಸಾಗುತ್ತಿತ್ತು. ಹೆಚ್ಚೇನೂ ವಾಹನ ಸಂಚಾರವಿಲ್ಲದ ಈ ಮಾರ್ಗದ ಬದಿಯಲ್ಲಿ ಒಮ್ಮೆ ನಿಲ್ಲಿಸಿದಾಗ ಅನುಭವಕ್ಕೆ ಬರುತ್ತಿದ್ದದ್ದು ಚುಮು ಚುಮು ಚಳಿ, ನೀರವ ಮೌನ ಮತ್ತು ಮುದ ನೀಡುವ ಏಕಾಂತ.
ಮನಸು ಹಾಗೇ ಒಮ್ಮೆ ಮೈಸೂರು ಬೆಂಗಳೂರಿನ ಬಿಡುವಿಲ್ಲದ ಹೆದ್ದಾರಿಯನ್ನು ನೆನಪಿಗೆ ತಂದುಕೊಂಡಿತು. ನೀಳವೇಣಿಯ ಬೈತಲೆಯಂತೆ ನೀಟಾದ ಆ ಹೆದ್ದಾರಿಯಲ್ಲಿ ಹೋಗಿದ್ದಾಗ ಬೈಕಿನ ಎಕ್ಸಲೇಟರ್ ಕೇಬಲ್ ತುಂಡಾಗಿತ್ತು. ಸಣ್ಣ ಪುಟ್ಟ ರಿಪೇರಿಗೆ ಬೇಕಾದ ಒಂದಷ್ಟು ಸರಂಜಾಮುಗಳು ಯಾವತ್ತೂ ನನ್ನ ಪ್ರಯಾಣದೊಂದಿಗೆ ಇರುತ್ತದೆ. ತೊಂದರೆಯೇನೂ ಆಗಲಿಲ್ಲ. ಆದರೆ ಆ ಅರ್ಧ ಗಂಟೆ ಹೈವೇ ಬದಿಯಲ್ಲಿ ನಿಲ್ಲಿಸಿ, ಗ್ರೀಸು  ಮೆತ್ತಿದ ಕೈಗಳಲ್ಲಿ ಸ್ಕ್ರೂ ಡ್ರೈವರ್ ಹಿಡಿದು ನಿಂತಿದ್ದರೆ, ರೊಯ್ಯನೆ ಸಾಗುವ ಒಬ್ಬರೂ ಕ್ಯಾರೆ ಅನ್ನಲಿಲ್ಲ. ಆ ಜನಸಾಗರದಲ್ಲಿನ ಏಕಾಂತಕ್ಕಿಂತ ಈ ನಿರ್ಜನ-ನಿಶ್ಶಬ್ದ, ಏಕಾಂತ ಎಷ್ಟೋ ವಾಸಿ.
ನಾವು ಯಾವತ್ತೂ ಹೀಗೆ. ಎಲ್ಲರೂ ಸಾಗಿ ಸಾಗಿ ಸವೆದ ದಾರಿಯನ್ನೇ ಹೆಚ್ಚಾಗಿ ಆಯ್ಕೆ ಮಾಡುತ್ತೇವೆ. ಎಲ್ಲರೂ ಬಿಇ ಮಾಡುವಾಗ ನಾವೂ ಅದಕ್ಕೇ ಅರ್ಜಿ ಹಿಡಿಯುತ್ತೇವೆ. ಅನಿಮೇಶನ್ನಿಗೆ ಒಳ್ಳೆ ಅವಕಾಶವಿದೆಯಂತೆ ಎಂದು ಯಾರೋ ಹೇಳಿದ್ದು ನಂಬಿ ೫೦ ಸಾವಿರ ತೆತ್ತು ಸೇರುತ್ತೇವೆ. ಈಗ ಬಯೋಟೆಕ್ನಾಲಜಿಗೆ ಭಾರೀ ಡಿಮಾಂಡು ಅಂತ ಪಕ್ಕದ ಮನೆಯ ಬ್ಯಾಂಕ್ ನೌಕರ ಹೇಳಿದರೆ ನಮ್ಮದು ಅದಕ್ಕೇ ಜೈ. ನಮ್ಮ ಹೆಚ್ಚಿನ ನಿರ್ಧಾರಗಳು ಇತರರ ಹೇಳಿಕೆ ಮೇಲೆ ಅವಲಂಬಿತ ಹೊರತು ಸ್ವಂತ ವಿವೇಕಕ್ಕೆ ಒಂದಿನಿತೂ ಕೆಲಸ ಕೊಡುವುದಿಲ್ಲ. ಸುಮ್ನೆ ರಿಸ್ಕ್ ಯಾಕೆ...

ಆದರೆ ರಿಸ್ಕು ಎಲ್ಲದರಲ್ಲೂ ಇದೆ. ತೋಟಕ್ಕೆ ಹೋಗುವುದೂ ಒಂದು ರೀತಿ ರಿಸ್ಕೇ. ತಲೆಗೆ ತೆಂಗಿನಕಾಯಿ ಬಿದ್ದರೆ? ಬಿಸಿನೆಸ್ಸು ರಿಸ್ಕು, ಲಾಸಾದರೆ? ರಿಸ್ಕು ಯಾವುದರಲ್ಲಿಲ್ಲ ಹೇಳಿ. ವ್ಯಾಪಾರ ಮಾಡಿ, ಡ್ರೈವ್ ಮಾಡಿ, ಕೃಷಿ ಮಾಡಿ... ಬೇಡ, ಕೊನೆಗೆ ರೊಮ್ಯಾನ್ಸ್ ಮಾಡಿದ್ರೂ ರಿಸ್ಕಿಲ್ವ ಹೇಳಿ...!

ಸರಕಾರದ ಕೆಲಸ ಯಾರ ಕೆಲಸ...?


ಅವನಿಗೊಬ್ಬಳು ಚಂದದ ಹೆಂಡತಿ. ಗಂಡ ಹೆಂಡಿರ ನಡುವೆ ಜಗಳ-ಮುನಿಸು ಏನೂ ಇರಲಿಲ್ಲ. ನೋಡುಗರ ಕಣ್ಣಿಗೆ ಅವರದ್ದು ಒಳ್ಳೆಯ ದಾಂಪತ್ಯ. ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆದರೆ ಮನೆಯಲ್ಲಿ ಮಕ್ಕಳ ದನಿಯಿಲ್ಲ.
ನೆರೆಹೊರೆಯವರಿಗೆ ಒಳಗಿನ ವಿಚಾರ ಏನೆಂದು ತಿಳಿದಿರಲಿಲ್ಲ. ಮಕ್ಕಳಿಲ್ಲದಿದ್ದರೆ ಏನು, ಅವನು ದುಬೈನಲ್ಲಿ ಬೇಕಾದಷ್ಟು ದಿರಂ ದುಡಿಯುತ್ತಿದ್ದ. ಮನೆಯಲ್ಲಿ ಐಶಾರಾಮಿ ವಸ್ತುಗಳಿಗೆ ಕೊರತೆಯಿರಲಿಲ್ಲ.
ಇಂತಿದ್ದಾಗ ಪಕ್ಕದ ಮನೆಗೆ ಒಬ್ಬ ಯುವಕನ ಆಗಮನವಾಗುತ್ತದೆ. ದುಬೈ ಬಾಬುವಿನ ಹೆಂಡತಿಯೊಂದಿಗೆ ಸ್ನೇಹ ಸಂಪಾದಿಸುತ್ತಾನೆ. ಮೊದಲು ಹಾಯ್-ಬಾಯ್‌ಗೆ ಮಾತ್ರ ಸೀಮಿತವಾಗಿದ್ದ ಸ್ನೇಹ ಕಾಲ ಸರಿದಂತೆ, ಹೋಗಿ ಬರುವ ಮಟ್ಟಕ್ಕೆ ಬರುತ್ತದೆ. ಕೊನೆ ಕೊನೆಗೆ ಇವಳ ಇಷ್ಟಾರ್ಥಗಳನ್ನೂ ಯುವಕ ನೋಡಿಕೊಳ್ಳುತ್ತಾನೆ. ಹೀಗಿದ್ದರೂ ದೂರದಲ್ಲಿದ್ದ ದುಬೈ ಬಾಬುವಿಗೆ ಇದ್ಯಾವುದರ ಸುಳಿವೂ ಸಿಗಲಿಲ್ಲ.
ಒಮ್ಮೆ ವಾರ್ಷಿಕ ಭೇಟಿಗೆ ಊರಿಗೆ ಬಂದ ಅವನು ಒಂದು ತಿಂಗಳಿದ್ದು ಮರಳಿದ. ಮರಳಿದ ಮೂರು ತಿಂಗಳ ನಂತರ ಹೆಂಡತಿ ತಾನು ಗರ್ಭಿಣಿಯಾದ ವಿಚಾರವನ್ನು ಇಂಟರ್‌ನ್ಯಾಶನಲ್ ಕರೆ ಮೂಲಕ ತಿಳಿಸಿದಳು. ಕೆಲ ಸಮಯದ ಬಳಿಕ ಒಂದು ಮುದ್ದಾದ ಮಗುವಿಗೆ ಜನ್ಮವಿತ್ತಳು.
ಆದರೆ ಸೂಕ್ಷ್ಮವಾಗಿ ಗಮನಿಸಿ ತಾಳೆ ಹಾಕಿ ನೋಡಿದಾಗ ದುಬೈ ಬಾಬು ಊರಿಂದ ಮರಳಿದ ದಿನಕ್ಕೂ ಈ ಮಹಾತಾಯಿ

ಹೆತ್ತ.ದಿನಕ್ಕೂ ಹತ್ತು ತಿಂಗಳ ಅಂತರವಿತ್ತು! ಪಾಪದ ದುಬೈ ಬಾಬು ಇದರ ಪರಿವೆ ಇಲ್ಲದೆ ಅಂತೂ ಆ ಖುದಾ, ದೇವ್ರು ಕಣ್ ಬಿಟ್ಟ. ನಂ ದುಖಾನ್‌ಗೂ ಏಕ್ ಬಚ್ಚಾ ಆಗಯಾ ಎಂದು ಬಿಚ್ಚು ಮನಸ್ಸಿನಿಂದ ಸಂತಸಪಟ್ಟ. ಇದೆಲ್ಲವನ್ನೂ ಗಮನಿಸುತ್ತಿದ್ದ ದೇವರು ಪಕ್ಕದ ಮನೆಯಲ್ಲಿ ಹುಳ್ಳಗೆ ನಕ್ಕ!
ಇದೊಂದು ಕತೆ. ನನ್ನ ಮಿತ್ರ ರಾಮಮೂರ್ತಿ ಹೇಳಿದ್ದು. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ನಾವು ಕರ್ಮಣ್ಯೇ ವಾಧಿಕಾರಸ್ತೆ ಮಾಡದಿದ್ದರೆ ಏನಾಗುತ್ತದೆ ಎನ್ನುವದಕ್ಕೆ ದೃಷ್ಟಾಂತವಾಗಿ ಈ ಕಥೆಯನ್ನು ತನ್ನ ಎಂದಿನ ತುಂಟತನದೊಂದಿಗೆ ಹೇಳಿದ್ದ. ಈ ಕಥೆ ಮೊನ್ನೆ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯವರು ವಿಧಾನ ಸೌಧದ ಬಗ್ಗೆ ಹೇಳುತ್ತಿದ್ದಾಗ ಪುನಃ ನೆನಪಾಯಿತು.
ವಿಧಾನ ಸೌಧದ ಹೆಬ್ಬಾಗಿಲ ಮೇಲ್ಭಾಗದಲ್ಲಿ ಸರಕಾರದ ಕೆಲಸ ದೇವರ ಕೆಲಸ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದೆಯಲ್ಲ. ನೀವೂ ನೋಡಿರುತ್ತೀರಿ.

ಆದರೆ ಸರಕಾರದ ಕೆಲಸ ಮಾಡುವವರು ಹಾಗೆ ಮಾಡುತ್ತಿದ್ದಾರಾ ಎಂದು ನಿಮಗೆ ಅನುಮಾನ ಕಾಡಬಹುದು. ರಾಜಕಾರಣಿಗಳಲ್ಲಿ ಬಹುತೇಕರು ಲಜ್ಜೆಗೆಟ್ಟಿದ್ದಾರೆ. ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸ ಆಗಬೇಕಾದರೆ ಕಿರ್ಚಿಯಲ್ಲಿರುವವರಿಗೆ ಟೀ ಕುಡಿಯಲು ಒಂಸ್ವಲ್ಪ ಕಾಸ್ ಕೊಡ್ಬೇಕು. ಕೆಲವು ಅಧಿಕಾರಿಗಳು ಟೀ ಕುಡಿಯುವ ಪರಿ ನೋಡಿ ಸಾಮಾನ್ಯರು ಕಂಗೆಟ್ಟಿದ್ದಾರೆ.
ಹೀಗೆಲ್ಲಾ ಯಾಕೆ ಆಗ್ತಿದೆ ಗೊತ್ತಾ?
ಸರಕಾರಿ ಕೆಲಸ ದೇವರ ಕೆಲಸ ಎಂಬುದು ಇಂಥವರಿಗೆ ಮನವರಿಕೆಯಾಗಿದೆ. ಹಾಗಾಗಿ ಸರಕಾರಿ ಕೆಸ ನಮ್ಮದಲ್ಲ, ಅದು ದೇವರದ್ದು. ಅದನ್ನು ಅವನು ನೋಡಿಕೊಳ್ಳುತ್ತನೆ. ನಾವು ಒಂದಷ್ಡು ಟೀ ಕುಡಿಯೋಣ ಎಂಬ ನೀತಿ ಇವರದ್ದು. ಈ ಕಾರಣಕ್ಕಾಗಿಯೇ ಹಿಂದೆಮ್ಮ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಆ ಬರಹವನ್ನು ವಿಧಾನಸೌಧದಿಂದ ಅಳಿಸಿ ಹಾಕಿಸಿದ್ದರು ಎಂದು ದೊರೆಸ್ವಾಮಿಯವರು ನೆನೆಯುತ್ತಾರೆ. ಹಾಗೆ ಪಾಟೀಲರು ತೆಗೆಸಿದ್ದುದನ್ನು ಗುಂಡೂರಾಯರು ಸೀಟಿಗೆ ಬಂದಾಗ ಪುನಃ ಬರೆಸಿದರು.

                                                                       ವೀರೇಂದ್ರ ಪಾಟೀಲ್‌



                                                                       ಗುಂಡೂರಾವ್‌
ಹೌದೂ... ಇದನ್ನೆಲ್ಲ ಕಟ್ಕೊಂಡು ನಮ್ಗೇನಾಗ್ಬೇಕು? ಸರಕಾರ ಏನ್ ಬೇಕಾದ್ರೂ ಮಾಡ್ಕೊಳ್ಲಿ. ನಮಗ್ಯಾಕೆ, ನಾವ್ ಯಾಕೆ ತಲೆ ಕೆಡಿಸ್ಕೋಬೇಕು? ದೇವ್ರಿದ್ದಾನೆ, ಎಲ್ಲಾ ನೋಡ್ಕೋತಾನೆ ಬಿಡಿ..!