ಹರಿದ ಕಾಗದ

Jean Cocteau- ಇವನೊಬ್ಬ ಹೆಸರಾಂತ ಫ್ರೆಂಚ್ ಚಿತ್ರ ನಿರ್ದೇಶಕ. ದಶಕಗಳ ಹಿಂದೆ ಈತ ಹೇಳಿದ ಒಂದು ಮಾತು ಇವತ್ತಿಗೂ ಸತ್ಯ ಎಂಬ ಸಂದೇಹ ಹುಟ್ಟುತ್ತದೆ. ಹಾಗೊಂದು ಅನುಮಾನ ಬರಲು ನೀವು ಸಿನಿಮಾ ನಿರ್ದೇಶಕನೇ ಆಗಬೇಕೆಂದೇನೂ ಇಲ್ಲ. ನನ್ನ ಹಾಗೆ ಎಡಗೈಗೆ ಬ್ಯಾಂಡೇಜು ಸುತ್ತಿ ಉಪ್ಪರಿಗೆಯ ಕೋಣೆಯ ಮೂಲೆಯಲ್ಲೊಂದು ಮಂಚ ಹಾಕಿ ಕೈಯಲ್ಲಿ ಪುಸ್ತಕ ಹಿಡಿದು ಕುಳಿತರೂ ಸಾಕು.
ಆತ ಹೇಳಿದ್ದು ಇಷ್ಟೆ. Film will only really become an art when cameras are as cheap as fountain pens and raw film stock is as cheap as paper. ಅಂದ್ರೆ ಮಿಳಿ ಹಾಳೆಯಷ್ಟು ಸಿನಿಮಾದ ರೀಲು ಅಗ್ಗವಾದಾಗ; ಬರೆಯುವ ಪೆನ್ನಿನಷ್ಟು ಕ್ರಯಕ್ಕೆ ಕೆಮರಾ  ಸಿಕ್ಕಾಗ ಸಿನಿಮಾ ನಿಜಕ್ಕೂ ಒಂದು ಕಲೆಯಾಗುತ್ತದೆ. ಯಾಕಂದ್ರೆ ಆಗ ಕೈಯಲ್ಲಿ ಕೋಟಿಗಟ್ಟಲೆ ಕಾಸಿಲ್ಲದಿದ್ದರೂ ಒಂದಷ್ಟು ಬುರುಡೆ ಇದ್ದವರು ಸಿನಿಮಾ ಮಾಡಬಹುದು.
ಇಲ್ಲದೆ ಇದ್ರೆ ಈಗ ಇರುವ ಹಾಗೆ - ಈ ಪಿಚ್ಚರ್ ಬಂದ್ಬಿಟ್ಟು ಫುಲ್ ಡಿಪ್ರೆಂಟು ಸಾರ್. ಒಬ್ಬ ಸ್ಲಂ ಹುಡ್ಗ ಮತ್ತೆ ಒಬ್ಳು ರಿಚ್ ಪ್ಯಾಮಿಲಿ ಹುಡ್ಗಿ. ಇವ್ರಿಬ್ರು ಮಧ್ಯೆ ಅದ್ಹೆಂಗೆ ಲವ್ ಆಗುತ್ತೆ ಅನ್ನೋದೇ ಪಿಚ್ಚರ್ ಸ್ಟೋರಿ. ಇದ್ರಲ್ಲಿ  ಆಕ್ಷನ್ನು, ಕಾಮಿಡಿ, ಮದರ್ ಸೆಂಟಿಮೆಂಟು ಎಲ್ಲಾ ಇದೆ ಸಾರ್. ಕ್ಲೈಮ್ಯಾಕ್ಸ್ ಬಂದ್ಬುಟ್ಟು ಫುಲ್ ಡಿಪ್ರೆಂಟು. ಜೇಮ್ಸ್ ಬಾಂಡ್ ಪಿಚ್ಚರಲ್ಲಿ ಎಂಗೆ ಡಿಪ್ರೆಂಟ್ ಕ್ಲೇಮ್ಯಾಕ್ಸ್ ಬರುತ್ತೋ ಅಂಗೇ ಮಾಡಿದೀವಿ. ಇದುವರ‍್ಗೂ ಕನ್ನಡ್ದಲ್ಲಿ ಇಂಥಾ ಡಿಪ್ರೆಂಟ್ ಪಿಚ್ಚರ್ ಯಾರೂ ಮಾಡಿಲ್ಲ ಸಾ.. ಅಂತ TV9ನಲ್ಲಿ ರಾತ್ರೆ ಎಂಟು ವರೆಗೆ ಒದರ‍್ತಿರ‍್ತಾರೆ ನಮ್ಮ ಪಿಚ್ಚರ್ ಡೈರೆಕ್ಟ್ರು.

ಈಗ ಪೆನ್ನಿನಲ್ಲೂ ಕೆಮೆರಾಗಳು ಬಂದಿವೆ. ಆ ಕೆಮರಾದಲ್ಲಿ ಸಿನಿಮಾ ಮಾಡೋದಕ್ಕೆ ಆಗದೆ ಇರಬಹುದು. ಆದರೆ ಕೆಮರಾದ ಮೂಲಕ ಪ್ರಪಂಚ ನೋಡಿ ಹೊಸ ಆಲೋಚನೆ ಮಾಡುವವನಿಗೆ ಅಷ್ಟು ಸಾಕು. ಆದರೂ ಅಂಥಾ ಜನ ನಮ್ಮ ನಡುವೆ ಬಲು ಅಪರೂಪ.
ಗಮ್ಮತ್ತು ಅದಲ್ಲ. ಸಿನಿಮಾ ಬಗ್ಗೆ ಹೀಗೆ ಹೇಳೋ ಮಾತು ಅದ್ಹೇಗೆ ಬರವಣಿಗೆಗೂ ಸರಿ ಹೊಂದುತ್ತದೆ ನೋಡಿ. ಒಂದಿಪ್ಪತ್ತು ವರ್ಷಕ್ಕೆ ಹಿಂದೆ ಬರೆಯೋದಕ್ಕೆ ಅಂತ ನಮ್ಮಲ್ಲಿ ಇದ್ದ ಸಾಧನ ಪೆನ್ನು, ಪೇಪರು, ಬಿಟ್ಟರೆ ಟೈಪ್ ರೈಟರು. ಆದರೂ ಆ ಕಾಲಕ್ಕೆ ಬರವಣಿಗೆ ದೊಡ್ಡ ಕಷ್ಟ ಅಂತ ಹೆಚ್ಚಿನವರಿಗೆ ಅನಿಸುತ್ತಿರಲಿಲ್ಲ.
ಮೊನ್ನೆ ಮೊನ್ನೆ ಮನೆಯ ಅಟ್ಟದಲ್ಲಿ ನನ್ನ ತಂದೆಯವರು ಧಾರವಾಡದಲ್ಲಿ ಓದುತ್ತಿದ್ದ ಕಾಲಕ್ಕೆ ಅಲ್ಲಿಂದ ಮನೆಗೆ ಬರೆದ ಪತ್ರ ಸಿಕ್ಕಿತು. ರಜೆ ಕಳೆದು ಇತ್ತ ಕಡೆಯಿಂದ ಹೊಟವರು ಕ್ಷೇಮವಾಗಿ ತಲುಪಿದ್ದಾರೆ ಅನ್ನುವುದು ಆ ಕಾಗದದ ವನ್ ಲೈನ್ ಸ್ಟೋರಿ. ನನ್ನ ತಂದೆ ಕಥೆಗಾರರಲ್ಲ - ಕಾದಂಬರಿಕಾರರಲ್ಲ, ಹೇಳಿಕೊಳ್ಳುವಂತಹ ಕವಿಯೂ ಅಲ್ಲ. ಆದರೆ ಆ ಪತ್ರದ ತುಂಬ ತುಂಬಿದ್ದ ಅಕ್ಷರಗಳು ಒಂದು ಸುಂದರ ಕಥೆಯಾಗಿ - ಕವನವಾಗಿ ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತವೆ. ಅಲ್ಲಿ ದೂರ ಪ್ರಯಾಣದ ವರ್ಣನೆಯಿದೆ. ಬಸ್ ಸ್ಟಾಂಡ್ ಹೋಟೆಲ್ಲಿನ ಫಿಲ್ಟರ್ ಕಾಫಿಯ ಘಮವಿದೆ. ಚಾರ್ಮಾಡಿಯ ಸುತ್ತಲಿನ ಚುಮು ಚುಮು ಚಳಿಯಿದೆ. ಬಸ್ಸಿನ ಕಿಟಕಿಯ ವರೆಗೂ ಆವರಿಸಿದ ಮಂಜಿದೆ - ಆ ಇಡೀ ಪತ್ರ ಒಂದು ಪ್ರವಾಸಿ ಲೇಖನ.
ಇದು ನನ್ನ ತಂದೆಯೊಬ್ಬರ ಕಥೆಯಲ್ಲ. ಅಂದಿನ ದಿನಗಳಲ್ಲಿ ದೂರದೂರಿನಲ್ಲಿ ಕಲಿಯುತ್ತಿದ್ದ ಪ್ರತಿಯೊಬ್ಬರ ಕಥೆ. ಕನಿಷ್ಟ ವಾರಕ್ಕೆ ಒಂದು ಪತ್ರವನ್ನಾದರೂ ಅವರು ಬರೆಯುತ್ತಿದ್ದರು. ಇತ್ತ ಊರಲ್ಲಿ ಕುಳಿತವರೂ ಅಷ್ಟೇ. ಬಾಳೆ ಬ್ಯಾರಿಯೊಂದಿಗೆ ನಡೆಸಿದ ವ್ಯಾಪಾರ, ಭಟ್ಟ ಮಾವನ ಮಗನ ನಾಮಕರಣ, ವರ್ಷದ ಮೊದಲ ಅಡಿಕೆ ಕೊಯ್ಲು, ಬುಡಕ್ಕೆ ಹಾಕಿದ ಗೊಬ್ಬರ, ಗೊನೆಗೆ ಬಿಟ್ಟ ಮದ್ದು, ದೀಪಾವಳಿಗೆ ಮನೆಗೆ ಬಂದ ಭಾವ, ಕಾರಣವಿಲ್ಲದೆ ಜಗಳವಾಡಿ ಹೋದ ಮಾವ - ಇವರೆಲ್ಲರನ್ನೂ ಸೇರಿಸಿ ಅಂದದ ಪತ್ರವೊಂದನ್ನು ಬರೆಯುತ್ತಿದ್ದರು.
ಅಂದಿನ ಕಾಲಕ್ಕೆ ಹೋಲಿಸಿದರೆ ಬರವಣಿಗೆಯ ಕ್ರಮದಲ್ಲಿ ಇಂದು ಸಾಕಷ್ಟು ಪರಿವರ್ತನೆಗಳಾಗಿವೆ. ಮೊಳೆಯಚ್ಚು ತಂತ್ರಜ್ಞಾನದಿಂದ ಮುದ್ರಣ ಮಾಧ್ಯಮ ಹೇಗೆ ಇಂದು ಸಂಪೂರ್ಣ ಬದಲಾವಣೆ ಹೊಂದಿದೆಯೋ ಹಾಗೆಯೇ ಬರೆವಣಿಗೆಯಲ್ಲೂ ಸಾಕಷ್ಟು ಹೊಸ ಸಾಧ್ಯತೆಗಳು ಹುಟ್ಟಿಕೊಂಡಿವೆ.
ಕಾಗದ ಪೆನ್ನು ಹಿಡಿದು ಗೀಚಬೇಕಾಗಿಲ್ಲ. ಕೈ ಬರಹದ ಅಂದದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಮಗೆ ಸರಿ ಹೊಂದುವ ಫಾಂಟನ್ನು ಆರಿಬಹುದು. ಅಕ್ಷರ ತಪ್ಪಾದರೆ ಚಿತ್ತು ಮಾಡಬೇಕಾಗಿಲ್ಲ. ಬ್ಯಾಕ್ ಸ್ಪೇಸ್ ಎಂಬ ಪುಟ್ಟ ಗುಂಡಿ ಅದನ್ನು ಸರಿಮಾಡುತ್ತದೆ. ಇಂಗ್ಲೀಷಾದರಂತೂ ಸ್ಪೆಲ್ಲಿಂಗ್ ತಪ್ಪಾಗುವ ರಗಳೆಯೂ ಇಲ್ಲ. ಟೈಪ್ ಮಾಡುತ್ತಿದ್ದಂತೆಯೇ ತಪ್ಪಾದರೆ ಕೆಂಪು ಗೆರೆಯೊಂದು ಅಡ್ಡ ಬರುತ್ತದೆ. ಬೇಕಿದ್ದರೆ ಬದಲಿ ಪದಗಳನ್ನೂ ಕಂಪ್ಯೂಟರೇ ಸೂಚಿಸುತ್ತದೆ.
ಅಂಗೈಯಲ್ಲಿಯೇ ಮೊಬೈಲೆಂಬ ಮಾಂತ್ರಿಕ ಸಾಧನವಿದೆ. ಅದರಲ್ಲೂ ಮನಸ್ಸಿದ್ದರೆ ಛಂದದ್ದೊಂದು ಸಾಲು ಕೀಲಿಸಿ ಕಳಿಸಬಹುದು. ಬರೆಯಲು ಎಲ್ಲವೂ ಇದೆ - ಅನುಭವ, ಹೊಸ ವಿಷಯ, ಕಾಣುವ ಹೊಸ ಮುಖ, ಬದಲಾಗುವ ಸಂಬಂಧಗಳು - ಎಲ್ಲವೂ ಇದೆ. ಇಲ್ಲದಿರುವುದು ಬರೆಯುವ ಚೈತನ್ಯವಷ್ಟೆ. ‘been 2 blore vit frnd. Wtchd movie. Hd gr8 time. GN’ ಎಂದು 160 character ಗಳ ಒಳಗೆ ನಮ್ಮೆಲ್ಲ ಬರಹ ಹರಿದು ಹೋಗಿದೆ.

ದಿನಕ್ಕೆ ಹತ್ತು ಹುಡುಗಿಯರಿಗೆ ನೂರು ಮೆಸೇಜು ಕಳಿಸುವ ಕಾಲೇಜು ಹುಡುಗನಿಗೆ ಒಂದು ಸುಂದರ ಪ್ರೇಮ ಪತ್ರ ಬರೆಯಲು ಹೇಳಿದರೆ ಆತ ಬೆ.. ಬ್ಬೆ.. ಬ್ಬೆ.. ಒಂದು ವೇಳೆ ಬರೆದರೂ ಅದನ್ನು ಮೇಷ್ಟ್ರು ತಿದ್ದಬೇಕಾದಂಥ ಪರಿಸ್ಥಿತಿ. ಸಾಲಿಗೊಂದು ಅಕ್ಷರ ದೋಷ. ಅದನ್ನೂ ಮೀರಿಸುವ ವ್ಯಾಕರಣ. ಒಂದೇ ಎರಡೇ..? ಬೇಕಿದ್ರೆ ಗೂಗಲ್‌ನಲ್ಲಿ ಜಾಲಾಡಿ ಒಂದ್ಹತ್ತು ಲವ್ ಲೆಟರ್ ಓದಿಯಾದ್ರೂ ನಿನ್ನದೇ ಒಂದು ಬರಿ ಮಹಾರಾಯ ಅಂದ್ರೆ ಅದಕ್ಕೂ ನಾಲ್ಕು ದಿನ ಸಮಯ ಕೇಳ್ತಾನೆ ಫಟಿಂಗ!
ಅದ್ಸರಿ, ನೀವು ನಿಮ್ಮ ಹುಡುಗಿಗೆ ಬರೆದು ಅದೆಷ್ಟು ದಿನ ಆಯ್ತು?