ಇದೆಂಥ ಹನಿ....


ಹನಿ ಹನಿ ಇದೆಂಥ ಹನಿ
ಭುವಿಯ ಕೊರಳಿಗೆ ಹಿಮದ ಹನಿ
ಹನಿ ಹನಿ ಇದೆಂಥ ಹನಿ
ಸೃಷ್ಟಿ ಪರತೆ ನಿನ್ನ ಇಬ್ಬನಿ

ಬಣ್ಣದೊಳಗೆ ಹೊಂಬಣ್ಣ ಹನಿ
ಎಳೆಯ ಮೇಲೆ ಮೈಬಣ್ಣ ಹನಿ
ಹಾಡಿನೊಳಗೆ ಸಾಹಿತ್ಯ ಹನಿ
ಚಿಪ್ಪಿನೊಳಗೆ ಮೈವೆತ್ತ ಹನಿ

ರತ್ನಮಂಚದ ಹವಳ ಹನಿ
ಚಂದ್ರ ಬಿಂಬದ ಧವಳ ಹನಿ
ಸೂಯ೯ ಕಾಂತಿಯ ಬಿಳುಪು ಹನಿ
ನಾಗಮಣಿಯಲಿ ಹೊಳಪು ಹನಿ

ಮುತ್ತ ಪೋಣಿಸಿ ತೊಟ್ಟ ಹನಿ
ಪನ್ನೀರ ಬಿಂದು ತೊಟ್ಟಿಕ್ಕೋ ಹನಿ
ನಲ್ಲನಂದು ಮುತ್ತಿಟ್ಟ ಹನಿ
ದುಂಬಿ ಜೇನು ತಂದಿಟ್ಟ ಹನಿ

ನೇಸರನ ಬಿಸಿಲಿಗೆ ಆರೋ ಹನಿ
ಬೀಸು ಗಾಳಿಗೆ ಹಾರೋ ಹನಿ
ಕಮಲದಳದಲ್ಲಿ ಜಾರೋ ಹನಿ
ಸುಮದ ನಡುವಲ್ಲಿ ಸೇರೋ ಹನಿ

ಜಗವ ತುಂಬಿದ ಚಿತ್ರ ಹನಿ
ಜೋಗಿ ಜಂಗಮ ವಿಚಿತ್ರ ಹನಿ
ಶಾಂತ ನಿಮ೯ಲ ಭಾವ ಹನಿ
ಕಾಂತ ನಿನ್ನ ಅಭಾವ ಹನಿ