ಇತ್ತ ರೇಣುಕಾಚಾರ್ಯ ಎಂಬ ಏಕ ಸದಸ್ಯ ಬಣಕ್ಕೆ ಮಂತ್ರಿಗಿರಿ ದಯಪಾಲಿಸಿದ್ದು ತೀರ್ವ ಅಪಸ್ವರಕ್ಕೆ ಕಾರಣವಾಗಿದೆ. ಇಷ್ಟು ದಿನ ರಾಜ್ಯ ಸರಕಾರದ ಶೃತಿ ತಪ್ಪುತ್ತಿದೆ ಎಂದು ’ಪ್ರಜ್ಞಾವಂತ ಮತದಾರರು’ ಮಾತಾಡಿಕೊಳ್ಳುತ್ತಿದ್ದರು. ಆದರೆ ಈಗ ಬರಿ ಶೃತಿಯಷ್ಟೇ ಅಲ್ಲ ತಾಳವೂ ತಪ್ಪಿದೆ ಎಂದು ಜನತೆಗೆ ಅರಿವಾಗಿದೆ. ಇದಕ್ಕೆಲ್ಲ ಕಾರಣ ನರ್ಸ್ ಜಯಲಕ್ಷ್ಮಿ ಖ್ಯಾತಿಯ ಹೊನ್ನಾಳಿ ಶಾಸಕ, ಹುಟ್ಟು ಹೋರಾಟಗಾರ, ಪುಂಡರ ಪುಂಡ, ಚಂಡ ಪ್ರಚಂಡ ರೇಣುಕಾಚಾರ್ಯ.
ಆಂಧ್ರದ ಬೆಂಕಿಗೆ ತುಪ್ಪ:
ಅತ್ತ ಆಂಧ್ರದ ರಾಜಭವನದಿಂದ pussy cat pussy cat where have you been ಎಂದು ನರ್ಸರಿ ಹಾಡು ಕೇಳಿಬಂದಿದೆ. ಅಲ್ಲಿನ ರಾಜ್ಯಪಾಲ ತಿವಾರಿ ಸಿಗಬಾರದ ರೀತಿಯಲ್ಲಿ, ಸಿಗಬಾರದ ಭಂಗಿಯಲ್ಲಿ, ಸಿಗಬಾರದ ವಯಸ್ಸಿನಲ್ಲಿ ಹೆಂಗಸರೊಂದಿಗೆ ಕೆಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆಂಧ್ರದ ಎಬಿಎನ್ ಆಂಧ್ರ ಜ್ಯೋತಿ ಡಿ.೨೫ರ ಬೆಳಗ್ಗೆ ಈ ರಾಜರಹಸ್ಯವನ್ನು ಬಿತ್ತರಿಸಿ ನೋಡುಗರಿಗೆ ಚಳಿಗಾಲದ ಭರ್ಜರಿ ಮಸಾಲ ನೀಡಿದೆ.
ಕೂಡಲೇ ಎಚ್ಚೆತ್ತ ರಾಜಭವನ ದೃಶ್ಯ ಪ್ರಸಾರ ನಿಲ್ಲಿಸಲು ಯೋಜನೆ ಹಾಕಿತು. ಹೈಕೋರ್ಟ್ ಮೊರೆ ಹೊಕ್ಕು ದೃಶ್ಯ ಪ್ರಸಾರ ತಡೆ ಹಿಡಿಯಿತು. ರಾಜಭವನದಲ್ಲಿ ಇದ್ದ ಬದ್ದ ಬೆಡ್‌ಶೀಟುಗಳನ್ನೆಲ್ಲ ಹೊತ್ತು ತಂದ ಅಧಿಕಾರಿಗಳು ರಾಜ್ಯಪಾಲರ ಮಾನ ಮುಚ್ಚಲು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಅಷ್ಟರಲ್ಲಿ ಹರಾಜು ಆಗಬಾರದ್ದು ಹರಾಜಾಗಿ ಹೋಗಿತ್ತು. ಇಷ್ಟೆಲ್ಲ ಆದ ಮೇಲೆ ಪಾಪ ತಿವಾರಿಗೆ ಭಯಂಕರ ಸುಸ್ತಾಗಿರಬೇಕು. ಅಲ್ರೀ ಮೂರ್ಮೂರ್ ಜನ ಹುಡ್ಗೀರು, ಅದೂ ಒಂದೇ ಸಲಕ್ಕೆ ಅಂದ್ರೆ ಎಂಥವರೂ
ಸುಸ್ತಾಗಲೇಬೇಕು, ಸಹಜ. ಹಾಗಾಗಿ ಕೊನೆಯಲ್ಲಿ ನಾರಾಯಣ ದತ್ತ ತಿವಾರಿ ’ಆರೋಗ್ಯ’ದ ಕಾರಣ ನೀಡಿ ರಾಜೀನಾಮೆ ಕೊಟ್ಟು ಖಾದಿ ಟೋಪೀಲಿ ಬೆವರೊರೆಸಿಕೊಂಡರು. ಏನೇ ಆಗ್ಲಿ ನಮಗೆ ಆರೋಗ್ಯ ಮುಖ್ಯ ನೋಡಿ...
ಮತ್ತೆ ನೋಡಿದರೆ ತಿವಾರಿಯವರ ಬಗ್ಗೆ ಈ ಹಿಂದೆಯೇ ಅಂಬರೀಷ್ ಕಾಲದ ಸಿನಿಮಾ ಸ್ಟೈಲಿನ ಕಥೆಯೊಂದು ಬಂದು ಹೋಗಿದೆ.
ವಿಲನ್ ವಜ್ರಮುನಿ ಒಂದಾನೊಂದು ಕಾಲದಲ್ಲಿ ಹೆಣ್ಣೆಬ್ಬಳನ್ನು ವಂಚಿಸಿರುತ್ತಾನೆ. ಆ ವಂಚನೆಯ ಉತ್ತುಂಗ ಸ್ಥಿತಿಯಲ್ಲಿ ನಮ್ಮ ನಾಯಕ ಜನಿಸಿರುತ್ತಾನೆ. ಮುಂದೆ ಬೆಳೆದು ಯುವಕನಾದಾಗ ಅವನಿಗೆ ತನ್ನ ಜನ್ಮ ರಹಸ್ಯ ತಿಳಿಯುತ್ತದೆ. ನ್ಯಾಯಕ್ಕಾಗಿ ಹೋರಾಡಿ, ಕೂಗಾಡಿ, ಹೊಡೆದಾಡಿ ಕೊನೆಗೆ ಹದಿನೈದು ನಿಮಿಷಗಳ ಕ್ಲೈಮ್ಯಾಕ್ಸಿನಲ್ಲಿ ಆತ ನ್ಯಾಯ ದಕ್ಕಿಸಿಕೊಳ್ಳುತ್ತಾನೆ.
ತಿವಾರಿ ಜೀವನದಲ್ಲೂ ಅಂಥದ್ದೇ ಘಟನೆ ನಡೆದಿತ್ತಂತೆ. ಹೀಗೆಂದು ಹೇಳಿದವನು ೨೯ವರ್ಷದ ರೋಹಿತ್ ಶೇಖರ್ ಎಂಬ ಯುವಕ. ತಿವಾರಿಯೇ ನನ್ನ ತಂದೆ ಎಂದು ಇವನು ದೆಹಲಿ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಹೈಕೋರ್ಟು ಇದನ್ನು ಒಪ್ಪಲಿಲ್ಲ. ರೋಹಿತ್ ಶೇಖರ್ ೧೯೯೭ರಲ್ಲಿಯೇ ೧೮ನೆ ವಯಸ್ಸಿಗೆ ಕಾಲಿಟ್ಟಿದ್ದ. ಈ ವಿಚಾರವಾಗಿ ಆತ ಮುಂದಿನ ಮೂರು ವರ್ಷಗಳ ಒಳಗೇ ಅರ್ಜಿ ಸಲ್ಲಿಸಿದ್ದಿದ್ದರೆ ಪರಿಗಣಿಸಬಹುದಿತ್ತು. ಇಷ್ಟು ಸಮಯದ ನಂತರ ಅವನು ಇಲ್ಲಿ ಬಂದದ್ದು ಇತರ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಸುಮ್ಮನೆ ಕಥೆ ಹೊಡೆಯುತ್ತಿದ್ದಾನೆ ಎಂಬ ಅನುಮಾನ ಬರುತ್ತದೆ ಎಂದು ಕೇಸನ್ನು ವಜಾ ಮಾಡಿತು. ನೆನಪಿಸಿಕೊಳ್ಳಿ, ನಮ್ಮ ಕನ್ನಡ ಸಿನಿಮಾ ನಾಯಕನಿಗೂ ನ್ಯಾಯಾಯದಲ್ಲಿ ನ್ಯಾಯ ಸಿಕ್ಕಿರುವುದಿಲ್ಲ. ಸಿಕ್ಕಿದ್ದರೆ ಚಿತ್ರದಲ್ಲಿ ’ಒಂದು ಸೆಂಟಿಮೆಂಟಲ್ ಸಾಂಗು, ಎರಡು ಫೈಟು’ ಮಿಸ್ಸಾಗುತ್ತಿತ್ತು.
ರೋಹಿತ್ ಶೇಖರ್ ’ನಮ್ಮ ತಾಯಿ ಮೇಲಾಣೆ, ಅವನೇ ನಮ್ಮಪ್ಪ, ಬೇಕಾದ್ರೆ DNA ಪರೀಕ್ಷೆ ನಡೆಯಲಿ’ ಎಂದು ಥೇಟ್ ಬಬ್ರುವಾಹನನಂತೆ ಅಬ್ಬರಿಸಿ ಬೊಬ್ಬರಿಸಿದ. ಅದಕ್ಕೂ ಶ್ರೀ ತಿವಾರಿಯವರು ’ನನಗೆ ವಯಸ್ಸಾಗಿದೆ. ಹಾಗಾಗಿ ನಾನು ಯಾವುದೇ ಪರೀಕ್ಷೆಗೆ ಸಿದ್ದನಿಲ್ಲ’ ಎಂದು ರಂಗೋಲಿ ಕೆಳಗೆ ನುಗ್ಗಿದರು.
ಮತ್ತೆ! ತಿವಾರಿ ಅಂದ್ರೇನು ಸುಮ್ನೇನಾ? ೧೯೨೫ರಲ್ಲಿ ಹುಟ್ಟಿರೋ ಇವರು ೧೯೪೨-೪೪ರಲ್ಲಿ ಭಾರತದ ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿದ್ದರು. ವಿವಿಧ ಕೇಂದ್ರ ಸರಕಾರಗಳಲ್ಲಿ ವಿತ್ತ, ವಾಣಿಜ್ಯ, ವಿದೇಶಾಂಗ ಮತ್ತು ಪೆಟ್ರೋಲಿಯಂ ಖಾತೆ ನೋಡಿಕೊಂಡವರು. ಇದಕ್ಕೆಲ್ಲ ಕಳಶವಿಟ್ಟಂತೆ ಅವಿಭಜಿತ ಉತ್ತರ ಪ್ರದೇಶಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿ ಮತ್ತು ೨೦೦೨ರಲ್ಲಿ ಉತ್ತರಾಂಚಲ ರಾಜ್ಯ ರಚನೆಯಾದಾಗ ಅದರ ಪ್ರಥಮ ಮುಖ್ಯಮಂತ್ರಿಯಾಗಿದ್ದರು. ಇವುಗಳ ನಡುವೆ ರಾಜೀವ್ ಗಾಂಧಿ ಹತ್ಯೆಯಾದಾಗ ಪ್ರಧಾನ ಮಂತ್ರಿ ಆಗಲಿಕ್ಕೆ ನಾನು ರೆಡಿ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಪಿ.ವಿ.ನರಸಿಂಹರಾವ್ ಸರಕಾರ ವಿವಿಧ ನೆಪವೊಡ್ಡಿ ತಿವಾರಿಯವರಯನ್ನು ಪಕ್ಷದಿಂದಲೇ ಉಚ್ಛಾಟಿಸಿತ್ತು. ನಂತರ ಸ್ವತಂತ್ರವಾದ ಪಕ್ಷ ಕಟ್ಟಿ ಅದರಲ್ಲಿ ಯಶಸ್ಸು ಸಿಗದೆ ಕೊನೆಗೆ ಮತ್ತೆ ಕಾಂಗ್ರೆಸ್ಸಿನಲ್ಲೇ ಲೀನವಾದರು.
ಇವರ ಖಾಸಗಿ ಬದುಕಿನಲ್ಲಿ ಆಗಾಗ ನಮ್ಮ ಕುಮಾರಣ್ಣ, ಯೆಡಿಯೂರಪ್ನೋರ ವಿಚಾರದಲ್ಲಿ ಕೇಳಿ ಬಂದಂತೆ ಅಪಸ್ವರ ಕೇಳಿಬಂದಿತ್ತು. ಕೆಲವು ಹಿರಿಯ ಕಾಂಗ್ರೆಸ್ಸಿಗರ ಪ್ರಕಾರ ತಿವಾರಿಯವರ ಗಂಡ ಹೆಂಡಿರ ಸಂಬಂಧ ಉಂಡು ಮಲಗಲಷ್ಟೇ ಸೀಮಿತವಾಗಿತ್ತಂತೆ. ೧೯೯೦ರಲ್ಲಿ ಪತ್ನಿ ವಿಧಿವಶರಾದ ಮೇಲಂತೂ ಹಲವು ಹೆಂಗಸರು ಇವರ ವೀಕ್‌ನೆಸ್ಸಾಗಿದ್ದರು ಎಂಬ ಅಂಶವನ್ನು ಅದೇ ಹಳೇ ಕಾಂಗ್ರೆಸ್ಸಿಗರೇ ಹೊರಗೆಡವುತ್ತಾರೆ.
ಬೆಂಗಳೂರಿನ ರಾಜಭವನದಲ್ಲಿ:
ಮತ್ತೊಂದು ಸುದ್ದಿ ನಮ್ಮ ರಾಜ್ಯದ ರಾಜಭವನಕ್ಕೆ ಸಂಬಂಧಿಸಿದ್ದು. ಬೆಂಗಳೂರಿನಲ್ಲಿ ರಾಜಭವನವಿದೆಯಲ್ಲ. ವಿಧಾನ ಸೌಧದಷ್ಟು ’ಚಟುವಟಿಕೆ’ ಕೇಂದ್ರವಲ್ಲದ್ದರಿಂದ ಅದು ಬಹಳಷ್ಟು ಪ್ರಜೆಗಳಿಗೆ ಪರಿಚಯವಿಲ್ಲ. ಇರಲಿ, ಸಮಸ್ಯ ಏನೆಂದರೆ ರಾಜಭವನದ ಮುಂದೆ ಮತ್ತು ಪಕ್ಕದಲ್ಲಿ ಒಂದು ಟ್ರಾಫಿಕ್‌ಮಯ ರಸ್ತೆಯಿದೆ. ಸರಿಯಾಗಿ ರಾಜಭವನದ ಗೇಟಿನೆದುರಿಗೆ ಬಂದು ಒಂದು s ತಿರುವು ಪಡೆದು ಆ ರಸ್ತೆ ಮುಂದೆ ಸಾಗುತ್ತದೆ. ಎಡವಟ್ಟು ಆಗಿರೋದೇ ಇಲ್ಲಿ. ಅತಿ ವೇಗದಿಂದ ಮತ್ತು ಅಜಾರೂಕತೆಯಿಂದ ಬರುವ ಕೆಲ ವಾಹನ ಸವಾರರು ಸೀದಾ ರಾಜಭವನದ ಗೇಟಿಗೇ ಬಂದು ಢಿಕ್ಕಿ ಹೊಡೆಯುತ್ತಾರೆ. ಮೊನ್ನೆ ಮೊನ್ನೆ ಟಾಟಾ ಸುಮೊವೊಂದು ಬಂದು ಗೇಟಿಗೆ ಹೊಡೆದು ಗೇಟಿನಲ್ಲಿ ವಿರಾಜಮಾನವಾಗಿದ್ದ ಸರಕಾರಿ ಚಿಹ್ನೆ ಗಂಡಭೇರುಂಡವನ್ನೇ ನಜ್ಜುಗುಜ್ಜಾಗಿಸಿದೆ.
ಪದೇ ಪದೆ ನಡೆವ ಇಂಥ ಘಟನೆಯಿಂದ ರಾಜಭವನದ ರಕ್ಷಣೆ ಜವಾಬ್ದಾರಿ ಹೊತ್ತ ಪೊಲೀಸರಿಗೂ ರೋಸಿ ಹೋಯಿತು. ಹಾಗಾಗಿ ಈಗ ಅಲ್ಲಿ ಗೇಟಿನ ಮುಂಭಾಗ ರಸ್ತೆ ಉಬ್ಬುಗಳನ್ನು ನಿರ್ಮಿಸಿದ್ದಾರೆ. ವಾಹನಗಳು ಬಂದು ಗುದ್ದುವುದಿದ್ದರೂ ಸ್ವಲ್ಪ ನಿಧಾನವಾಗಿ
ಬಂದು ಗುದ್ದಲಿ ಎಂಬ ದೂರಾಲೋಚನೆ ಅವರದು. ವ್ಹಾ! ವಾಟ್ಟೆನ್ ಐಡಿಯಾ ಸರ್ಜೀ.
ಆದರೆ ಈ ಐಡಿಯಾದಿಂದಾಗಿ ರಾಜಭವನಕ್ಕೆ ಬರುವ ಗಣ್ಯಾತಿಗಣ್ಯರು ಒಮ್ಮೆ ಕಾರಿನೊಳಗೆ ಕುಳಿತಲ್ಲೇ ಕುಲುಕುತ್ತಾರೆ. ಇತ್ತೀಚೆಗೆ ನೆರೆ ರಾಜ್ಯದ ರಾಜಭವನದಲ್ಲಿ ನಡೆದ ವಿವಾದದಿಂದಾಗಿ ರಾಜಭವನವೂ ಅಲುಗಾಟಕ್ಕೆ ಹೊರತಲ್ಲ ಮತ್ತು ಝಟ್ಕಾ ಧೀರೇ ಸೆ ಒಳಗೆ ಹೋಗಬೇಕು ಎಂಬ ಸೂಚನೆಯನ್ನು ರವಾನಿಸಲು ಈ ಕ್ರಮ ಎಂದು ಯಾವ ಅಧಿಕಾರಿ ಹೇಳಿದ್ದೂ ವರದಿಯಾಗಿಲ್ಲ.
ಬೆಳದಿಂಗಳ ಬಾಲೆ...
ನೆನಪುಗಳ ಸಂತೆಯಲಿ ನಿನ್ನ ನಗೆಯು ಕೂಗಿ ತಂದ
ಹಗಲು ಬಂದ ಬೆಳದಿಂಗಳು ನೀನೇ ಚಂದ
ಚುಕ್ಕಿ ತಾರೆ ನೀಹಾರಿಕೆ ಇಲ್ಲದಿರುವ ಪರಿವಾರಕೆ
ನೀಲಿ ಬಾನನೂ ನುಂಗಿ ನಲಿವ ಬೆಳ್ಳಗಿನ ಪರಿಚಾರಿಕೆ
ಮೆಲ್ಲ-ಮೆಲ್ಲಗೆ ಹೆಜ್ಜೆಯಿಡುವ ಪಾದದಡಿಯಲಿ ಪದವು ಮೂಡಿ
ಮೇಲೆ ಚಿಮ್ಮಿ ಮತ್ತೆ ಮಲಗಿ ಮತ್ತೆ ಮೆತ್ತಗೆ ಹಾಡಿದೆ
ಹಾಡಿದ ಆ ರಾಗ ಕೇಳಿ ಗಾಳಿಯುಸಿರು ಸರಾಗವಾಗಿ
ಓಡುತಿದ್ದರೆ ನಿನ್ನ ನೋಡಿ ಮತ್ತೆ ಹಿಂದಕೆ ಓಡಿದೆ
ತುಟಿಯ ಮೇಲೆ ಕಾಣದಂತೆ ಮೂಡಿನಿಂತ ನಗೆಯ ನೋಡಿ
ಏಳು ಬಣ್ಣದ ಮಳೆಯ ಬಿಲ್ಲು ನಿನ್ನ ನೋಡಲು ಬಾಗಿದೆ
ನಿನ್ನ ತೆಕ್ಕೆಗೆ ಜೋತುಬಿದ್ದ ಕಣವು ಕಣವೂ ಮಾಗಲಿ
ನಿನ್ನ ಕಣ್ಣಲಿ ನೋಟವಿಟ್ಟು ಹೊಸತು ಜೀವ ಬೆಳಗಲಿ
ಮಾತನಾಡಲು ಹೊರಟ ಮಾತು ಅಲ್ಲಿಗಲ್ಲಿಗೆ ನಿಲ್ಲಲಿ
ಚಿಪ್ಪಿನೊಳಗಿನ ಮುತ್ತಿನಂತೆ ಓಲೆಯಾಗಲು ಹೊರಡಲಿ
ಎಷ್ಟು ಬರೆದರೂ ಸಾಲದಂಥ ಅಂದವದುವೇ ನಿನ್ನದೇ
ಎಷ್ಟು ಸೋತರೂ ಗೆಲ್ಲುವಂಥ ಕೃಷ್ಣನಂಥ ನಿನ್ನೆದೆ
ಇಂಥ ನಿನಗೆ ಬರೆದು ಕಳಿಸಲು ನೂರು ಪದದ ಸಾಲಿದೆ
ಸಾಲದಿದ್ದರೆ ಒಮ್ಮೆ ಕೇಳು ಮತ್ತೆ ಬರೆಯುವ ಹುರುಪಿದೆ
ಈ ದಶಕದಿ "ಕಾಣೆಯಾದವರ ಬಗ್ಗೆ ಪ್ರಕಟಣೆ"
ಪ್ರತಿ ವರ್ಷದಂತೆ ಈ ವರ್ಷವೂ ಹೊಸ ವರ್ಷ ಬರುತ್ತಿದೆ. ಅದೂ ಭರ್ತಿ ೩೬೫ ದಿನಗಳ ನಂತರ. ’ನಾನು ಇಂದಿನಿಂದ ಸಿಗರೇಟು ಸೇದುವುದಿಲ್ಲ’, ’ಇಂದಿನಿಂದ ಕೋಪ ನಿಯಂತ್ರಿಸುತ್ತೇನೆ’, ’ತೂಕ ಇಳಿಸುತ್ತೇನೆ’ ಎಂದು ಪ್ರತಿ ಹೊಸ ವರ್ಷದ ದಿನ ಪ್ರತಿಜ್ಞೆ ಮಾಡಿದಂತೆ ಈ ವರ್ಷವೂ ಪ್ರತಿಜ್ಞಾ ವಿಧಿ ಸ್ವೀಕರಿಸುವ ಆರಂಭ ಶೂರರು ಸುತ್ತ ಮುತ್ತ ಹಲವರಿರುತ್ತಾರೆ. ಇಂಥವರು ಪ್ರತಿ ವರ್ಷವೂ ’ರಾಜ್ಯದ ಜನತೆ, ಮಠಾಧೀಶರ’ ಮೇಲೆ ಪ್ರಮಾಣ ಮಾಡಿ ದೊಡ್ಡ ಮಾತು ಆಡುತ್ತಾರೆ.
ವರ್ಷದ ಮೊದಲ ದಿನ ರಜ ಹಾಕದೆ ನೀಯತ್ತಿನಿಂದ ಕಾಯಕ ಮಾಡುವುದು ಕೆಲವರ ನಿಲುವು. ಇದಕ್ಕೆ ವ್ಯತಿರಿಕ್ತ ಮತ್ತೊಂದು ವರ್ಗವಿದೆ. ಅವರದು ನಡುರಾತ್ರಿಯಲ್ಲಿ ಉತ್ಕಟ ಆಚರಣೆ. ಡಿಸೆಂಬರ್ ೩೧ರ ರಾತ್ರಿ ಬಾರ್ ಹೊಕ್ಕು ಇಡೀ ವರ್ಷದ ಭಾರ ಇಳಿಸು ಭಾರತೀಯರಿವರು. ಎರಡು ವರ್ಷಕ್ಕೆ ಹಿಂದೆ ಪಂಚತಾರಾ ಹೊಟೆಲೊಂದು ಮಲ್ಲಿಕಾ ಶೆರಾವತ್ ನೈಟ್ ಆಚರಿಸಿ ಟೈಟ್ ಆದವರಿಗೆಲ್ಲ ಪಂಚ್ ನೀಡಿತ್ತು. ಕಳೆದ ವರ್ಷ ಭಯೊತ್ಪಾದಕ ಧಾಳಿ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಅದು ಪುನರಾವರ್ತನೆ ಆಗಲಿಲ್ಲ. ಈ ವರ್ಷ ಬಿಪಾಶಾನಂತಹ ತಾರೆಯರು ಈಗಾಗಲೇ ಪಂಚತಾರಾ ಹೋಟೆಲ್ಲಿನ ನೈಟಿಗೆ ಬುಕ್ ಆಗಿದ್ದಾರಂತೆ.
ಇವೆಲ್ಲ ಐಲುಗಳ ಮಧ್ಯದಲ್ಲಿ ನನ್ನಂತಹ-ನಿಮ್ಮಂತಹ ಕೆಲವು ಸಾತ್ವಿಕರಿರುತ್ತಾರೆ. ಅವರಿಗೆ ದಶಂಬರ ೩೧ಕ್ಕೂ ಜನವರಿ ೧ಕ್ಕೂ ಇರುವ ವ್ಯತ್ಯಾಸ ಗೋಡೆಯ ಮೇಲೆ ತೂಗುವ ಕ್ಯಾಲೆಂಡರು ಮತ್ತು ಬರೆಯುವ ಡೈರಿ ಮಾತ್ರ. ’ಅಷ್ಟಕ್ಕೂ ಅದನ್ನು ಹೊಸ ವರ್ಷ ಅಂತ ಹೇಳ್ದೋರ್ ಯಾರು? ಹೋಗ್ ಹೋಗ್ರಿ, ಹೊಸ ವರ್ಷ ಬರೋದು ಯುಗಾದಿಗೆ. ಬಂದ್ಬುಟ್ರು ದೊಡ್ದಾಗಿ...’ ಅಂತ ಹೇಳೋ ಈ ಮನಸ್ಥಿತಿಯವರೊಂದಿಗೆ ವಾದಕ್ಕಿಳಿಯುವುದು ವ್ಯರ್ಥ. ನಮಗೆ ಹೊಸ ವರ್ಷ ಜನವರಿಗೋ ಯುಗಾದಿಗೋ ಎಂಬ ಗಹನ ವಿಚಾರದ ಫೈಲನ್ನು ಸದ್ಯದ ಮಡ್ಡಿಗೆ ಮುಚ್ಚಿ ಹಾಕೋಣ. ಇದನ್ನು ಕ್ಯಾಲೆಂಡರ್ ಮಟ್ಟಿಗಾದರೂ ಹೊಸ ವರ್ಷ ಅಂತ ಗುರುತು ಹಾಕಿಕೊಳ್ಳೋಣ.
೧೯೯೯ ರಿಂದ ೨೦೦೯ರ ಈ ಹತ್ತು ವರ್ಷದಲ್ಲಿ ಆದ ಒಂದಷ್ಟು ಮಹತ್ವದ ಬದಲಾವಣೆಗಳ ಕುರಿತು ಒಂದು ಕ್ಷ-ಕಿರಣ.
ಮೊನ್ನೆ ಮೊನ್ನೆ ಯಾವುದೋ ಕೆಸೆಟ್ ಕೇಳಿದೆ. ಭಾರೀ ಒಳ್ಳೇ ಹಾಡು ಅಂತ ನಾವೇ ಕೆಲವೊಮ್ಮೆ ಹೇಳುತ್ತೇವೆ. ಆದರೆ ಸ್ವಲ್ಪ ಆಲೋಚಿಸಿ, ಅದು ಕೆಸೆಟ್ಟೋ ಸಿಡಿಯೋ? ಈಗ ಕೆಸೆಟ್ಟಂಬ ಧ್ವನಿ ಸುರುಳಿ ಸುತ್ತಿ ಮಲಗಿದೆ. ನಾವೀಗ ಹಾಡು ಕೇಳುವುದು ಟೇಪ್ ರೆಕಾರ್ಡರಿನಲ್ಲಲ್ಲ. ಆ ಜಾಗಕ್ಕೆ ಈಗ ಕಂಪ್ಯೂಟರು, ಮೊಬೈಲು, ಐಪಾಡುಗಳು ಬಂದು ಕೂತಿವೆ. ಮೈಸೂರು ಅನಂತಸ್ವಾಮಿ, ಯಶವಂತ ಹಳಿಬಂಡಿ, ಸಿ.ಅಶ್ವತ್,ಪಿ.ಕಾಳಿಂಗರಾಯರು, ಯೇಸುದಾಸ್, ಎಸ್ಪಿಬಿ, ಪಿಬಿಎಸ್, ಮುಖೇಶು, ಕಿಶೋರ್ ಕುಮಾರು ಅಲ್ಲದೆ ಮೈಕೆಲ್ ಜಾಕ್ಸನ್ನೂ ನಮ್ಮ ಮೊಬೈಲಿನಲ್ಲಿ ಬಂದು ಕೂತಿದ್ದಾರೆ. ಗುಂಡಿ ಒತ್ತಿದ ಕೂಡಲೆ ಹಾಡಲು ಶುರುಮಾಡಿತ್ತಾರೆ. ಅರೆ! ಒಂದು ದಶಕದಲ್ಲಿ ಏನೆಲ್ಲಾ ಆಗಿ ಹೋಯ್ತಲ್ಲ...
ಸಂಗೀತದಲ್ಲಿ ಹೀಗಾದರೆ ಕಂಪ್ಯೂಟರ್ ಕ್ಷೇತ್ರದಿಂದ ಮರೆಯಾದ ಒಂದು ಸಾಧನವಿದೆ. ಅದು ಪ್ಲಾಪಿ. ಅದರ ಸಾಮರ್ಥ್ಯ ಜುಜುಬಿ ೧.೪೪ ಎಂಬಿ. ನನ್ನ ಕೆಲವು ಆರಂಭದ ಬರಹಗಳನ್ನು ಪ್ಲಾಪಿಯಲ್ಲಿ ಹೆಮ್ಮೆಯಿಂದ ಸಂಗ್ರಹಿಸಿ ಇಟ್ಟದ್ದು ನನಗೆ ಈಗಲೂ ಚೆನ್ನಾಗಿ ನೆನಪಿದೆ. ಈಗ ಸಿಡಿ, ಡಿವಿಡಿ, ಯುಎಸ್ಬಿ ಡ್ರೈವ್ಗಳು ಪಾಪದ ಪ್ಲಾಪಿಯನ್ನು ಹೇಳ ಹೆಸರಿಲ್ಲದಂತಾಗಿಸಿದೆ. external hard discನ ೫೦೦ ಜಿಬಿಯೆದುರು ೧.೪೪ ಎಂಬಿ ಕೇಳುವಾಗ ಹ್ಹೆ ಹ್ಹೆ ಹ್ಹೆ... ಆದರೆ ಅವತ್ತು ಕಳಕೊಂಡರೆ ಒಂದು ಪೆಟ್ಟಿಗೆ ೧.೪೪ ಎಂಬಿ ಮಾತ್ರ ಕಳಕೊಳ್ಳುತ್ತಿದ್ದೆವು. ಅದೇ ಈಗ ಹೋದರೆ ಒಮ್ಮೆಗೇ ೫೦೦ ಜಿಬಿ! ರಾಮ ರಾಮ!!
ಈ ಹತ್ತು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮಿಂದ ದೂರವಾದ ಒಂದುಷ್ಟು ಸಂಗತಿಗಳನ್ನು ಮೊನ್ನೆ ’ದಿ ಗಾರ್ಡಿಯನ್’ ಪತ್ರಿಕೆ ಪಟ್ಟಿ ಮಾಡಿ ಪ್ರಕಟಿಸಿತ್ತು. ಅಲ್ಲಿನ ಕೆಲವನ್ನು ನೋಡಿದಾಗ ಅರರೆ ಹೌದಲ್ವ ಎಂದು ಅನಿಸಿದರೆ ಇನ್ನು ಕೆಲವು ಓದಲು ಮಜಬೂತಾಗಿದೆ.
ಕಪ್ಪು ಖಡ್ಗಮೃಗ ಮತ್ತು ಧೃವಗ ಐಸು(polar ice cap)ಗಳನ್ನು ಕೇಳುವಾಗ ಮನಸ್ಸು ತನ್ನಿಂದ ತಾನೇ ಜಗತ್ತಿನ ಭವಿಷ್ಯದ ಬಗ್ಗೆ ಯೋಚಿಸಿ ಕೊಪೆನ್ಹೇಗನ್ನಿಗೆ ಒಂದು ಗಿರಕಿ ಹೊಡೆದು ಬರುತ್ತದೆ.
ಸೂಪರ್ ಸಾನಿಕ್ ವಿಮಾನ ಯಾನ, ಪ್ಯಾಕ್ಸ್ ಯಂತ್ರ (ನೀವು ಈಗಲೂ ಉಪಯೋಗಿಸುತ್ತಿರಬಹುದು, ಆದರೆ ಈಗ ಅಂಗಡಿಗೆ ಹೋಗಿ ಕೇಳಿದರೆ ನಿಮ್ಮನ್ನೊಮ್ಮೆ ಆಪಾದ ಮಸ್ತಕ ನೋಡುತ್ತಾರೆ), ಪ್ಲಾಟ್ ಟಿವಿ (ಈಗ ತೆಳುವಾದ ಎಲ್ಸಿಡಿಗಳು ಬಂದು ತುಂಬಿದೆ) ಎಲೆಕ್ಟ್ರಾನಿಕ್ ವಿಬಾಗದಿಂದ ಮರೆಯಾದ ಪ್ರಮುಖ ವಸ್ತುಗಳು.
ಇವುಗಳ ನಡುವೆ ಭಾರತೀಯರಾದ ನಮ್ಮ ಮಟ್ಟಿಗೆ ಹೊಸ ಸೇರ್ಪಡೆ ಮರೆಯಾದ ಹಮಾರಾ ಬಜಾಜ್. ಬಾರೆ ರಾಜಕುಮಾರಿ/ ನಾವು ಹೋಗೋಣ ಜಂಬೂ ಸವಾರಿ/ ನಮ್ಮ ಹಳೆಯ ಸ್ಕೂಟರನ್ನೇರಿ ಎಂದು ’ಅವಳನ್ನು’ ಕುಳ್ಳಿರಿಸಿಕೊಂಡು ಒಂದು ರೌಂಡ್ ಹೊಡೆಯಲಾದರೂ ಒಂದು ಸ್ಕೂಟರಿದ್ದಿದ್ದರೆ ಚೆನ್ನ ಎಂದು ಅನಿಸುತಿದೆ ಯಾಕೋ ಇಂದು.
ನಮ್ಮ ಟೆಕ್ಕಿಗಳು, ಮ್ಯಾನೇಜ್ಮೆಂಟ್ ಗುರುಗಳು ಮರೆಯಲಾರದ ಒಂದು ’ಮರೆಯಾದ ಸಾಮ್ರಾಜ್ಯ’ ಅಮೆರಿಕಾದ ಲೀಮನ್ ಬ್ರದರ್ಸ್. ಅದನ್ನು ಮರೆಯುವವರುಂಟೆ? ವಿಶ್ವದ ಕುಸಿದ ಅರ್ಥ ವ್ಯವಸ್ಥೆಯ ಮೊದಲ ಇಸ್ಪೀಟೆಲೆ ಅಲ್ಲವೇ... ಆದರೆ ಗಮ್ಮತ್ತು ಅದಲ್ಲ. ಅಮೆರಿಕಾದ ಹಿಂದಿನ ಅಧ್ಯಕ್ಷ ಜಾರ್ಜ ಬುಷ್ಷನ್ನೂ ಜನ ಮರೆತಿದ್ದಾರಂತೆ. ಹೌದು ಪಬ್ಲಿಕ್ ಮೆಮೊರಿ ಬಹು ಅಲ್ಪ.
ಆದರೆ ಇವೆಲ್ಲವುಗಳ ಜತೆ ಜತೆಗೆ ನಾವು ಕಳೆದುಕೊಂಡ ಇನ್ನೂ ಒಂದು ಅಂಶ ಕೊಂಚ ಗಲಿಬಿಲಿ ಹುಟ್ಟಿಸುತ್ತದೆ. ಅಂತರಾಷ್ಟ್ರೀಯ ಬ್ಯಾಂಕುಗಳು ಲಾಭದ ಆಸೆಗೆ ಬಿದ್ದು ಕಂಡ ಕಂಡವರಿಗೆ ಕರೆದು ಕರೆದು ಸಾಲ ಕೊಟ್ಟು ಕೊನೆಗೆ ದುಡ್ಡಿಟ್ಟವರಿಗೆಲ್ಲ್ಲ ಮಕ್ಮಲ್ ಟೋಪಿ ಹಾಕಿತಲ್ಲ, ಅವೆಲ್ಲದರ ಪರಿಣಾಮವಾಗಿ ಈ ದಶಕದೊಂದಿಗೆ ನಾವು ಕಳಕೊಂಡ ಮತ್ತೊಂದು ಅಂಶ ’ನಂಬಿಕೆ’ ಛೆ! ಇದು ಬೇಕಿತ್ತ?
ಹಂದಿ ಜ್ವರವಲ್ಲ, ಆದರೂ ಇದು ಜ್ವರ
ಪ್ಲೇಗ್ ಮಾರಿ ಒಂದು ಕಾಲಕ್ಕೆ ಊರಿಗೆ ಊರನ್ನೇ ಸರ್ವನಾಶ ಮಾಡಿತ್ತು. ಅದಕ್ಕೂ ಮೊದಲು TB ಹೀಗೆಯೇ ಒಂದಷ್ಟು ಬಲಿ ತೆಗೆದುಕೊಂಡಿತ್ತು. ಪಾಶ್ಚಾತ್ಯ ರಾಷ್ಟಗಳಲ್ಲಿ ಈ ಖಾಯಿಲೆಗೆ consumption ಎಂಬ ಹೆಸರು ಅನ್ವರ್ಥವೇ ಆಗಿತ್ತು. ಇದಕ್ಕೆ ತುತ್ತಾದವರನ್ನೆಲ್ಲಾ ಆ ಖಾಯಿಲೆ ನುಂಗಿಹಾಕುತ್ತಿದ್ದುದಕ್ಕೆ ಈ ಅನ್ವರ್ಥನಾಮ. HIV, SAARS, Elephantiasis ನಂತಹ ಮಾರಣಾಂತಿಕ ರೋಗಗಳೂ ಸೇರಿ ಇತ್ತೀಚಿನ H1N1 ವರೆಗೆ ಮನುಕುಲವನ್ನು ಆಗ್ಗಿಂದಾಗ್ಗೆ ಬಾಧಿಸುತ್ತಲೇ ಬಂದ ವೈರಸ್ ಗಳು ಹಲವು. ಕಾಲಕಾಲಕ್ಕೆ ಹೊಸ ಹೊಸ ವೈರಸ್ಸುಗಳು ಹೊಸ ರೂಪ, ಗುಣ, ಹೆಸರಿನೊಂದಿಗೆ ಮಾನವ ಜನಾಂಗ ಇರುವ ವರೆಗೆ ಖಂಡಿತವಾಗಿ ಭಾದಿಸುತ್ತಲೇ ಇರುತ್ತವೆ.
ಕಂಪ್ಯೂಟರ್ ಯುಗ ಆರಂಭವಾದ ನಂತರ ಕಂಪ್ಯೂಟರ್ ನ ಒಳ ಹೊಕ್ಕು ಅವುಗಳ ಮೂಲೋದ್ದೇಶ ಹಾಳು ಮಾಡುವ ವೈರಸ್ಸುಗಳು ಹುಟ್ಟಿಕೊಂಡವು. trojan, sharukh.exe, zibingo, ಹೀಗೆ ಥರ ಥರದ ಹೆಸರಿನೊಂದಿಗೆ ವಿಧ ವಿಧದ ಗುಣಗಳುಳ್ಳ ವೈರಸ್ಸುಗಳು ಅಡಿಯಿಟ್ಟವು. ವೈರಸ್ಸುಗಳು ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಹುಸಿ ಕಡತ ಸೈಷ್ಟಿಸಿ ಹಾರ್ಡ್ಡಿಸ್ಕಿನ ಸ್ಥಳವನ್ನು ಅನಗತ್ಯವಾಗಿ ಆಕ್ರಮಿಸುತ್ತವೆ. ನೀವು ಉಪಯೋಗಿಸುವ ತಂತ್ರಾಂಶ-ಕಡತಗಳ ಹೆಸರನ್ನೆಲ್ಲ ಮರುನಾಮಕರಣ ಮಾಡಿ ನಿರುಪಯೋಗಿ ಆಗುವಂತೆ ಮಾಡುವ ದುರುದ್ದೇಶ ಕೆಲ ವೈರಸ್ಸುಗಳದ್ದು. ಇಷ್ಟಲ್ಲದೆ ಇನ್ನೂ ಏನೇನೋ ಖಯಾಲಿ ಇಟ್ಟುಕೊಂಡು ಕಂಪ್ಯೂಟರ್ ಜೊತೆಜೊತೆಗೆ ನಮ್ಮ ನಿಮ್ಮಂತ ಸಾತ್ವಿಕರ ತಲೆಯನ್ನೂ ಹಾಳು ಮಾಡುತ್ತವೆ.
ಮನುಷ್ಯರಿಗೆ HIV ಭಾದೆ ತಡೆಗಟ್ಟಲು ದಾರಿಗಳಿರುವಂತೆ ಕಂಪ್ಯೂಟರಿಗೂ ವೈರಸ್ ನಿರೋಧ ತಂತ್ರಾಂಶಗಳು ಲಭ್ಯವಿರುವುದು ನಿಮಗೆಲ್ಲ ತಿಳಿದೇ ಇದೆ. ಹಾಗಂತ ಅವುಗಳನ್ನು ಕಾಲ ಕಾಲಕ್ಕೆ ಅಪ್ ಡೇಟ್ ಮಾಡಿಕೊಳ್ಳದಿದ್ದರೆ ಸೂಕ್ತ ರಕ್ಷಣೆ ಸಿಗುವುದಿಲ್ಲ. ಹಾಗೆ ಮಾಡದಿದ್ದರೆ "ಥತ್! ಈ anti virus ಚೆನ್ನಾಗಿದೆ ಚೆನ್ನಾಗಿದೆ ಅಂತ ಎಲ್ಲಾ ಹೇಳ್ತಾರೆ. ಆದ್ರೆ ಏನೂ ಸೆಕ್ಯೂರಿಟಿ ಇಲ್ಲ. ವೈರಸ್ಸು ಬಂದು ಬಂದು ಬೀಳ್ತಾನೇ ಇದೆ. ಸಿಸ್ಟಮ್ಮು ಪ್ಯಾಸೆಂಜರ್ ರೈಲಿಗಿಂತಲೂ ನಿಧಾನ ಆಗಿದೆ" ಎಂದು ನನ್ನ ಪರಿಚಿತರಿಬ್ಬರು ಅಳಲು ತೋಡಿಕೊಂಡಂತೆ ನೀವೂ ಪರಿತಪಿಸುತ್ತೀರಿ. ಹೀಗೆ ಅಳಲು ತೋಡಿಕೊಂಡ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಸಹಪಾಠಿ, ಮತ್ತೊಬ್ಬ ಅವನಿಗೆ ಪಾಠ ಹೇಳುವ ಉಪನ್ಯಾಸಕ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಷ್ಟು ಗುರುಭಕ್ತನೇನಲ್ಲ ಆ ಶಿಷ್ಯ. ಆದರೆ ಜ್ಞಾನದ ಕೊರತೆಯಿಂದ ಅವರಿಬ್ಬರು ವೈರಸ್ಸಿನ ಗುಲಾಮರಾಗಿದ್ದಾರೆ. "ಆಗಾಗ ಅಪ್ ಡೇಟ್ ಮಾಡುವ ತನಕ ದೊರೆಯದಣ್ಣ ಶಕುತಿ" ಎಂದು ವೈರಸ್ ನಿರೋಧ ತಂತ್ರಾಂಶ ಪಿಸುಗಿಟ್ಟಿದ್ದು ಆ ದಿಗ್ಗಜರಿಗೆ ಕೇಳಿಸಲಿಲ್ಲವಷ್ಟೆ.
ಕಂಪ್ಯೂಟರ್ ಇಂಟರ್ನೆಟ್ ಬಳಕೆ ವ್ಯಾಪಕವಾಗಿರುವ ಈ ಕಾಲದಲ್ಲಿ ವೈರಸ್ಗಳಿಗೆ ಧಾಳಿಯಿಡಲು ಹಲವು ಮಾರ್ಗಗಳಿವೆ. ಹಾಗಾಗಿ ಇವತ್ತು anti virus software ನಿರ್ಮಾಣವೂ ಒಂದು ದೊಡ್ಡ ಉದ್ಯಮ. ಸೆಕ್ಯುರಿಟಿ ಹೆಸರಿನಲ್ಲಿ ಒಂದಷ್ಟು ದುಡ್ಡು ಮಾಡುತ್ತವೆ ಈ ಕಂಪೆನಿಗಳು. ಕೆಲವು ವೈರಸ್ಸುಗಳನ್ನು ಇಂತಹ ಕಂಪೆನಿಗಳೇ ಬರೆಸುತ್ತವೆ ಎಂಬ ಆರೋಪ ಇವರ ಮೇಲೆ ಹೊರಿಸುವವರು ಇದ್ದಾರೆ. ಆದರೆ ಸತ್ಯಾಂಶವೇನೆಂದು ಸರಿಯಾಗಿ ನನಗೆ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಕಂಡುಕೊಳ್ಳಲು ಲಿಬರ್ಹಾನ್ ಆಯೋಗ ರಚಿಸಲು ಮಾನ್ಯ ಸೋನಿಯಾ ಗಾಂಧಿಯವರನ್ನು ಓದುಗ ಮಹಾಶಯರು ವಿನಂತಿಸಿಕೊಳ್ಳಬಹುದು. ಸುಮಾರು ೨೦೨೪ರ ಹೊತ್ತಿಗೆ ವಿಸ್ತೃತ ವರದಿಯೊಂದು ಹೊರಬೀಳಬಹುದು. ಮತ್ತು ಅದರಲ್ಲಿ ಲಾಲ್ ಕೃಷ್ಣ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿಯಂತಹ ಮುತ್ಸದ್ದಿಗಳು ಆರೋಪಿ ಸ್ಥಾನದಲ್ಲಿ ನಿಂತಿರಬಹುದು!
ಇತ್ತೀಚೆಗೆ ವೈರಸ್ ಕ್ಷೇತ್ರದಲ್ಲಿ ಹೊಸತೊಂದು ಬೆಳವಣಿಗೆ ಕಾಣಿಸುತ್ತಿದೆ. ಇಷ್ಟು ಕಾಲ ಪಿಸಿಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದ ವೈರಸ್ ಗಳು ಈಗೀಗ ಮೊಬೈಲ್ ಫೋನುಗಳತ್ತ ದೃಷ್ಟಿ ಬೀರಿದೆ. ಮೊಬೈಲು ಈಗ ನಿತ್ಯ ಬದುಕಿನ ಅವಿಭಾಜ್ಯ ಅಂಗ. ಈ ಕ್ಞೇತ್ರ ಟೆಕ್ಕಿ ಪಂಡಿತರ ಸರ್ವ ಲೆಕ್ಕಾಚಾರಗಳನ್ನೂ ಮೀರಿದ ವೇಗದಲ್ಲಿ ಬೆಳೆಯುತ್ತಿರುವುದು ಸತ್ಯ. ಇಂತಹ ಸನ್ನಿವೇಷದಲ್ಲಿ ವೈರಸ್ಸುಗಳು ಇತ್ತ ಕಡೆ ಹೊರಳಿದ್ದು ಅಚ್ಚರಿಯ ಸಂಗತಿಯಲ್ಲ.
ಕೆಲ ತಿಂಗಲ ಹಿಂದೆ ರಷ್ಯಾದ anti virus ದೈತ್ಯ ಕ್ಯಾಸ್ಪರ್ ಸ್ಕೈ (kaspersky)ನ ಕೇಂದ್ರ ಕಚೇರಿಯಿಂದ ವರದಿಯೊಂದು ಹೊರ ಬಿದ್ದಿದೆ. GPRS ಬಳಸುವ ನೋಕಿಯ ಫೋನುಗಳನ್ನು ಒಂದು ಬಗೆಯ ವೈರಸ್ ಹೊಕ್ಕಿತಂತೆ. ಬಳಕೆಯ ಬಿಲ್ಲನ್ನು ತನ್ನಿಂದ ತಾನೇ ಒಂದಷ್ಟು ಹೆಚ್ಚುವಂತೆ ಮಾಡುವುದು ಈ ಕ್ರಿಮಿಗಳ ಕೆಲಸ.
ನೊಕಿಯದ ಕಥೆ ಹೀಗಾದರೆ ಐ ಫೋನಿನದ್ದು ಬೇರೆಯೇ ಕುತೂಹಲಕಾರಿ ಕಥೆಯಿದೆ. ನಿಮಗೆ ಗೊತ್ತಿರಬಹುದು, ಐ ಫೋನಿಗೆ ಅದರದ್ದೇ ಆದ ಕೆಲ ಸಿದ್ಧಾಮತಗಳಿದೆ. ಆಪಲ್ ಅನುಮೋದಿಸಿದ ತಂತ್ರಾಂಶವನ್ನು ಮಾತ್ರ ಅದರಲ್ಲಿ ಬಳಸಲು ಸಾಧ್ಯ. ಕಾಲಕಾಲಕ್ಕೆ ಹೊಸ ಆವಿಷ್ಕಾರಗಳಾದಂತೆ ಅದನ್ನು ಹಾಗ್ಹಾಗೇ ಅಪ್ಡೇಟ್ ಮಾಡಬಹುದು. ಆದರೆ ಕೆಲವು ಹ್ಯಾಕರ್ ಗಳು ಐ ಫೋನಿನ ತಂತ್ರಾಂಶವನ್ನು ಒಂದಷ್ಟು ಬದಲಿಸಿ ಅದರ ಕಟ್ಟುಪಾಡುಗಳನ್ನು ಮೀರಿ ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ. ಇಂತಹ ಐ ಫೋನುಗಳನ್ನು jailbroken iPhones ಎಂದು ಕರೆಯುತ್ತಾರೆ.
ಇಂತಹ ಐ ಫೋನುಗಳೆಡೆ ಐ ಇಟ್ಟು ಆಷ್ಟ್ರೇಲಿಯಾದ ಒಬ್ಬ ಪೋರ ಇಂದು ಪ್ರಯೋಗ ನಡೆಸಿದ. ಇವನ ಪ್ರಾಯೋಗಿಕ ವೈರಸ್ ಹೆಚ್ಚೇನೂ ಕಿತಾಪತಿ ಮಾಡಲಿಲ್ಲ. ಬದಲಾಗಿ ಈ ವೈರಸ್ ಭಾದಿತ jailbroken iPhoneಗಳು ೮೦ರ ದಶಕದ ಹೆಸರಾಂತ ಪಾಪ್ ತಾರೆ ರಿಕ್ ಆಸ್ಲೆಯ ಫೋಟೊವೊಂದನ್ನು ತನ್ನ ಪರದೆಯಲ್ಲಿ ತೋರಿಸುತ್ತದಷ್ಟೆ. ಈ ವೈರಸ್ ಬರೆದ ಬುದ್ದಿವಂತ ಪೋರ (ರೇಣುಕಾಚಾರ್ಯ ಅಲ್ಲ) ಆ ಪಾಪ್ ತಾರೆಯ ಪಾಪದ ಅಭಿಮಾನಿಯಿರಬೇಕು.
ಇದೇನೂ ಅಂತಹ ಘನವಿಚಾರವಲ್ಲ ಅನ್ನುತ್ತೀರಾ..? ಆದರೆ ಇಲ್ಲಿ ಗಹನವಾದ ಒಂದಂಶವನ್ನು ರಕ್ಷಣಾ ತಜ್ಞರು ಗಮನಿಸಿದ್ದಾರೆ. ಈ ಎರಡು ಪ್ರಕರಣಗಳು ಮುಂದಿನ ದಿನಗಳಲ್ಲಿ ಆಗಬಹುದಾದ ತೊಂದರೆಯ ಸೂಚನೆ ಎಂದು ಅವರ ಅಂಬೋಣ. ಮುಂದಿನ ದಿನಗಳಲ್ಲಿ Mobile XP, Blackberry, ಗೂಗಲ್ ನ Androidಗಳನ್ನು ಗುರಿಯಾಗಿಸಿ ಘಟಾನುಘಟಿ ವೈರಸ್ಸುಗಳು ಬರಲಿದೆಯೆಂದು ಭವಿಷ್ಯ ನುಡಿದಿದ್ದಾರೆ.
ಇದೆಲ್ಲ ಕೇಳಿದ ಮೇಲೆ ನನಗೆ ಅಂತಹ ಐಶಾರಾಮಿ ಫೊನುಗಳ ಮೇಲೆ ಮೋಹವಿಲ್ಲ. ಇದು "ಕೈಗೆಟುಕದ ದ್ರಾಕ್ಷೆ...." ಎಂಬ "ನರಿ" ಸಿದ್ಧಾಂತವಲ್ಲ. ಫೋನುಗಳು ದೂರದವರೊಂದಿಗೆ ಮಾತನಾಡಲು ಇರುವ ಸಾಧನ. ಅದರಿಂದ ಆ ಒಂದು ಕಾರ್ಯ ಸಮರ್ಥವಾಗಿ ನಡೆದರೆ ಸಾಕು ಎಂಬ ordiನರಿ ಸಿದ್ಧಾಂತದ ಸಾಮಾನ್ಯ ಮನುಷ್ಯ ನಾನು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)