ಸರಕಾರದ ಕೆಲಸ ಯಾರ ಕೆಲಸ...?


ಅವನಿಗೊಬ್ಬಳು ಚಂದದ ಹೆಂಡತಿ. ಗಂಡ ಹೆಂಡಿರ ನಡುವೆ ಜಗಳ-ಮುನಿಸು ಏನೂ ಇರಲಿಲ್ಲ. ನೋಡುಗರ ಕಣ್ಣಿಗೆ ಅವರದ್ದು ಒಳ್ಳೆಯ ದಾಂಪತ್ಯ. ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆದರೆ ಮನೆಯಲ್ಲಿ ಮಕ್ಕಳ ದನಿಯಿಲ್ಲ.
ನೆರೆಹೊರೆಯವರಿಗೆ ಒಳಗಿನ ವಿಚಾರ ಏನೆಂದು ತಿಳಿದಿರಲಿಲ್ಲ. ಮಕ್ಕಳಿಲ್ಲದಿದ್ದರೆ ಏನು, ಅವನು ದುಬೈನಲ್ಲಿ ಬೇಕಾದಷ್ಟು ದಿರಂ ದುಡಿಯುತ್ತಿದ್ದ. ಮನೆಯಲ್ಲಿ ಐಶಾರಾಮಿ ವಸ್ತುಗಳಿಗೆ ಕೊರತೆಯಿರಲಿಲ್ಲ.
ಇಂತಿದ್ದಾಗ ಪಕ್ಕದ ಮನೆಗೆ ಒಬ್ಬ ಯುವಕನ ಆಗಮನವಾಗುತ್ತದೆ. ದುಬೈ ಬಾಬುವಿನ ಹೆಂಡತಿಯೊಂದಿಗೆ ಸ್ನೇಹ ಸಂಪಾದಿಸುತ್ತಾನೆ. ಮೊದಲು ಹಾಯ್-ಬಾಯ್‌ಗೆ ಮಾತ್ರ ಸೀಮಿತವಾಗಿದ್ದ ಸ್ನೇಹ ಕಾಲ ಸರಿದಂತೆ, ಹೋಗಿ ಬರುವ ಮಟ್ಟಕ್ಕೆ ಬರುತ್ತದೆ. ಕೊನೆ ಕೊನೆಗೆ ಇವಳ ಇಷ್ಟಾರ್ಥಗಳನ್ನೂ ಯುವಕ ನೋಡಿಕೊಳ್ಳುತ್ತಾನೆ. ಹೀಗಿದ್ದರೂ ದೂರದಲ್ಲಿದ್ದ ದುಬೈ ಬಾಬುವಿಗೆ ಇದ್ಯಾವುದರ ಸುಳಿವೂ ಸಿಗಲಿಲ್ಲ.
ಒಮ್ಮೆ ವಾರ್ಷಿಕ ಭೇಟಿಗೆ ಊರಿಗೆ ಬಂದ ಅವನು ಒಂದು ತಿಂಗಳಿದ್ದು ಮರಳಿದ. ಮರಳಿದ ಮೂರು ತಿಂಗಳ ನಂತರ ಹೆಂಡತಿ ತಾನು ಗರ್ಭಿಣಿಯಾದ ವಿಚಾರವನ್ನು ಇಂಟರ್‌ನ್ಯಾಶನಲ್ ಕರೆ ಮೂಲಕ ತಿಳಿಸಿದಳು. ಕೆಲ ಸಮಯದ ಬಳಿಕ ಒಂದು ಮುದ್ದಾದ ಮಗುವಿಗೆ ಜನ್ಮವಿತ್ತಳು.
ಆದರೆ ಸೂಕ್ಷ್ಮವಾಗಿ ಗಮನಿಸಿ ತಾಳೆ ಹಾಕಿ ನೋಡಿದಾಗ ದುಬೈ ಬಾಬು ಊರಿಂದ ಮರಳಿದ ದಿನಕ್ಕೂ ಈ ಮಹಾತಾಯಿ

ಹೆತ್ತ.ದಿನಕ್ಕೂ ಹತ್ತು ತಿಂಗಳ ಅಂತರವಿತ್ತು! ಪಾಪದ ದುಬೈ ಬಾಬು ಇದರ ಪರಿವೆ ಇಲ್ಲದೆ ಅಂತೂ ಆ ಖುದಾ, ದೇವ್ರು ಕಣ್ ಬಿಟ್ಟ. ನಂ ದುಖಾನ್‌ಗೂ ಏಕ್ ಬಚ್ಚಾ ಆಗಯಾ ಎಂದು ಬಿಚ್ಚು ಮನಸ್ಸಿನಿಂದ ಸಂತಸಪಟ್ಟ. ಇದೆಲ್ಲವನ್ನೂ ಗಮನಿಸುತ್ತಿದ್ದ ದೇವರು ಪಕ್ಕದ ಮನೆಯಲ್ಲಿ ಹುಳ್ಳಗೆ ನಕ್ಕ!
ಇದೊಂದು ಕತೆ. ನನ್ನ ಮಿತ್ರ ರಾಮಮೂರ್ತಿ ಹೇಳಿದ್ದು. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ನಾವು ಕರ್ಮಣ್ಯೇ ವಾಧಿಕಾರಸ್ತೆ ಮಾಡದಿದ್ದರೆ ಏನಾಗುತ್ತದೆ ಎನ್ನುವದಕ್ಕೆ ದೃಷ್ಟಾಂತವಾಗಿ ಈ ಕಥೆಯನ್ನು ತನ್ನ ಎಂದಿನ ತುಂಟತನದೊಂದಿಗೆ ಹೇಳಿದ್ದ. ಈ ಕಥೆ ಮೊನ್ನೆ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯವರು ವಿಧಾನ ಸೌಧದ ಬಗ್ಗೆ ಹೇಳುತ್ತಿದ್ದಾಗ ಪುನಃ ನೆನಪಾಯಿತು.
ವಿಧಾನ ಸೌಧದ ಹೆಬ್ಬಾಗಿಲ ಮೇಲ್ಭಾಗದಲ್ಲಿ ಸರಕಾರದ ಕೆಲಸ ದೇವರ ಕೆಲಸ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದೆಯಲ್ಲ. ನೀವೂ ನೋಡಿರುತ್ತೀರಿ.

ಆದರೆ ಸರಕಾರದ ಕೆಲಸ ಮಾಡುವವರು ಹಾಗೆ ಮಾಡುತ್ತಿದ್ದಾರಾ ಎಂದು ನಿಮಗೆ ಅನುಮಾನ ಕಾಡಬಹುದು. ರಾಜಕಾರಣಿಗಳಲ್ಲಿ ಬಹುತೇಕರು ಲಜ್ಜೆಗೆಟ್ಟಿದ್ದಾರೆ. ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸ ಆಗಬೇಕಾದರೆ ಕಿರ್ಚಿಯಲ್ಲಿರುವವರಿಗೆ ಟೀ ಕುಡಿಯಲು ಒಂಸ್ವಲ್ಪ ಕಾಸ್ ಕೊಡ್ಬೇಕು. ಕೆಲವು ಅಧಿಕಾರಿಗಳು ಟೀ ಕುಡಿಯುವ ಪರಿ ನೋಡಿ ಸಾಮಾನ್ಯರು ಕಂಗೆಟ್ಟಿದ್ದಾರೆ.
ಹೀಗೆಲ್ಲಾ ಯಾಕೆ ಆಗ್ತಿದೆ ಗೊತ್ತಾ?
ಸರಕಾರಿ ಕೆಲಸ ದೇವರ ಕೆಲಸ ಎಂಬುದು ಇಂಥವರಿಗೆ ಮನವರಿಕೆಯಾಗಿದೆ. ಹಾಗಾಗಿ ಸರಕಾರಿ ಕೆಸ ನಮ್ಮದಲ್ಲ, ಅದು ದೇವರದ್ದು. ಅದನ್ನು ಅವನು ನೋಡಿಕೊಳ್ಳುತ್ತನೆ. ನಾವು ಒಂದಷ್ಡು ಟೀ ಕುಡಿಯೋಣ ಎಂಬ ನೀತಿ ಇವರದ್ದು. ಈ ಕಾರಣಕ್ಕಾಗಿಯೇ ಹಿಂದೆಮ್ಮ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಆ ಬರಹವನ್ನು ವಿಧಾನಸೌಧದಿಂದ ಅಳಿಸಿ ಹಾಕಿಸಿದ್ದರು ಎಂದು ದೊರೆಸ್ವಾಮಿಯವರು ನೆನೆಯುತ್ತಾರೆ. ಹಾಗೆ ಪಾಟೀಲರು ತೆಗೆಸಿದ್ದುದನ್ನು ಗುಂಡೂರಾಯರು ಸೀಟಿಗೆ ಬಂದಾಗ ಪುನಃ ಬರೆಸಿದರು.

                                                                       ವೀರೇಂದ್ರ ಪಾಟೀಲ್‌



                                                                       ಗುಂಡೂರಾವ್‌
ಹೌದೂ... ಇದನ್ನೆಲ್ಲ ಕಟ್ಕೊಂಡು ನಮ್ಗೇನಾಗ್ಬೇಕು? ಸರಕಾರ ಏನ್ ಬೇಕಾದ್ರೂ ಮಾಡ್ಕೊಳ್ಲಿ. ನಮಗ್ಯಾಕೆ, ನಾವ್ ಯಾಕೆ ತಲೆ ಕೆಡಿಸ್ಕೋಬೇಕು? ದೇವ್ರಿದ್ದಾನೆ, ಎಲ್ಲಾ ನೋಡ್ಕೋತಾನೆ ಬಿಡಿ..!