
ಗಮ್ಮತ್ತಿನ ವಿಚಾರವೆಂದರೆ ಇಡೀ ಬರಹದಲ್ಲಿ ಒತ್ತೇ ಒಂದು ಪೂರ್ಣವಿರಾಮ ಸುಳಿಯುವುದೇ ಇಲ್ಲ. ಅದು ಬರುವುದು ಕೊನೆಯ ಒಂದು ಸಾಲಿನ ಕೊನೆಯಲ್ಲಿ ಮಾತ್ರ. ಅಲ್ಲಿಗೆ ಬರಹ ಸಮಾಪ್ತಿಗೊಳ್ಳುತ್ತದೆ. ಬರಹದ ತುಂಬಾ ವಾಕ್ಯವಾಗಲು ಒದ್ದಾಡುವ, ಕೇವಲ ಕಾಮಾಗಳಿಂದಷ್ಟೇ ಕೊನೆಗೊಳ್ಳುವ ಸಾಲುಗಳು. ಪ್ರತಿ ಸಾಲೂ ಬದುಕಲು ಒದ್ದಾಡುವುದು ಕಾಣುತ್ತದೆ.
ಓದಿದಾಗ ನನಗೆ ಥಟ್ಟನೆ ನೆನಪಾದದ್ದು ೨೦ನೇ ಶತಮಾನದ ಇಂಗ್ಲೀಷ್ ಕವಿ ಯೇಟ್ಸ್. ಈತ ಬರೆಯುತ್ತದ್ದ ನವ್ಯ ಪದ್ಯಗಳು ಒಂದು ರೀತಿ ಹಾಗೆಯೇ. ಇಡೀ ಕವಿತೆಯ ಒಂದು ಪೂರ್ಣ ಮೊತ್ತದ ಅರ್ಥ ಹೊತ್ತು ಆ ಕವಿತೆಯ ರೂಪವೂ ಹೊರಬರುತ್ತಿತ್ತು. ಐರ್ಲೆಂಡಿನಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ೧೯೧೬ರ ಏಪ್ರಿಲ್ ೨೪ರಂದು ಎದ್ದ ದಂಗೆಯ (ಅಥವಾ ಹೋರಾಟ ಅನ್ನಿ) ಕುರಿತು ಬರೆದ ಪದ್ಯ ಈಸ್ಟರ್ ೧೯೧೬ನ ಪ್ಯಾರಾಗಳಲ್ಲಿ ಒಂದರಲ್ಲಿ ೧೬ ಸಾಲಿದ್ದರೆ ಮತ್ತೊಂದರಲ್ಲಿ ೨೪.
ಹಾಗೆ ನೋಡಿದರೆ ಆ ಕಾಲದ ಹೆಚ್ಚಿನ ಇಂಗ್ಲೀಷ್ ಕವಿಗಳು ಇಂತಹ ಒಂದು ಕರಾಮತ್ತನ್ನು ಪದ್ಯಗಲಲ್ಲಿ ತುಂಬಲು ತವಕಿಸುತ್ತಿದ್ದರು. ಇಂಗ್ಲೀಷ್‌ನ ನವ್ಯ ಯುಗದ ಹರಿಕಾರ ಈಲಿಯಟ್‌ನ The Love Song of J Alfred Prufrock ಕೂಡ ಹೀಗೆಯೇ. ಅದರ ನಾಯಕನ ಸ್ಥಿಮಿತ ರಹಿತ ಧೋರಣೆಗಳನ್ನು ಅತಂತ್ರ ಸಾಲುಗಳೂ ಹೇಳುತ್ತವೆ.
ಈಲಿಯೆಟ್‌ನ ವೇಸ್ಟ್ ಲ್ಯಾಂಡಂತೂ ಇಂತಹ ಅದೆಷ್ಟು ಒಳಗುಟ್ಟು ಹೊಂದಿದೆ ಎಂದು ಬಹುಶಃ ಆತನಿಗೂ ಗೊತ್ತಿರಲಿಕ್ಕಿಲ್ಲ. ಸರಿ ಸುಮಾರು ೨೦ ಪುಟಗಳಷ್ಟಿರುವ ಆ ಪದ್ಯದ ಕೊನೆಯ ಸಾಲಿಗೆ ಮುಟ್ಟುತ್ತಿದ್ದಂತೆ ಮೊದಲಿನ ಸಾಲು ಏನು ಓದಿದ್ದೆ ಎಂದು ಮರೆತೇ ಹೋಗುತ್ತದೆ. ಆದರೆ ಕೊನೆಯ ಎರಡು ಸಾಲುಗಳು ದಾ, ದಯಾದ್ವಂ, ದಮ್ಯತಾಃ/ ಶಾಂತಿಃ ಶಾಂತಿಃ ಶಾಂತಿಃ ಎಂದು ಕೊನೆಗೊಳ್ಳುತ್ತದೆ. ಭಾರತೀಯ ತತ್ವಶಾಸ್ತ್ರದ ಕಡೆಗೆ ಆ ಕವಿ ಇಟ್ಟುಕೊಂಡಿದ್ದಂಥ ಒಂದು ಬಗೆಯ ಸೆಳೆತಕ್ಕೆ ಸಾಕ್ಷಿ ಒದಗಿಸಿದಂತೆ ಭಾರತೀಯ ಮನಸ್ಸುಗಳಿಗೆ ಅನಿಸುತ್ತದೆ.

ಹಾಗಾದರೆ ಇಂದು ನಮ್ಮ ಪಾಲಿಗೆ ಬೆಂಗಳೂರೂ ವಾಕ್ಯವಾಗಲು ಹೆಣಗಾಡುವ ಸಾಲುಗಳ ಹಾಗೆ ಆಗಿದೆಯಾ. ಇದ್ದರೂ ಇರಬಹುದು. ಆದರೆ ನೋಡುವ ಕಣ್ಣು ಬದಲಾದರೆ ಅದೂ ಬದಲಾಗಬಹುದು.
ಹೆಚ್ಚು ಬೇಡ. ಸುಳ್ಯ ಸಮೀಪದ ಒಂದು ರಕ್ಷಿತಾರಣ್ಯದ ಬದಿಗಿರುವ ನಮ್ಮ ಹಳೇ ಮನೆಯಲ್ಲಿ ಧೋ ಎಂದು ಮಳೆ ಸುರಿವಾಗ ಮನೆಯಲ್ಲಿನ ಪ್ರತಿಯೊಬ್ಬರದ್ದೂ ಒಂದೊಂದು ದೃಷ್ಟಿ. ಹಂಚುಗಳೆಡೆಯಿಂದ ಸೋರುವ ನೀರಿಗೆ ಗತಿ ಕಾಣಿಸಲು ಚಿಕ್ಕಮ್ಮ ಅಲ್ಲಲ್ಲಿ ಪಾತ್ರೆ-ಬಕೇಟು ಇಡಲು ಅಣಿಯಾಗುತ್ತಾರೆ, ಚಿಕ್ಕಪ್ಪ ಒಮ್ಮೆ ದೀರ್ಘ ಉಸಿರೆಳೆದು ತೋಟದೆಡೆ ಕಣ್ಣು ಹಾಯಿಸುತ್ತಾರೆ, ಹೈಸ್ಕೂಲು ಹುಡುಗ ತಮ್ಮನು ಟಿವಿ ಪ್ಲಗ್ಗು ತೆಗೆದು ಇನ್ನೇನು ಎಂಬ ಶೂನ್ಯ ಭಾವದಲ್ಲಿ, ಅಣ್ಣನ ಮಗನಾದ ಪ್ರೈಮರಿ ಹುಡುಗ ಹಳೇ ಒಏಪರಿನ ರಾಶಿಯಲ್ಲಿ ಕೂತು ಕಾಗದದ ದೋಣಿ ಮಾಡುವ ತರಾತುರಿಯಲ್ಲಿ, ಹಿಂದೆ ಅಜ್ಜಿ ಇದ್ದಾಗ ಮಕ್ಕಳೇ ಜಾರಬೇಡಿ ಎಂದು ಎಚ್ಚರಿಕೆ ಕೊಡುವ ಎಚ್ಚರದಲ್ಲಿರುತ್ತಿದ್ದರು. ಹೀಗೆ ಹಳ್ಳಿ ಬದುಕೂ ಏಕಾಂತ-ಧಾವಂತಗಳ ನಡುವೆ ಸಾಗುತ್ತದೆ ಅಲ್ಲವಾ.
ಆದರೆ ಅವೆಲ್ಲವೂ ಸಾಹಿತ್ಯದಲ್ಲಿ ದಾಖಲಾಗುವ ಪರಿಯೇ ವಿಸ್ಮಯ. ಸಾಹಿತ್ಯವೆಂದರೆ ಮಳೆಗಾಲದಲ್ಲಿ ನನ್ನ ಅಣ್ಣನ ಮಗ ಆಕಾಶ

ಹಾಗೆ ಕಾಗದದ ದೋಣಿಯಂತೆ ಸಾಗುವ ಸಾಹಿತ್ಯ ಕೆಲವೊಮ್ಮೆ ವಿಮರ್ಶಕರ ಕೈಗೆ ಸಿಕ್ಕು ಅಲ್ಲಿಯೇ ಅಸ್ಥಿರಗೊಳ್ಳುವುದೂ ಉಂಟು. ಹಾಗಾದರೆ ಸಾಹಿತ್ಯಕ್ಕೆ ಬ್ರ್ಯಾಂಡೆಡ್ ವಿಮರ್ಶಕರಿಂದ ಮುಕ್ತಿಯೇ ಇಲ್ಲವೇ? ಉಂಟೇನೋ... ನೀರಿನ ಓಘ ಹೆಚ್ಚಾದರೆ ಕಲ್ಲಿಗೆ ಸಿಕ್ಕ ದೋಣಿ ಅಲ್ಲಿಂದ ಕದಲುತ್ತದೆ. ಸಾಹಿತ್ಯದ ವಿಚಾರದಲ್ಲಿ ಈ ನೀರೇ ಓದುಗ. ಓದುಗರು ಹೆಚ್ಚಾದಂತೆ ಸಾಹಿತ್ಯವೂ ಸ್ವತಂತ್ರವಾಗುತ್ತದೆ. ಕೃತಕ ಭಾವದ ಎಲ್ಲೆ ಮೀರಿ ಸಾಗುತ್ತದೆ.
ಅದು ಹೇಗೇ ಇರಲಿ, ನನಗ್ಯಾಕೆ? ಹೇಳೀ ಹೇಲಿ ಕಡೆಗೆ ನಾನೂ ಒಬ್ಬ 'ಒಳ್ಳೆಯ' ವಿಮರ್ಶಕನೆಂದು ಬ್ರ್ಯಾಂಡ್ ಆಗಬೇಕೇ...
ಬ್ರ್ಯಾಂಡ್ ಆಗುವುದು ಬೇಡವೇನೋ ಸರಿ. ಆದರೆ ಪ್ರತೀ ಮನುಷ್ಯ ತನ್ನೊಳಗೇ ಒಬ್ಬ ವಿಮರ್ಶಕನನ್ನು ಇಟ್ಟುಕೊಳ್ಳದಿದ್ದರೆ ಹೇಗೆ? ಕನಿಷ್ಟ ತನ್ನ ಒಳಗಿನ ಒಳಗಿನವನನ್ನು ವಿಮರ್ಶೆ ಮಾಡಲಾದರೂ ಒಬ್ಬ ಒಳಗಿನ ವಿಮರ್ಶಕ ಬೇಡವೇ? ಆದರೆ ಈ ವಿಮರ್ಶಕ ನಮ್ಮೊಳಗಿನವನೇ ಆಗಿದ್ದರೆ ಅವನಿಂದ ಸರಿಯಾದ ವಿಮರ್ಶೆ ನಿರೀಕ್ಷಿಸಲು ಸಾಧ್ಯವಾ ಎಂಬುವುದು ಪ್ರಶ್ನೆ. ಬೇಡ, ವಿಮರ್ಶೆಗಿಳಿಯುವುದು ಬೇಡ.
ಇಷ್ಟಾದರೂ ಮತ್ತೊಮ್ಮೆ ನನ್ನ ಮನಸ್ಸು ಎಳೆಯುವುದು ಮತ್ತೆ ಸಾಹಿತ್ಯದ ಕಡೆ. ಸರಿ, ಬದುಕು ಬದಲಾದಂತೆ ಸಾಹಿತ್ಯವೂ, ಅದರ ರೂಪ ಸ್ವರೂಪವೂ ಬದಲಾಗುತ್ತದೆ. ಹಾಗಾದರೆ ಪಂಪ, ರನ್ನ, ಪೊನ್ನ, ಜನ್ನರಾದಿಯಾಗಿ ನಮ್ಮ ಸಾಲು ಸಾಲು ಕವಿಗಳು ಶತ ಶತಮಾನ ಬರೆದರಲ್ಲ ಅದರೆಲ್ಲಿ ಸೋಜಿಗವೇನು ಗೊತ್ತೆ. ಹುಡುಕಿದರೂ ಫುಲ್‌ಸ್ಟಾಪು, ಕಾಮಾಗಳು ಇಲ್ಲದಿರುವುದು. ಬಹುಶಃ ಆಗಿನ ಕಾಲಕ್ಕೆ ಅವುಗಳ ಆವಿಷ್ಕಾರವೂ ಆಗಿರಲಿಲ್ಲ. ಮತ್ತು ಬಹುಶಃ ಆಗ ಅವುಗಳ ಅಗತ್ಯವೂ ಇರಲಿಲ್ಲ. ಆದರೆ ಅವರ ಇಡೀ ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ಸೂತ್ರವಿದೆ, ಭಾವವಿದೆ, ರಸವಿದೆ, ರೀತಿಯಿದೆ, ನೀತಿಯಿದೆ. ಅವರ ಪದ್ಯಗಳ ಎಳೆ ಛಂದಸ್ಸು.
ಫುಲ್‌ಸ್ಟಾಪು ಕಾಮಾಗಳ ಹಂಗು ಬಿಟ್ಟು ಅಂಥಾದ್ದೊಂದು ಛಂದಸ್ಸು ಬದುಕಿನ ಪ್ರತಿರೂಪವಾದರೆ, ಅಚಿಂತ್ಯ ಶಕ್ತಿಯಾಗಿ ಅದು ದಾರಿ ನಡೆಸಿದರೆ ಅದೆಷ್ಟು ಚೆನ್ನ...