ಸ್ವಲ್ಪ ಕತ್ತಲು, ಸ್ವಲ್ಪ ಮುಂಗಾರು

ಮತ್ತೆ ಮುಂಗಾರು ಒಂದು ಒಳ್ಳೆಯ ಕಥೆಯಿಟ್ಟು ಮಾಡಿದ ಸಿನಿಮಾ. ನಿರ್ದೇಶಕ ರಾಘವ ದ್ವಾರ್ಕಿ ಉತ್ತಮ ಪ್ರಯೋಗವೊಂದನ್ನು ಮಾಡಿದ್ದಾರೆ.
ಮುಂಬೈನ ಮೀನುಗಾರಿಕಾ ಬಂದರಿನಲ್ಲಿ ಬದುಕು ಕಂಡುಕೊಂಡ ಕನ್ನಡದ ಮಲೆನಾಡ ಮಾಣಿ ನಾಣಿಯ ಸುತ್ತ ಕಥೆ ತೆರೆದುಕೊಳ್ಳುತ್ತದೆ. ಆರಂಭದ ಅರ್ಧ ಗಂಟೆ ನಾಣಿ- ತಾರಾ ನಡುವಿನ ಸುಮಧುರ ಪ್ರೀತಿ, ಸಣ್ಣ ಮುನಿಸು, ಅದರ ಅಗಾಧ ಪರಿಣಾಮಗಳಲ್ಲಿ ಮುಂಗಾರಿನ ಅಭಿಷೇಕ ಕಾಣುತ್ತದೆ.
ದೋಣಿಯ ಮೆಕ್ಯಾನಿಕ್ ನಾಣಿ ಇತರ ಮೀನುಗಾರರೊಂದಿಗೆ ಸಾಗರ ಗರ್ಭದಲ್ಲಿ ಚಂಟಮಾರುತಕ್ಕೆ ಸಿಲುಕುತ್ತಾನೆ. ದಿಕ್ಕಾಪಾಲಾಗಿ ಚೇತರಿಸಿಕೊಳ್ಳುವ ಹೊತ್ತಿಗೆ ಇವರ ಜೀವದಾನಿ ದೋಣಿ ಶತ್ರು ದೇಶದ ಗಡಿಯೊಳಗೆ ಸೇರಿರುತ್ತದೆ. ಎಲ್ಲರೂ ವೈರಿ ದೇಶದಲ್ಲಿ ಖೈದಿಗಳಾಗುತ್ತಾರೆ. ಮುಂದಿನ ಎರಡು ದಶಕ ಅವರದ್ದು ಬದುಕಲ್ಲದ ಬದುಕು.
ಕತ್ತಲ ಕೋಣೆಯಲ್ಲಿ ಕ್ರೌರ್ಯ, ಯಾತನೆ, ವ್ಯರ್ಥ ಕನಸು, ಕಾಡುವ ನೆನಪುಗಳನ್ನು ವ್ಯಕ್ತಪಡಿಸುವ ಪ್ರಯತ್ನ ದ್ವಾರ್ಕಿ ಮಾಡಿದ್ದಾರೆ. ಅಲ್ಲಿ ತುಂಡು ಚಪಾತಿಗೂ ಪರದಾಟ, ಹನಿ ನೀರಿಗೆ ಹಾಹಾಕಾರ, ಬೆಳಕು ದುಸ್ಥರ. ಜೈಲಿನೊಳಗಿನ ಯುದ್ಧ ಖೈದಿಯಾದ ಭಾರತೀಯ ಸೇನಾಧಿಕಾರಿಯ ಪಾತ್ರವಾಗಿ ಅಂಬರೀಷರ ಧ್ವನಿಯಿದೆ. ಮುಖವೇ ತೋರಿಸದೆ ಹಿನ್ನೆಲೆ ಧ್ವನಿ ಮಾತ್ರದಿಂದ ಪಾತ್ರ ಚಿತ್ರಿಸಿದ್ದರಲ್ಲಿ ಹೊಸತನವಿದೆ.
ಆದರೆ ಕಥೆಯಿರುವಷ್ಟು ಚಂದಗೆ ಸಿನಿಮಾ ಕೆತ್ತಲು ದ್ವಾರ್ಕಿ ಸೋತಿದ್ದಾರೆ. ಮೊದಲ ಅರ್ಧ ಗಂಟೆ ಹಾಗೂ ಕೊನೆಯ ಕಾಲು ಗಂಟೆ ಹೊರತು ಇಡೀ ಸಿನಿಮಾ ಒಂದು ಸಾಕ್ಷ್ಯ ಚಿತ್ರದಂತೆ ಭಾಸವಾಗುತ್ತದೆ. ಅಲ್ಲಲ್ಲಿ ಮಣಿರತ್ನಂರ ರೋಜಾ ನೆನಪಾಗುತ್ತದೆಯಾದರೂ ಅಂಥ ನಿರೂಪಣೆ ಇಲ್ಲಿ ಕಾಣುವುದಿಲ್ಲ. ಇಂದಿರಾ, ರಾಜೀವ್ ಗಾಂಧಿ ಹತ್ಯೆಗಳು, ಬಾಬರಿ ಮಸೀದಿ ಧ್ವಂಸ ಪ್ರಕರಣ, ದೆಹಲಿ - ಲಾಹೋರ್ ಬಸ್ ಯಾತ್ರೆ, ಕಾರ್ಗಿಲ್ ಯುದ್ಧಗಳು ಡೈರಿಯ ಪುಟಗಳಲ್ಲಿನ ಒಣ ಇತಿಹಾಸದಂತೆ ತೋರಿಸಿರುವುದು ಪ್ರೇಕ್ಷಕನ ದುರಾದೃಷ್ಟ. ಎಲ್ಲಾ ವಿವರಣೆಗಳು ಬರಿಯ ದಿನಾಂಕ ಮಾತ್ರವಾಗಿದೆ. ನೋಡುವಾಗ ಇತಿಹಾಸ ಪುಸ್ತಕ ಓದಿದ ಅನುಭವ ಆಗುತ್ತದೆಯೇ ಹೊರತು ಅವ್ಯಾವುದರ ಚಿತ್ರಣವೂ ಮನೋಜ್ಞವಾಗಿ ಮೂಡಿಬಂದಿಲ್ಲ.
ಅಲ್ಲದೆ ಪಾಕ್ ಸೈನ್ಯದ ಕೇಂದ್ರ ಕಛೇರಿ ಕರಾಚಿಯಲ್ಲಿ ಇದೆ ಎಂದು ದ್ವಾರ್ಕಿ ಅದೇಕೆ ಬಿಂಬಿಸಿದರೋ ಗೊತ್ತಿಲ್ಲ. ಅಂಬರೀಷ್ ಧ್ವನಿ ನುಡಿಯುವ ದಾರ್ಶನಿಕನಂತಹ ಮಾತುಗಳು ಕೆಲವೊಮ್ಮೆ ಬರಿಯ ಕಮೆಂಟ್ರಿಯಾಗಿದೆ. ಅಲ್ಲಿ ಲಾಜಿಕ್ ಹುಡುಕಿದರೆ ಸಂಭಾಷಣೆಕಾರ ಸೋತದ್ದು ಕಾಣುತ್ತದೆ.
ಸಿನಿಮಾದಲ್ಲಿ ಜೈಲಿನೊಳಗೆ ವಿಚಾರಣೆ ನಡೆಯುವುದು ಪಾಕಿ ಸೈನಿಕರಿಂದ. ಅಲ್ಲಿ ಕರಾವಳಿ ಕಾವಲು ಪಡೆಯ ಅಥವಾ ಐಎಸ್‌ಐಯ ಪ್ರಸ್ತಾಪವೂ ಬರದಿರುವುದು ಪಾಕಿಸ್ಥಾನದ ಬಗ್ಗೆ ತಿಳಿದಿದ್ದವರಿಗೆ ಆಶ್ಚರ್ಯವಾಗಬಹುದು.
ಸುಂದರನಾಥ ಸುವರ್ಣ ಕೆಮರಾದ ಹಿಂದೆ ದುಡಿದದ್ದು ತೆರೆ ಮೇಲೆ ಖಂಡಿತ ಕಾಣುತ್ತದೆ. ಪಾಲ್ ರಾಜ್ ಹಾಡುಗಳಿಗೆ ರಾಗ ಸಂಯೋಜಿಸಿದಷ್ಟೇ ಶ್ರದ್ಧೆಯಿಂದ ಹಿನ್ನೆಲೆ ಸಂಗಿತನ್ನೂ ನೀಡಿದ್ದಾರೆ. ಉಳಿದಂತೆ ಕಿಟ್ಟಿ, ರವಿಶಂಕರ್, ಏಣಗಿ ನಟರಾಜ್ ಮುನಿ, ನೀನಾಸಂ ಅಶ್ವಥ್ ಎಲ್ಲರೂ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡದಲ್ಲಿ ಮೊದಲ ಗೀತೆ ಹಾಡಿದ ಆಶಾ ಬೋಂಸ್ಲೆಯನ್ನು ಕರೆತಂದದ್ದು ತೀರಾ ತಡವಾಗಿದ್ದರಿಂದ ಅಲ್ಲಿ ಗಾಯಕಿಯ ಹೆಸರಿಗಿರುವ ಚರಿಷ್ಮಾ ಕಂಠದಲ್ಲಿ ಮೂಡಿ ಬಂದಿಲ್ಲ.
ನೈಜ ಘಟನೆ ಆಧರಿಸಿ ಮಾಡಿದ ಚಿತ್ರದ ಶೂಟಿಂಗಿಗೆ ಹೊರಡುವ ಮೊದಲು ಸ್ಕ್ರಿಪ್ಟ್ ಹಂತದಲ್ಲಿ ಒಂದಷ್ಟು ಸೂಕ್ಷ್ಮ ವಿಚಾರಗಳ ಕಡೆಗೆ ಗಮನ ಹರಿಸಿದ್ದಿದ್ದರೆ ಮತ್ತೆ ಮುಂಗಾರು ಅದ್ಭತ ಸಿನಿಮಾವಾಗುತ್ತಿತ್ತು. ಕಡಲ ತೀರದೆ ಕವಿತೆ ಇನ್ನಷ್ಟು ಸುಂದರವಾಗುತ್ತಿತ್ತು.