ಹೀಗೊಂದು ಬಿಂದು ಹಾಲಿನ ಕಥೆ

ನನಗೆ ಸಣ್ಣ ಕಥೆಗಳು ಅತ್ಯಂತ ಪ್ರಿಯ. ಕೆಲವೇ ಕೆಲವು ಪದಗಳಲ್ಲಿ ತಾನು ಒಂದಷ್ಟು ಹೇಳಿ ಉಳಿದದ್ದನ್ನು ಓದುಗನ ಚಿಂತನೆಗೆ ಹಚ್ಚುವ ಸಣ್ಣ ಕಥೆಯ ಈ ಸಣ್ಣ ಗುಣ ನನ್ನ ಪಾಲಿಗೆ ಒಂದು ಸೆಳೆತ.
ಒಬ್ಬ ಯುವಕ. ಹೆಚ್ಚಿನ ಯುವಕರಿಗೆ ಒಂದು ವಯಸ್ಸಿನಲ್ಲಿರುವಂತೆ ಆತನಿಗೂ ಜೀವನದ ರಹಸ್ಯ ತಿಳಿಯುವ ಹಂಬಲ. ಈ ರಹಸ್ಯ ಭೇದಿಸಲು ಆತ ಸಿಕ್ಕ ಸಿಕ್ಕಲೆಲ್ಲ ಓಡಾಡಿದ್ದಾನೆ, ಕಂಡ ಕಂಡ ವೇದಾಂತಿಗಳ ಕಂಡಿದ್ದಾನೆ. ಇವನ ಪ್ರಶ್ನೆಗೆ ಎಲ್ಲರೂ ಅವರವರಿಗೆ ತೋಚಿದ ರಿತಿ ಉತ್ತರಿಸಿದ್ದಾರೆ. ಆದರೆ ಈತನಿಗೆ ಮಾತ್ರ ಆ ಎಲ್ಲಾ ಉತ್ತರಗಳಿಂದಲೂ ಪೂರ್ತಿ ಸಮಾಧಾನ ಎಂಬುದು ಸಿಕ್ಕಿರಲಿಲ್ಲ.
ಕೊನೆಯ ಪ್ರಯತ್ನವಾಗಿ ಒಮ್ಮೆ ಹಿಮಾಲದ ಎಡೆ ತನ್ನ ಪಯಣ ಬೆಳೆಸುತ್ತಾನೆ. ಅಲ್ಲಿ ಯಾರೋ ಒಬ್ಬ ಅದ್ಯಾತ್ಮಿಕ ಗುರು ಇದ್ದಾನೆ ಎಂಬ ಪುಟ್ಟ ಮಾಹಿತಿ ಇವನನ್ನು ಮೈಲಿಗಟ್ಟಲೆ ದೂರ ಕರೆದೊಯ್ದಿತ್ತು.
ಇವನಿಗೆ ಹಿಮಾಲಯ ಮೊದಲ ಭೇಟಿ. ಕೊರೆಯುವ ಚಳಿ ಅದಾಗಲೇ ಚರ್ಮದ ಮೇಲ್ಮೈಯನ್ನೆಲ್ಲಾ ಕೊರೆಯುವಷ್ಟು ಕೊರೆದಾಗಿತ್ತು. ಆದರೂ ಜೀವನ ರಹಸ್ಯ ತಿಳಿಯುವ ಕುತೂಹಲಕ್ಕೆ ಒಂದಿನಿತೂ ಕುಂದುಂಟಾಗಲಿಲ್ಲ. ಸಂಸ್ಕರಿಸಿದ ಆಹಾರ ಪೊಟ್ಟಣಗಳನ್ನು ಕಟ್ಟಿಕೊಂಡು ಬರೋಬ್ಬರಿ ನಾಲ್ಕು ದಿನ ನಡೆದ ಮೇಲೆ ಅವನಿಗೆ ಆ ಗುರು ಇರುವ ಸ್ಥಳ ಸಿಕ್ಕಿತು.
ಅದೊಂದು ಪುಟ್ಟ ಬಾಗಿಲು ಇರುವ ಗುಹೆ. ಅದರ ಒಳಗೆ ಹೊಕ್ಕರೆ ನೀರ ಬಿಂದು ಬಿದ್ದರೂ ಕೇಳಿಸುವಷ್ಟು ನಿಶ್ಯಬ್ದ. ಹೊರಗೆ ಬೀಸುತ್ತಿದ್ದ ಗಾಳಿಯ ಸದ್ದೂ ಅಲ್ಲಿಲ್ಲ. ಇನ್ನೆತ್ತ ಸಾಗುವುದು ಎಂದು ದಿಘ್ಮೂಢನಾಗಿದ್ದಾಗ ಅಲ್ಲಿಗೊಬ್ಬ ಗಡ್ಡಧಾರಿ ವ್ಯಕ್ತಿ ಬಂದು ನಗುಮೊಗದಿಂದ ವಿಚಾರಿಸಿದ. ಇವನಿಗೆ ಅಚ್ಚರಿಯಾದದ್ದು ಆ ವ್ಯಕ್ತಿಯ ಮಾತು ಕೇಳಿದಾಗ. ಮನೆಯಿಂದ ಹೊರಟು ಇಷ್ಟು ಮೈಲಿ ದೂರ ಬಂದ ಮೇಲೆ ಆತ ಮೊದಲ ಬಾರಿಗೆ ತನ್ನದೇ ಭಾಷೆಯಾಡುವ ಮತ್ತೊಬ್ಬ ವ್ಯಕ್ತಿಯನ್ನು ಕಾಣುತ್ತಿದ್ದಾನೆ. ಅಷ್ಟಕ್ಕೂ ಇವನಿಗೆ ತನ್ನ ಭಾಷೆ ಹೇಗೆ ತಿಳಿದಿದೆ, ತಾನು ಅದೇ ಭಾಷೆಯವ ಎಂದು ಅದ್ಹೇಗೆ ಈತ ಲೆಕ್ಕ ಹಾಕಿದ ಎನ್ನುವುದೇ ಈ ಯುವಕನ ಅರಿವಿಗೆ ಬರಲಿಲ್ಲ.
ತಾನು ಯೋಚಿಸುತ್ತಾ ನಿಂತಿದ್ದಾಗಲೇ ಆ ಆಸಾಮಿ ’ಜೀವನ ಬಹಳ ರಹಸ್ಯಮಯವಾಗೇನೂ ಇಲ್ಲ. ಅದನ್ನು ಸುಲಭದಲ್ಲಿ ತಿಳಿಯಬಹುದು. ಈಗ ಸಂಜೆಯಾಗಿದೆ. ಇಲ್ಲೇ ಪಕ್ಕದ ಕೋಣೆಯಲ್ಲಿ ಇವತ್ತು ಮಲಗು. ನಿನ್ನೆಲ್ಲಾ ಪ್ರಶ್ನೆಗಳನ್ನೂ ನಾಳೆ ಕೇಳುವಿಯಂತೆ’ ಎಂದು ಇವನಿಗೆ ಮಾತನಾಡಲೂ ಅವಕಾಶ ಕೊಡದೆ ಆತ ನಡೆದೇ ಬಿಟ್ಟ.
ಒಂದು ಕ್ಷಣಕ್ಕೆ ಯುವಕ ತಬ್ಬಿಬ್ಬಾದ. ತಾನು ಯಾವುದೋ ಮಾಯಾವಿ ಲೋಕಕ್ಕೆ ಬಂದಿದ್ದೇನೆ ಎಂದು ಅವನಿಗೆ ಭಾಸವಾಗಲು ಶುರುವಾಯಿತು. ಇಲ್ಲಿಯೇ ಇದ್ದರೆ ನಾಳೆ ಅಸಲಿಗೆ ತಾನು ಏಳುವುದೇ ಸಂಶಯ ಎಂದೆನಿಸಿತು. ಇದರ ಉಸಾಬರಿ ಬಿಟ್ಟು ಇಲ್ಲಿಂದ ಓಡಿ ಹೋಗೋಣವೇ ಎಂಬ ಆಲೋಚನೆ ಬಂತು. ಆದರೆ ಛೆ! ಓಡಿ ಹೋಗುವುದು ಮೂರ್ಖರ ಲಕ್ಷಣ, ನಾನು ಜೀವನ ರಹಸ್ಯ ತಿಳಿಯಲು ಬಂದ ಸಾಧಕ. ನನಗೆಂತಹ ಅಂಜಿಕೆ ಎಂದು ತನಗೆ ತಾನೇ ಧೈರ್ಯ ಹೇಳಿ ಚೀಲದಲ್ಲಿದ್ದ ಚಾಪೆ ಹಾಸಿ ಕಂಬಳಿ ಹೊದ್ದು ಮಲಗಿದ.
ಮರುದಿನ ಎಚ್ಚರವಾಗುವ ಹೊತ್ತಿಗೆ ನಿನ್ನೆ ಕಂಡ ವಿಸ್ಮಯಕಾರಿ ವ್ಯಕ್ತಿ ಅದೇ ಕೋಣೆಯ ಒಂದು ಮೂಲೆಯಲ್ಲಿ ಧ್ಯಾನ ಮಾಡುವ ರೀತಿ ಕುಳಿತಿದ್ದಾನೆ. ಇವನು ಎದ್ದು ಚಾಪೆ ಮಡಚುವ ಸದ್ದಿನಿಂದಲೋ ಎಂಬಂತೆ ಅವನು ಕಣ್ಣು ಬಿಟ್ಟ. ಕಣ್ಣು ಬಿಟ್ಟವನೇ ’ಹೊರಗೆ ಹೋಗು, ಪಕ್ಕದಲ್ಲೇ ಇನ್ನೋದು ಗುಹೆಯಂತಹ ಕೊಠಡಿಯಿದೆ. ಅಲ್ಲೇ ಬಿಸಿ ನೀರೂ ಇದೆ. ನಿತ್ಯ ಕರ್ಮ ಮುಗಿಸಿ ಇತ್ತ ಬಾ. ಹೇಗಿದ್ದರೂ ಮಾತನಾಡಲೆಂದೇ ನೀನು ಬಂದಿದ್ದೀಯ. ನಿನ್ನ ಮಾತನ್ನೆಲ್ಲಾ ಆಮೇಲೆ ಆಡಿದರಾಯಿತು’ ಎಂದ.
ಅಷ್ಟನ್ನು ಕೇಳಿದವನಿಗೆ ಮರುಮಾತನಾಡಲು ಧೈರ್ಯ ಬರಲಿಲ್ಲ. ಗಡ್ಡಧಾರಿಯ ಮಾತಿನಂತೆ ಸೀದಾ ಆಚೆ ಹೋಗಿ ಹದಿನೈದು ನಿಮಿಷದಲ್ಲಿ ಮತ್ತೆ ಬಂದ. ಬಂದು ಇನ್ನೇನು ಕೂರಬೇಕು, ಅಷ್ಟರಲ್ಲಿ ಆತ ಮತ್ತೆ ಮಾತು ಶುರುವುಟ್ಟುಕೊಂಡ.
’ಜೀವನದ ರಹಸ್ಯ ತಿಳಿಯಲು ನೀನಿಲ್ಲಿಗೆ ಬಂದಿದ್ದೀಯ. ನನಗೆ ತೋಚಿದ ಮಟ್ಟಿಗೆ ತಿಳಿಸುತ್ತೇನೆ. ಇಗೋ, ಈ ಚಮಚ ಹಿಡಿದುಕೊ. ಮೇಲೆ ಒಂದಿಷ್ಟು ಹಾಲು ಎರೆಯುತ್ತಿದ್ದೇನೆ. ಇದನ್ನು ಕೈಯಲ್ಲಿ ಹಿಡಿದು ಸಿದಾ ಹಿಂದೆ ಹೋಗು. ಅಲ್ಲೊಂದು ಪುಟ್ಟ ಬಾಗಿಲಿದೆ, ಅದನ್ನು ತೆರೆದು ಅಲ್ಲೇ ಹಿತ್ತಲಲ್ಲಿ ಏನೇನಿದೆಯೋ ಅದೆಲ್ಲವನ್ನೂ ಸವಿದು ಮತ್ತೆ ಬಾ. ಆದರೆ ಒಂದು ನೆನಪಿರಲಿ, ಈ ಚಮಚದಲ್ಲಿರುವ ಹಾಲು ಮಾತ್ರ ಒಂದಿನಿತೂ ಚೆಲ್ಲಬಾದರು’ ಎಂದು ಈತನ ಕೈಗೆ ಹಾಲು ತುಂಬಿದ ಚಮಚ ಕೊಟ್ಟ.
ಅವನ ಮಾತಿನಂತೆಯೇ ಯುವಕ ನಡೆದ. ಬಾಗಿಲು ತೆರೆದು ನೋಡುತ್ತಾನೆ, ಸ್ವರ್ಗವೇ ಧರೆಗಿಳಿದು ಬಂದಂಥ ಅನುಭವ. ತಾನು ಇದುವರೆಗೂ ಕಂಡು ಕೇಳರಿಯದ ಹೂವುಗಳು, ಇದುವರೆಗೆ ಕಲ್ಪಿಸಲು ಆಗದ ಸುಗಂಧ, ಹಿಮ, ಮಂಜು ಎಲ್ಲವೂ ಸೇರಿ ಅದರದ್ದೇ ಒಂದು ಸಂಗೀತ. ಆದರೆ ಅಷ್ಟರಲ್ಲಿ ಕೈಯಲ್ಲಿದ್ದ ಚಮಚ ನೆನಪಾಯಿತು. ಅದರಲ್ಲಿರುವ ಹಾಲು ಚೆಲ್ಲದಂತೆ ನಿಧಾನವಾಗಿ ಎಲ್ಲವನ್ನೂ ನೋಡುತ್ತಾ ಸಾಗಿ ಒಂದರ್ಧ ಗಂಟೆ ಬಳಿಕ ಪುನಃ ಆ ಗುಹೆಯಂತಹ ಜಾಗಕ್ಕೆ ಬಂದ.
ಬಂದ ಕೂಡಲೇ ಕೂರಲು ಹೇಳಿದ ಆ ಗಡ್ಡಧಾರಿ ಏನೇನು ಕಂಡೆ ಎಂದು ಪ್ರಶ್ನಿಸಿದ.
ಬಂದ ಮೇಲೆ ಆಡಲು ಸಿಕ್ಕ ಮೊದಲ ಮಾತಿನಿಂದ ಯುವಕ ವಿವರಿಸಿದ. ’ಜಿವನದಲ್ಲಿ ಎಂದೂ ಇಂತಹ ಜಾಗವೊಂದರ ಕಲ್ಪನೆಯೂ ಮಾಡಿರಲಿಲ್ಲ. ಆ ಹೂಗಳು, ಹಿಮ, ಮಂಜು ಆಹಾ..’
’ಸರಿ. ಬೇರೇನೆಲ್ಲ ನೋಡಿದೆ’
’ಬೇರೆ ಏನು? ಎಲ್ಲವನ್ನೂ ನೋಡಿದೆ’
’ಇರಲಿ ಹಾಗಾದರೆ. ಆ ಚಮಚ ತಾ, ಅದರಲ್ಲಿ ಹಾಲು ಹಾಗೆಯೇ ಇದೆಯೇ’
’ಇದೆ ಗುರುಗಳೆ, ಇಗೊಳ್ಳಿ’
ಗುರು. ತಾನು ಯಾಕೆ ಆತನ್ನು ಗುರು ಎಂದು ಕರೆದೆ ಎಂದು ಯುವಕನಿಕೆ ತತ್‌ಕ್ಷಣ ಅಚ್ಚರಿಯಾಯಿತು. ಅಷ್ಟರಲ್ಲೇ ಆ ಗುರು ಪುನಃ ಮಾತಿಗನುವಾದ.
’ಅಲ್ಲಿ ಆ ಮೂಲೆಯಲ್ಲಿ ಒಂದು ದೊಡ್ಡ ಮರವಿದೆ ನೋಡಿದೆಯೋ’
’ನೋಡಿದೆ ಗುರುಗಳೆ’
’ಅದರಲ್ಲಿ ಒಂದು ವಿಷೇಶ ಬಳ್ಳಿ ಇದೆ ಕಂಡೆಯೋ’
’ಬ.. ಬ.. ಬಳ್ಳಿ... ಇಲ್ಲ’
’ಸರಿ ಹಾಗಾದರೆ, ಈ ಚಳಿಯ ನಡುವೆಯೂ ಅಲ್ಲೊಂದು ಬಿಸಿ ನೀರ ಕೊಳ ಇರುವುದನ್ನು ನೋಡಿದೆಯಾ?’
’ಕೊಳಾ... ಇಲ್ಲವಲ್ಲ’
ಮುಂದೆ ಅದು ನೋಡಿದೆಯಾ, ಇದು ನೋಡಿದೆಯಾ ಎಂದು ಗುರು ಕೇಳುತ್ತಲೇ ಹೋದ. ಇವ ಇಲ್ಲವೆನ್ನುತ್ತಲೇ ಹೋದ.
’ಸರಿ ಹಾಗಾದರೆ, ಪುನಃ ಚಮಚಕ್ಕೆ ಹಾಲೆರೆದು ಕೊಡುತ್ತೇನೆ, ಈಗ ಮತ್ತೊಮ್ಮೆ ಹೋಗೆ ಆಗ ನೋಡದಿದ್ದುದ ಎಲ್ಲವನ್ನೂ ನೋಡು’ ಎಂದು ಮತ್ತೊಮ್ಮೆ ಕಳಿಸಿದ.
ಸುಮಾರು ಎರಡು ಗಂಟೆ ಕಳೆದ ಬಳಿಕ ವಾಪಾಸು ಬಂದ ಅವನ ಮುಖದ್ಲಿ ಮಹದಾನಂದ. ನೀವು ಹೇಳಿದ ಎಲ್ಲವನ್ನೂ ನೋಡಿದೆ ಗುರುಗಳೇ ಎನ್ನುತ್ತಲೇ ಓಡೋಡಿ ಬಂದ. ಆಗಿನಂತೆ ಗುರು ಸೌಮ್ಯ ಭಾವದಲ್ಲಿ ’ಒಳ್ಳೆಯದು’ ಎಂದು ಕೈಲಿದ್ದ ಚಮಚ ಕೇಳಿದ. ಆದರೆ ಈಗ ಯುವಕನಿಗೆ ಕಸಿವಿಸಿಯಾಯಿತು. ಕೈಲಿದ್ದ ಚಮಚ ಹಾಲು ಚೆಲ್ಲಿ ಬರಿದಾಗಿತ್ತು. ತಪ್ಪಿತಸ್ಥ ಭಾವದಲ್ಲಿ ಮುಖ ಕೆಳಗೆ ಹಾಕಿ ’ಓಹ್, ನೋಡುತ್ತಾ ನೋಡುತ್ತಾ ಮೈಮರೆತೆ. ಹಾಲು ಎಲ್ಲೋ ಚೆಲ್ಲಿರಬೇಕು. ತಾವು ಕ್ಷಮಿಸಬೇಕು’ ಎಂದು ಕೇಳಿಕೊಂಡ. ಆಗ ಗುರು ಹೇಳಿದ
’ಮಗೂ. ನೀನು ಮೊದಲು ಹೋದ ಜಾಗಕ್ಕೇ ಪುನಃ ಹೋದದ್ದು. ಮೊದಲು ಹೋದಾಗ ಅಲ್ಲಿ ಇಲ್ಲದ್ದು ಯಾವುದೂ ಎರಡನೇ ಬಾರಿ ಉದ್ಭವಿಸಲಿಲ್ಲ. ಆದರೆ ನಿನ್ನೆಲ್ಲ ಚಿತ್ತ ಕೈಲಿದ್ದ ಚಮಚದ ಮೇಲಿನ ಹಾಲಿನಲ್ಲಿತ್ತು. ಹಾಗಾಗಿ ಎಲ್ಲವನ್ನೂ ನೋಡಲು ನಿನಗೆ ಸಾಧ್ಯವಾಗಲಿಲ್ಲ. ಎರಡನೆಯ ಸಲ ಅಲ್ಲಿ ಇರುವುದೆಲ್ಲವನ್ನೂ ನೀನು ಸವಿದೆ. ಆದರೆ ಬಂದಾಗ ಚಮಚದಲ್ಲಿ ಹಾಲು ಉಳಿದಿರಲಿಲ್ಲ.
 ಜೀವನ ಅಂದರೆ ಹೀಗೇ. ಇಲ್ಲಿ ಹೂವು, ಹಣ್ಣು, ಬಣ್ಣ, ವಿಸ್ಮಯ, ಸುಖ ಎಲ್ಲವೂ ಇದೆ. ಒಡನೆ ಚಮಚದಲ್ಲಿ ಹಾಲಿದ್ದಂತೆ ನಾವೇ ನಿರ್ವಹಿಸಬೇಕಾದ ಕೆಲವು ಜವಾಬ್ದಾರಿಗಳೂ ಇವೆ. ಹಾಲೂ ಚೆಲ್ಲದೆ, ಎಲ್ಲವನ್ನೂ ಕಾಣುವುದೇ ಜೀವನ ರಹಸ್ಯ. ಬೇರೇನಿಲ್ಲ’ ಎಂದು ಗುರು ಕಣ್ಮುಚ್ಚಿ ಧ್ಯಾನಕ್ಕಿಳಿದ.
ಯುವಕನ ಕಣ್ಣಿನಲ್ಲಿ ಎಂದೂ ಕಾಣದ ಕಾಂತಿ ಹೊಳೆಯಿತು.

Silly poem

Bangalored


ದಿನಾಂಕ ೧೬-೧೧-೨೦೧೦ ರ ವಿಜಯ ಕರ್ನಾಟಕದ ಲವಲವಿಕೆಯಲ್ಲಿ (ಲಗತ್ತಿಸಿದ ಪ್ರತಿ ನೋಡಿ) ಕಾರ್ತಿಕ ಪರಾಡ್ಕರ್ ಬರೆದ 'ಬೆಂಗಳೂರೆಂದರೆ..' ಕೊಂಚ ಕಾಡಿತು. ಬೆಂಗಳೂರೆಂದರೆ ಪೂರ್ಣವಿರಾಮವಿಲ್ಲದ, ವಾಕ್ಯವಾಗಲು ಒದ್ದಾಡುವ, ಕಾಮಾಗಳಿಂದಲೇ ತುಂಬುತ್ತಾ ಹೋಗುವ ಚಿತ್ರ ಪಟ... ಬಣ್ಣ ಬಣ್ಣದ ಗಾಳಿಪಟ... ಎಂದಿದ್ದಾರೆ ಲೇಖಕ.
ಗಮ್ಮತ್ತಿನ ವಿಚಾರವೆಂದರೆ ಇಡೀ ಬರಹದಲ್ಲಿ ಒತ್ತೇ ಒಂದು ಪೂರ್ಣವಿರಾಮ ಸುಳಿಯುವುದೇ ಇಲ್ಲ. ಅದು ಬರುವುದು ಕೊನೆಯ ಒಂದು ಸಾಲಿನ ಕೊನೆಯಲ್ಲಿ ಮಾತ್ರ. ಅಲ್ಲಿಗೆ ಬರಹ ಸಮಾಪ್ತಿಗೊಳ್ಳುತ್ತದೆ. ಬರಹದ ತುಂಬಾ ವಾಕ್ಯವಾಗಲು ಒದ್ದಾಡುವ, ಕೇವಲ ಕಾಮಾಗಳಿಂದಷ್ಟೇ ಕೊನೆಗೊಳ್ಳುವ ಸಾಲುಗಳು. ಪ್ರತಿ ಸಾಲೂ ಬದುಕಲು ಒದ್ದಾಡುವುದು ಕಾಣುತ್ತದೆ.
ಓದಿದಾಗ ನನಗೆ ಥಟ್ಟನೆ ನೆನಪಾದದ್ದು ೨೦ನೇ ಶತಮಾನದ ಇಂಗ್ಲೀಷ್ ಕವಿ ಯೇಟ್ಸ್. ಈತ ಬರೆಯುತ್ತದ್ದ ನವ್ಯ ಪದ್ಯಗಳು ಒಂದು ರೀತಿ ಹಾಗೆಯೇ. ಇಡೀ ಕವಿತೆಯ ಒಂದು ಪೂರ್ಣ ಮೊತ್ತದ ಅರ್ಥ ಹೊತ್ತು ಆ ಕವಿತೆಯ ರೂಪವೂ ಹೊರಬರುತ್ತಿತ್ತು. ಐರ್ಲೆಂಡಿನಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ೧೯೧೬ರ ಏಪ್ರಿಲ್ ೨೪ರಂದು ಎದ್ದ ದಂಗೆಯ (ಅಥವಾ ಹೋರಾಟ ಅನ್ನಿ) ಕುರಿತು ಬರೆದ ಪದ್ಯ ಈಸ್ಟರ್ ೧೯೧೬ನ ಪ್ಯಾರಾಗಳಲ್ಲಿ ಒಂದರಲ್ಲಿ ೧೬ ಸಾಲಿದ್ದರೆ ಮತ್ತೊಂದರಲ್ಲಿ ೨೪.
ಹಾಗೆ ನೋಡಿದರೆ ಆ ಕಾಲದ ಹೆಚ್ಚಿನ ಇಂಗ್ಲೀಷ್ ಕವಿಗಳು ಇಂತಹ ಒಂದು ಕರಾಮತ್ತನ್ನು ಪದ್ಯಗಲಲ್ಲಿ ತುಂಬಲು ತವಕಿಸುತ್ತಿದ್ದರು. ಇಂಗ್ಲೀಷ್‌ನ ನವ್ಯ ಯುಗದ ಹರಿಕಾರ ಈಲಿಯಟ್‌ನ The Love Song of J Alfred Prufrock ಕೂಡ ಹೀಗೆಯೇ. ಅದರ ನಾಯಕನ ಸ್ಥಿಮಿತ ರಹಿತ ಧೋರಣೆಗಳನ್ನು ಅತಂತ್ರ ಸಾಲುಗಳೂ ಹೇಳುತ್ತವೆ.
ಈಲಿಯೆಟ್‌ನ ವೇಸ್ಟ್ ಲ್ಯಾಂಡಂತೂ ಇಂತಹ ಅದೆಷ್ಟು ಒಳಗುಟ್ಟು ಹೊಂದಿದೆ ಎಂದು ಬಹುಶಃ ಆತನಿಗೂ ಗೊತ್ತಿರಲಿಕ್ಕಿಲ್ಲ. ಸರಿ ಸುಮಾರು ೨೦ ಪುಟಗಳಷ್ಟಿರುವ ಆ ಪದ್ಯದ ಕೊನೆಯ ಸಾಲಿಗೆ ಮುಟ್ಟುತ್ತಿದ್ದಂತೆ ಮೊದಲಿನ ಸಾಲು ಏನು ಓದಿದ್ದೆ ಎಂದು ಮರೆತೇ ಹೋಗುತ್ತದೆ. ಆದರೆ ಕೊನೆಯ ಎರಡು ಸಾಲುಗಳು ದಾ, ದಯಾದ್ವಂ, ದಮ್ಯತಾಃ/ ಶಾಂತಿಃ ಶಾಂತಿಃ ಶಾಂತಿಃ ಎಂದು ಕೊನೆಗೊಳ್ಳುತ್ತದೆ. ಭಾರತೀಯ ತತ್ವಶಾಸ್ತ್ರದ ಕಡೆಗೆ ಆ ಕವಿ ಇಟ್ಟುಕೊಂಡಿದ್ದಂಥ ಒಂದು ಬಗೆಯ ಸೆಳೆತಕ್ಕೆ ಸಾಕ್ಷಿ ಒದಗಿಸಿದಂತೆ ಭಾರತೀಯ ಮನಸ್ಸುಗಳಿಗೆ ಅನಿಸುತ್ತದೆ.
ಆದರೆ ಅವರೆಲ್ಲರ ನವ್ಯ ಪದಗಳಲ್ಲಿ ಅರ್ಥ, ಮತ್ತು ಆ ಅರ್ಥಕ್ಕೆ ಹೋಲುವ ಒಂದು ರೂಪ ಕಾಣಬಹುದು; ಕಾರ್ತಿಕರ ಲೇಖನದಲ್ಲಿ ವ್ಯಕ್ತವಾದಂತೆ. ಇಲ್ಲಿ ಶೈಲಿ ಮಾತ್ರವಲ್ಲದೆ ರೂಪವೂ ಅರ್ಥಕ್ಕೆ ತಕ್ಕಂತೆ ಬಂದಿದೆ.
ಹಾಗಾದರೆ ಇಂದು ನಮ್ಮ ಪಾಲಿಗೆ ಬೆಂಗಳೂರೂ ವಾಕ್ಯವಾಗಲು ಹೆಣಗಾಡುವ ಸಾಲುಗಳ ಹಾಗೆ ಆಗಿದೆಯಾ. ಇದ್ದರೂ ಇರಬಹುದು. ಆದರೆ ನೋಡುವ ಕಣ್ಣು ಬದಲಾದರೆ ಅದೂ ಬದಲಾಗಬಹುದು.
ಹೆಚ್ಚು ಬೇಡ. ಸುಳ್ಯ ಸಮೀಪದ ಒಂದು ರಕ್ಷಿತಾರಣ್ಯದ ಬದಿಗಿರುವ ನಮ್ಮ ಹಳೇ ಮನೆಯಲ್ಲಿ ಧೋ ಎಂದು ಮಳೆ ಸುರಿವಾಗ ಮನೆಯಲ್ಲಿನ ಪ್ರತಿಯೊಬ್ಬರದ್ದೂ ಒಂದೊಂದು ದೃಷ್ಟಿ. ಹಂಚುಗಳೆಡೆಯಿಂದ ಸೋರುವ ನೀರಿಗೆ ಗತಿ ಕಾಣಿಸಲು ಚಿಕ್ಕಮ್ಮ ಅಲ್ಲಲ್ಲಿ ಪಾತ್ರೆ-ಬಕೇಟು ಇಡಲು ಅಣಿಯಾಗುತ್ತಾರೆ, ಚಿಕ್ಕಪ್ಪ ಒಮ್ಮೆ ದೀರ್ಘ ಉಸಿರೆಳೆದು ತೋಟದೆಡೆ ಕಣ್ಣು ಹಾಯಿಸುತ್ತಾರೆ, ಹೈಸ್ಕೂಲು ಹುಡುಗ ತಮ್ಮನು ಟಿವಿ ಪ್ಲಗ್ಗು ತೆಗೆದು ಇನ್ನೇನು ಎಂಬ ಶೂನ್ಯ ಭಾವದಲ್ಲಿ, ಅಣ್ಣನ ಮಗನಾದ ಪ್ರೈಮರಿ ಹುಡುಗ ಹಳೇ ಒಏಪರಿನ ರಾಶಿಯಲ್ಲಿ ಕೂತು ಕಾಗದದ ದೋಣಿ ಮಾಡುವ ತರಾತುರಿಯಲ್ಲಿ, ಹಿಂದೆ ಅಜ್ಜಿ ಇದ್ದಾಗ ಮಕ್ಕಳೇ ಜಾರಬೇಡಿ ಎಂದು ಎಚ್ಚರಿಕೆ ಕೊಡುವ ಎಚ್ಚರದಲ್ಲಿರುತ್ತಿದ್ದರು. ಹೀಗೆ ಹಳ್ಳಿ ಬದುಕೂ ಏಕಾಂತ-ಧಾವಂತಗಳ ನಡುವೆ ಸಾಗುತ್ತದೆ ಅಲ್ಲವಾ.
ಆದರೆ ಅವೆಲ್ಲವೂ ಸಾಹಿತ್ಯದಲ್ಲಿ ದಾಖಲಾಗುವ ಪರಿಯೇ ವಿಸ್ಮಯ. ಸಾಹಿತ್ಯವೆಂದರೆ ಮಳೆಗಾಲದಲ್ಲಿ ನನ್ನ ಅಣ್ಣನ ಮಗ ಆಕಾಶ ಬಿಡುವ ದೋಣಿಯಂತೆ. ಸರಾಗವಾಗಿ ತೇಲಿ ತೇಲಿ ಸಾಗಲು ಪ್ರಯತ್ನಿಸುತ್ತಿರುತ್ತದೆ. ಆದರೆ ನಡುವೆ ಕೆಲವೊಮ್ಮೆ ಕಲ್ಲು-ಮುಳ್ಳು ಕಸ-ಕಡ್ಡಿ ಸಿಕ್ಕರೆ ಅಲ್ಲಿಯೇ ಉಳಿದು ಕೊನೆಗೆ ಅಲ್ಲಿಯೇ ಮಕಾಡೆ ಮಲಗುತ್ತದೆ.
ಹಾಗೆ ಕಾಗದದ ದೋಣಿಯಂತೆ ಸಾಗುವ ಸಾಹಿತ್ಯ ಕೆಲವೊಮ್ಮೆ ವಿಮರ್ಶಕರ ಕೈಗೆ ಸಿಕ್ಕು ಅಲ್ಲಿಯೇ ಅಸ್ಥಿರಗೊಳ್ಳುವುದೂ ಉಂಟು. ಹಾಗಾದರೆ ಸಾಹಿತ್ಯಕ್ಕೆ ಬ್ರ್ಯಾಂಡೆಡ್ ವಿಮರ್ಶಕರಿಂದ ಮುಕ್ತಿಯೇ ಇಲ್ಲವೇ? ಉಂಟೇನೋ... ನೀರಿನ ಓಘ ಹೆಚ್ಚಾದರೆ ಕಲ್ಲಿಗೆ ಸಿಕ್ಕ ದೋಣಿ ಅಲ್ಲಿಂದ ಕದಲುತ್ತದೆ. ಸಾಹಿತ್ಯದ ವಿಚಾರದಲ್ಲಿ ಈ ನೀರೇ ಓದುಗ. ಓದುಗರು ಹೆಚ್ಚಾದಂತೆ ಸಾಹಿತ್ಯವೂ ಸ್ವತಂತ್ರವಾಗುತ್ತದೆ. ಕೃತಕ ಭಾವದ ಎಲ್ಲೆ ಮೀರಿ ಸಾಗುತ್ತದೆ.
ಅದು ಹೇಗೇ ಇರಲಿ, ನನಗ್ಯಾಕೆ? ಹೇಳೀ ಹೇಲಿ ಕಡೆಗೆ ನಾನೂ ಒಬ್ಬ 'ಒಳ್ಳೆಯ' ವಿಮರ್ಶಕನೆಂದು ಬ್ರ್ಯಾಂಡ್ ಆಗಬೇಕೇ...
ಬ್ರ್ಯಾಂಡ್ ಆಗುವುದು ಬೇಡವೇನೋ ಸರಿ. ಆದರೆ ಪ್ರತೀ ಮನುಷ್ಯ ತನ್ನೊಳಗೇ ಒಬ್ಬ ವಿಮರ್ಶಕನನ್ನು ಇಟ್ಟುಕೊಳ್ಳದಿದ್ದರೆ ಹೇಗೆ? ಕನಿಷ್ಟ ತನ್ನ ಒಳಗಿನ ಒಳಗಿನವನನ್ನು ವಿಮರ್ಶೆ ಮಾಡಲಾದರೂ ಒಬ್ಬ ಒಳಗಿನ ವಿಮರ್ಶಕ ಬೇಡವೇ? ಆದರೆ ಈ ವಿಮರ್ಶಕ ನಮ್ಮೊಳಗಿನವನೇ ಆಗಿದ್ದರೆ ಅವನಿಂದ ಸರಿಯಾದ ವಿಮರ್ಶೆ ನಿರೀಕ್ಷಿಸಲು ಸಾಧ್ಯವಾ ಎಂಬುವುದು ಪ್ರಶ್ನೆ. ಬೇಡ, ವಿಮರ್ಶೆಗಿಳಿಯುವುದು ಬೇಡ.
ಇಷ್ಟಾದರೂ ಮತ್ತೊಮ್ಮೆ ನನ್ನ ಮನಸ್ಸು ಎಳೆಯುವುದು ಮತ್ತೆ ಸಾಹಿತ್ಯದ ಕಡೆ. ಸರಿ, ಬದುಕು ಬದಲಾದಂತೆ ಸಾಹಿತ್ಯವೂ, ಅದರ ರೂಪ ಸ್ವರೂಪವೂ ಬದಲಾಗುತ್ತದೆ. ಹಾಗಾದರೆ ಪಂಪ, ರನ್ನ, ಪೊನ್ನ, ಜನ್ನರಾದಿಯಾಗಿ ನಮ್ಮ ಸಾಲು ಸಾಲು ಕವಿಗಳು ಶತ ಶತಮಾನ ಬರೆದರಲ್ಲ ಅದರೆಲ್ಲಿ ಸೋಜಿಗವೇನು ಗೊತ್ತೆ. ಹುಡುಕಿದರೂ ಫುಲ್‌ಸ್ಟಾಪು, ಕಾಮಾಗಳು ಇಲ್ಲದಿರುವುದು. ಬಹುಶಃ ಆಗಿನ ಕಾಲಕ್ಕೆ ಅವುಗಳ ಆವಿಷ್ಕಾರವೂ ಆಗಿರಲಿಲ್ಲ. ಮತ್ತು ಬಹುಶಃ ಆಗ ಅವುಗಳ ಅಗತ್ಯವೂ ಇರಲಿಲ್ಲ. ಆದರೆ ಅವರ ಇಡೀ ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ಸೂತ್ರವಿದೆ, ಭಾವವಿದೆ, ರಸವಿದೆ, ರೀತಿಯಿದೆ, ನೀತಿಯಿದೆ. ಅವರ ಪದ್ಯಗಳ ಎಳೆ ಛಂದಸ್ಸು.
ಫುಲ್‌ಸ್ಟಾಪು ಕಾಮಾಗಳ ಹಂಗು ಬಿಟ್ಟು ಅಂಥಾದ್ದೊಂದು ಛಂದಸ್ಸು ಬದುಕಿನ ಪ್ರತಿರೂಪವಾದರೆ, ಅಚಿಂತ್ಯ ಶಕ್ತಿಯಾಗಿ ಅದು ದಾರಿ ನಡೆಸಿದರೆ ಅದೆಷ್ಟು ಚೆನ್ನ...

ಚೀನೀ ಹೆಣ್ಣ ಚೆಲುವಿನ ಕಣ್ಣ

ಮೊಬೈಲ್ ಫೋನುಗಳಿಗೆ IMEI (International Mobile Equipment Identity) ಸಂಖ್ಯೆ ಎಂಬುದೊಂದು ಇರುತ್ತದೆ ಎಂದು ಹೆಚ್ಚಿನ ಭಾರತೀಯರಿಗೆ ತಿಳಿದದ್ದು ಕಳೆದ ವರ್ಷವಷ್ಟೆ.
ದೇಶಕ್ಕೆ ಮೊಬೈಲ್ ಸೇವೆ ಕಾಲಿಟ್ಟು ಸುಮಾರು ಹತ್ತು ವರ್ಷಗಳಾಗುವ ಹೊತ್ತಿಗೆ ಧುತ್ತೆಂದು ಅಗ್ಗದ ಚೈನಾ ಮೊಬೈಲ್‌ಗಳು ಕಾಲಿಟ್ಟವು. ಅಷ್ಟಾಗುವ ಹೊತ್ತಿಗೆ ಕರೆ ದರಗಳೂ ಬಹಳಷ್ಟು ಇಳಿದಿದ್ದರಿಂದ ಮೊಬೈಲ್ ಹೊಂದುವುದು ಐಶಾರಾಮಿ ಎಂಬ ಭಾವನೆ ಹೋಗಿ ಅಗತ್ಯ ಎಂಬಲ್ಲಿಗೆ ಬಂದಿತ್ತು. ಆದರೆ ಅಪ್ಪ ಇಲ್ಲದ ಕಂಪೆನಿಗಳ ಈ ಚೈನಾ ಮೊಬೈಲ್‌ಗಳಿಗೆ ಐಎಂಇಐ ಸಂಖ್ಯೆಯೇ ಇರುತ್ತಿರಲಿಲ್ಲ. ಇದು ದೇಶದ ಭದ್ರತೆ ದೃಷ್ಟಿಯಿಂದ ಮೊಬೈಲನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಕು ಉಂಟುಮಾಡುತ್ತದೆ ಎಂಬ ಕಾರಣದಿಂದ ಸರಕಾರ ಐಎಂಇಐ ಸಂಖ್ಯೆ ಇಲ್ಲದ ಫೋನುಗಳನ್ನು ಕಳೆದ ಡಿಸೆಂಬರ್‌ನಿಂದ ನಿಷೇಧಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಇದಾದ ನಂತರ ಚೈನಾ ಮೊಬೈಲ್‌ನಲ್ಲಿ ಎಲ್ಲೋ ಮಳೆಯಾಗಿದೆಯೆಂದು ಹಾಡು ಕೇಳುತ್ತಿದ್ದವರ ನೋಡಿ ನೀವೂ ನಕ್ಕಿರುತ್ತೀರಿ.

ಹೊಸ ದೇಸೀ ಕಂಪೆನಿಗಳು:
ಇಷ್ಟಾಗುವ ಹೊತ್ತಿಗೆ ಜನರಿಗೆ ಚೈನಾ ಮೊಬೈಲ್‌ಗಳ ಮೇಲಿದ್ದ ವ್ಯಾಮೋಹ ಕಡಿಮೆಯಾಗಿ ಅವುಗಳ ಮಾರಾಟದಲ್ಲಿ ತೀವ್ರ ಇಳಿಮುಖವಾಗಲು ಆರಂಭವಾಯಿತು. ಸುಮರು ೩.೫ ಕೋಟಿ ಮೊಬೈಲ್ ಗ್ರಾಹಕರಿರುವ ನಮ್ಮ ದೇಶದಲ್ಲಿ ಈ ಸಂದರ್ಭ ಬಳಸಿಕೊಂಡು ಕೆಲವು ಹೊಸ ಮೊಬೈಲ್ ಕಂಪೆನಿಗಳು ಹುಟ್ಟಿಕೊಂಡವು. ಮೈಕ್ರೋಮ್ಯಾಕ್ಸ್, ಲೆಮೆನ್, ಕಾರ್ಬನ್ ಅಲ್ಲದೆ ಒನಿಡ, ಆಲಿವ್ ವೀಡಿಯೋಕಾನ್‌ನಂಥ ಇತರೆ ಎಲೆಕ್ಟ್ರಾನಿಕ್ ಕಂಪೆನಿಗಳೂ ಮೊಬೈಲ್ ಮಾರಾಟ ಮಾಡಲು ಅಣಿಯಾದವು.
ಈ ಎಲ್ಲಾ ಕಂಪೆನಿಗಳು ಆರಂಭದಲ್ಲಿ ಮಾಡಿದ್ದು ಇಷ್ಟೆ. ಚೀನಾದಲ್ಲಿ ಗುಡಿಕೈಗಾರಿಕೆ ರೂಪದಲ್ಲಿ ತಯಾರಾಗುವ ಪೋನುಗಳನ್ನು ಇಲ್ಲಿಗೆ ತರಿಸಿ ತಮ್ಮದೇ ಹೆಸರು; ಅಂದರೆ ಬ್ರ್ಯಾಂಡ್‌ನಡಿಯಲ್ಲಿ ಮಾರಾಟ ಮಾಡಿದ್ದು. ಚೀನಾದಲ್ಲಿ ಇವುಗಳ ತಯಾರಿ ಯಾವ ಮಟ್ಟಕ್ಕೆ ಇದೆ ಎಂದರೆ ಒಂದೊಂದು ಕಂಪೆನಿಯೂ ವಾರಕ್ಕೆ ಸುಮಾರು ಹತ್ತು ಸಾವಿರ ಮೊಬೈಲುಗಳನ್ನು ಮಾರಾಟ ಮಾಡಿ ಬಸಾಕುತ್ತದೆ.
ಆದರೆ ಚೀನಾದಿಂದ ಆಮದು ಮಾಡುವ ಮೊಬೈಲ್‌ಗಳ ಜವಾಬ್ದಾರಿ ಸಂಪೂರ್ಣವಾಗಿ ಇಲ್ಲಿಗೆ ಆಮದು ಮಾಡಿಕೊಳ್ಳುವ ಕಂಪೆನಿಗಳ ಹೆಗಲ ಮೇಲೆ ಬೀಳುತ್ತದೆ. ಅವುಗಳಿಗೆ ನೀಡುವ ಐಎಂಇಐ ಸಂಖ್ಯೆ, ವಾರೆಂಟಿ, ಮಾರುಕಟ್ಟೆ ಜಾಲ ಇವೆಲ್ಲವುಗಳ ಜವಾಬ್ದಾರಿ ಹೊರುವುದು ಇಲ್ಲಿ ಪೋನುಗಳನ್ನು ದತ್ತು ತೆಗೆದುಕೊಳ್ಳುವ ಕಂಪೆನಿಗಳು.
ಆರಂಭದಲ್ಲಿ ಹೀಗೆ ವ್ಯಾಪಾರ ಶುರು ಮಾಡಿದ ಕೆಲವು ದೇಸೀ ಕಂಪೆನಿಗಳು ಮುಳುಗಿ ಹೋದವು, ಜತೆಯಲ್ಲಿ ಅಂತಹ ಮೊಬೈಲ್ ಕೊಂಡವರೂ ಮುಳುಗಿದರು. ಆದರೆ ಇಂಥವಕ್ಕೆ ಸಿದ್ಧವಿದ್ದೇ ಅಗ್ಗದ ಮೊಬೈಲ್ ಕೊಂಡ ಜನತೆ ಪೂರ್ಣ ಮುಳುಗುವುದಕ್ಕು ಮೊದಲು ಬರೇ ಕೈ-ಕಾಲು ಒದ್ದೆ ಮಾಡಿಕೊಂಡು ಬಂದರು.
 
ತಂತ್ರಜ್ಞಾನ:
ಹೀಗೆ ಆಮದಾಗುವ, ಬೇರೆ ಬೇರೆ ಮಾಡೆಲ್, ಹೆಸರುಗಳ ಹಣೆಪಟ್ಟಿ ಹೊತ್ತು ಬರುವ ಬಹುತೇಕ ಮೊಬೈಲ್‌ಗಳು ಹೆಚ್ಚೂ ಕಮ್ಮಿ ಒಂದೇ ಸಮನೆ ಇರುತ್ತವೆ. ಆಕಾರ, ಬಣ್ಣಗಳಲ್ಲಿ ತುಸು ವ್ಯತ್ಯಾಸ ಇರಬಹುದಷ್ಟೆ. ಕಾರಣ, ಇವೆಲ್ಲವೂ ಒಂದೇ OS ಅಂದರೆ Operating System ನಲ್ಲಿ ಕಾರ್ಯನಿರ್ವಹಿಸುವವು. ಅದು ನ್ಯೂಕ್ಲಿಯಸ್ ರಿಯಲ್ ಟೈಮ್ ಆಪರೇಟಿಂಗ್ ಸಿಸ್ಟೆಮ್ (Nucleus Real Time Operating System).
RTOS ನ ಮೂಲ ಕರ್ತೃ ಆಕ್ಸಲರೇಟೆಡ್ ಟೆಕ್ನಾಲಜಿ. ಮತ್ತು ಇದು ಉಪಯೋಗಿಸುವುದು MK sreies ನ ಚಿಪ್. ಈ ತಂತ್ರಜ್ಞಾನ ಬರೀ ಮೊಬೈಲ್‌ಗಳಿಗಷ್ಟೇ ಅಲ್ಲ. ಚೀನಾದಿಂದ ಆಮದಾಗುವ ಎಂಪಿ೩ ಪ್ಲೇಯರ್, ದಿಶ್ ಟಿವಿ, ಬಿಗ್ ಟಿವಿಯವರ ಸೆಟ್ ಟಾಪ್ ಬಾಕ್ಸ್‌ಗಳು ಎಲ್ಲವುಗಳ ಮೂಲ ತಂತ್ರಜ್ಞಾನ ಇದೇ.
RTOSನ ಒಂದು ಅನುಕೂಲವೆಂದರೆ ಇದು ತಿರಾ ಸರಳ ಕಾರ್ಯಭಾರ ಹೊಂದಿದೆ. ಇದರಲ್ಲಿ ಫೋನುಗಳಿಗೆ ಬೇಕಾದ ಕೆಮರಾ, ಕ್ಯಾಲ್‌ಕುಲೇಟರ್, ಕ್ಯಾಲೆಂಡರ್‌ನಂಥ ಇತರೆ ಇತರೆ ಸಾಮಗ್ರಿ ಮತ್ತು ಜಾವವನ್ನು ಸರಳವಾಗಿ ನಿಭಾಯಿಸಬಹುದು. ಮತ್ತು ಈ ತಂತ್ರಜ್ಞಾನ ಬೇರೆ Operating Systemಗಳಿಗೆ ಹೋಲಿಸಿದರೆ ಇದು ತೀರಾ ಅಗ್ಗ. ಮತ್ತು ಅಲವಡಿಕೆ ಸರಳ. ಅಲ್ಲದೆ ಮತ್ತೂ ಒಂದು ಅನುಕೂಲತೆ ಎಂದರೆ ಇದು Real Time Operating System, ಹಾಗಾಗಿ ಹೆಚ್ಚಿನ ಮೆಮೊರಿ ಅಥವಾ ನಿರ್ಧಿಷ್ಟವಾಗಿ ಹೇಳುವುದಾದರೆ RAMನ ಅಗತ್ಯವಿಲ್ಲ. ಇದು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ.
ಚೀನಾದಿಂದ ಆಮದಾಗುವ ಎಲ್ಲಾ ಫೋನುಗಳೂ ಇದೇ ಸರಕನ್ನು ಹೊತ್ತು ತರುತ್ತವೆ. ಆದರೆ ಇಲ್ಲಿಯೂ ಒಂದು ಚೋದ್ಯವಿದೆ. ಈ ಚಿಪ್‌ಗಳು ಎಲ್ಲಾ ಒಂದೇ ತಂತ್ರಜ್ಞಾನ ಹೊಂದಿದ್ದರೂ ಗುಣಮಟ್ಟದಲ್ಲಿ ತೀವ್ರ ವ್ಯತ್ಯಾಸವಿದೆ. ಹಾಗೆ ನೋಡಿದರೆ ನೋಕಿಯಾದಂಥ ಹಳೇಹುಲಿಗಳ ತಯಾರಿ ಘಟಕದ ಬಹುಪಾಲು ಇರುವುದು ಚೈನಾದಲ್ಲಿ. ಆದರೆ ಅವುಗಳ ಗುಣಮಟ್ಟವನ್ನು ಸ್ವತಃ ನೋಕಿಯಾವೇ ಖಾತ್ರಿಗೊಳಿಸುತ್ತದೆ. ಯಾಕೆಂದರೆ ಚೀನಾದ ತಯಾರಿಕಾ ಘಟಕದ ಸರ್ವ ಉಸ್ತುವಾರಿಯೂ ನೋಕಿಯಾ ಕೈಯಲ್ಲಿಯೇ ಇರುತ್ತದೆ.
ಆದರೆ ಇಲ್ಲಿ ಫೋನ್ ದತ್ತು ಪಡೆಯುವ ಕಂಪೆನಿಗಳು ಎಲ್ಲವೂ ಹಾಗೆಯೇ ಇರಬೇಕೆಂದೇನೂ ಇಲ್ಲ. ಅಲ್ಲಿ ಯಾವುದೋ ಒಂದು ಕಂಪೆನಿ ವಾರಕ್ಕೆ ಹತ್ತು ಸಾವಿರ ಮೊಬೈಲ್ ತಯಾರು ಮಾಡುವಾಗ ಒಟ್ಟಿಗೆ ಇವರದ್ದನ್ನೂ ಮಾಡಿ ಇತ್ತ ತಂದು ಹಾಕುತ್ತವೆ. ಬಹುತೇಕ ಸಂದರ್ಭಗಳಲ್ಲಿ ಈ ಕಂಪೆನಿಗಳಿಗೆ ಸ್ವತಃ ಡಿಸೈನ್ ಎಂಜಿನಿಯರುಗಳಾಗಲೀ, ತಂತ್ರಜ್ಞಾನ ಎಂಜಿನಿಯರುಗಳಾಗಲೀ ಇರುವುದಿಲ್ಲ. ಸಮ್ಮನೆ ಒಂದಷ್ಟು ಮಂದಿ ಮಾರ್ಕೆಟಿಂಗ್‌ನವರು ಕೂತಿರುತ್ತಾರೆ. ಇಂತಹ ನಾಯಿ ಸಂತೆ ಕಂಪೆನಿಗಳು ಅವರ ಎಲ್ಲಾ ಸಾಮರ್ಥ್ಯವನ್ನು ಅಡವಿಡುವುದು ಮಾರಾಟ ಮಾಡಲಷ್ಟೇ ಹೊರತು ತಂತ್ರಜ್ಞಾನ ಅಭಿವೃದ್ಧಿಗಲ್ಲ.
ಚೀನಾದಲ್ಲಿ ಗುತ್ತಿಗೆ ಪಡೆದ ಕಂಪೆನಿಯೇ ಇವರಿಗೆ ಇಂಥಿಂಥಾದ್ದು ನಮ್ಮಲ್ಲಿವೆ ಎಂದು ಪಟ್ಟಿ ನೀಡುತ್ತದೆ. ಅವುಗಳಿಂದ ಕೆಲವು ಮಾಡೆಲ್‌ಗಳನ್ನು ಆರಿಸಿ ಇವರು 'ಇಷ್ಟು ವರ್ಷಕ್ಕೆ' ಎಂದು ಒಂದು ಕರಾರು ಮಾಡಿಕೊಳ್ಳುತ್ತಾರೆ. ಅದರಂತೆ ಚೀನೀಯರು ಕಳಿಸುವ ಮೊಬೈಲುಗಳಿಗೆ ಇವರು ಇಲ್ಲಿ ಏನೇನೋ ಐಲುಗಳನ್ನು ಸೇರಿಸಿ ಜಾಹೀರಾತು ಬರೆಯುವುದು, ಹೊಸ ಹೊಸ ಕೊಡುಗೆಯ ಆಮಿಷ ನೀಡಿ ಇಲ್ಲಿನವರನ್ನು ಮಂಗ ಮಾಡುವ ಕೆಲಸದಲ್ಲಿ ಮಗ್ನರಾಗುತ್ತಾರೆ.

ಇಂತಿ ನಿಮ್ಮ ಪ್ರೀತಿಯ ion:
ಹೀಗೆ ಹೇಳಲು ಒಂದು ಕಾರಣವಿದೆ. ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ನನ್ನ ಸಂಬಂಧಿಯೊಬ್ಬರು ಮಣಿಪಾಲದವರ ಅಯಾನ್ ಫೋನನ್ನು ಕೊಂಡರು. ತೀರಾ ಕಡಿಮೆಯೆನಿಸುವ ದುಡ್ಡಿಗೆ ಎರಡೆರಡು ಸಿಮ್ ಹಾಕುವ, ಕೆಮೆರಾ ಇರುವ, ಹಾಡು ಕೇಳಬಹುದಾದ ಮತ್ತು ಸಿನಿಮಾವೂ ನೋಡಬಹುದಾದ ಫೋನ್ - ಆಹಾ! ಹೊಸತರಲ್ಲಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆದರೆ ಅವರ ಆನಂದ ಹೆಚ್ಚು ಕಾಲ ಉಳಿಯಲಿಲ್ಲ. ಒಂದೇ ತಿಂಗಳಿಗೆ ಫೋನು ತನ್ನ ಮಾತು ನಿಲ್ಲಿಸಿತು. ಯಾವ ಗುಂಡಿ ಒತ್ತಿದರೂ ಮೌನವೇ ಉತ್ತರ. ಸರಿ. ಹೇಗೂ ವಾರೆಂಟಿ ಇದೆ ಎಂದು ಪುನಃ ಅಂಗಡಿ ಒಯ್ದರು. ಅವರು ಎರಡು ವಾರ ಕಳೆದು ರಿಪೇರಿಯಾಗದ ಈ ಫೋನನ್ನು ಬದಲಿಸಿ ಕೊಟ್ಟರು.
ಪುನಃ ಹೊಚ್ಚ ಹೊಸಾ ಫೋನು. ಆದರೆ ಈ ಆನಂದವೂ ಕ್ಷಣಿಕವೇ ಆಯಿತು. ಹದಿನೈದು ದಿನದಲ್ಲಿ ಮತ್ತೆ ಮೌನ. ಪುನಃ ಅಂಗಡಿಯತ್ತ. ಪುನಃ ಹೊಸ ಫೋನು. ಹೀಗೆ ವಾರೆಂಟಿ ಅವಧಿ ಮುಗಿಯುವುದರ ಒಳಗೆ ಅವರು ನಾಲ್ಕು ಫೋನು ಬದಲಿಸಬೇಕಾಯಿತು.

ಮೂಲ ಕಾರಣ ಇಷ್ಟೆ:
ಎಲ್ಲರೂ ಫೊನಿಗಿಳಿದಾಗ 'ಯಾನ್‌ಲಾ ಉಳ್ಳೆ' ಎಂದು ಮಣಿಪಾಲ ಸಂಸ್ಥೆಯೂ ಅಯಾನ್ ಹೆಸರಲ್ಲಿ ಮೊಬೈಲ್ ವ್ಯಾಪಾರಕ್ಕಿಳಿಯಿತು. ಎಲ್ಲಾ ಫೋನುಗಳೂ ಇದೇ Nucleus RTOS ಹೊಂದಿದ್ದವು. ಅದನ್ನು ಇಟ್ಟುಕೊಂಡು ಕರ್ನಾಟಕದಾದ್ಯಂತ ಇವರ ಮಾರಾಟ. ಜಾಹೀರಾತಿಗೆ ಹೇಗಿದ್ದರೂ ಸಹ ಸಂಸ್ಥೆ ಉದಯವಾಣಿ ಇದ್ದದ್ದರಿಂದ ಅದಕ್ಕೇನೂ ತೊಂದರೆಯಾಗದೆ ಮಾರಾಟ ಜಾಲ ಸುಲಲಿತವಾಯಿತು.
ಆದರೆ ನೈಜ ಸಮಸ್ಯೆ ಆರಂಭವಾದದ್ದು ಫೋನುಗಳು ಗ್ರಾಹಕರ ಕೈ ಸೇರಿದ ನಂತರ. ಮಾತನಾಡಲು ಆರಂಭಿಸಿದ ಕೆಲವೇ ದಿನಗಳಲ್ಲಿ ಫೋನಿಗೆ ಒಂದೊಂದೇ ಗ್ರಹಚಾರ ಬಡಿಯಲು ಶುರುವಾಯಿತು. ಒಂದೊಂದಾಗಿ ಫೋನುಗಳು ವಾರೆಂಟಿ ಅವಧಿ ಮುಗಿಯುವ ಮುನ್ನ ಬಂದು ಬಂದು ಮಣಿಪಾಲದ ಸರ್ವೀಸ್ ಸೆಂಟರಿಗೆ ಬಂದು ಬೀಳತೊಡಗಿತು.
ಆದರೆ ದಿನಕ್ಕೆ ನೂರಾರು ಫೋನುಗಳು ಬಂದು ಬೀಳುವ ಸರ್ವೀಸ್ ಸೆಂಟರಲ್ಲಿ ಕೆಲಸಕ್ಕೆ ಇದ್ದದ್ದು ಕೇವಲ ಹನ್ನೆರಡು ಜನ! ಆ ಒಂದು ಡಜನ್ ಜನ ಪಾಪ ಏನು ಮಾಡಿಯಾರು?
ಆದರೆ ಇವುಗಳ ನಡುವೆಯೇ ಕೆಲವು ಬುದ್ಧಿವಂತ ಕಂಪೆನಿಗಳು ತಲೆ ಓಡಿಸಿ ಗುಣಮಟ್ಟದ ಫೋನುಗಳಿಗೆ ಮಾತ್ರ ಕೈ ಹಾಕಿವೆ. ಮಾರಾಟ ಭರಾಟೆಯೂ ಜೋರಾಗಿಯೇ ಇದೆ. ಆದರೆ ಇವು ಹೆಚ್ಚಿನ ಲಾಭದ ಆಸೆಗೆ ಬಿದ್ದು ಗುಣಮಟ್ಟ ಕಡಿಮೆಗೊಳಿಸಿದರೆ ಮತ್ತೊಮ್ಮೆ ಇತಿಹಾಸ ಪುನರಾವರ್ತನೆಯಾಗುತ್ತದೆ. ಗ್ರಾಹಕನ ಪರಿಸ್ಥಿತಿ ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿ ತಂದು ಕಕ್ಕಾಬಿಕ್ಕಿಯಾದಂತೆ ಆಗುತ್ತದೆ.

ಸ್ವಲ್ಪ ಕತ್ತಲು, ಸ್ವಲ್ಪ ಮುಂಗಾರು

ಮತ್ತೆ ಮುಂಗಾರು ಒಂದು ಒಳ್ಳೆಯ ಕಥೆಯಿಟ್ಟು ಮಾಡಿದ ಸಿನಿಮಾ. ನಿರ್ದೇಶಕ ರಾಘವ ದ್ವಾರ್ಕಿ ಉತ್ತಮ ಪ್ರಯೋಗವೊಂದನ್ನು ಮಾಡಿದ್ದಾರೆ.
ಮುಂಬೈನ ಮೀನುಗಾರಿಕಾ ಬಂದರಿನಲ್ಲಿ ಬದುಕು ಕಂಡುಕೊಂಡ ಕನ್ನಡದ ಮಲೆನಾಡ ಮಾಣಿ ನಾಣಿಯ ಸುತ್ತ ಕಥೆ ತೆರೆದುಕೊಳ್ಳುತ್ತದೆ. ಆರಂಭದ ಅರ್ಧ ಗಂಟೆ ನಾಣಿ- ತಾರಾ ನಡುವಿನ ಸುಮಧುರ ಪ್ರೀತಿ, ಸಣ್ಣ ಮುನಿಸು, ಅದರ ಅಗಾಧ ಪರಿಣಾಮಗಳಲ್ಲಿ ಮುಂಗಾರಿನ ಅಭಿಷೇಕ ಕಾಣುತ್ತದೆ.
ದೋಣಿಯ ಮೆಕ್ಯಾನಿಕ್ ನಾಣಿ ಇತರ ಮೀನುಗಾರರೊಂದಿಗೆ ಸಾಗರ ಗರ್ಭದಲ್ಲಿ ಚಂಟಮಾರುತಕ್ಕೆ ಸಿಲುಕುತ್ತಾನೆ. ದಿಕ್ಕಾಪಾಲಾಗಿ ಚೇತರಿಸಿಕೊಳ್ಳುವ ಹೊತ್ತಿಗೆ ಇವರ ಜೀವದಾನಿ ದೋಣಿ ಶತ್ರು ದೇಶದ ಗಡಿಯೊಳಗೆ ಸೇರಿರುತ್ತದೆ. ಎಲ್ಲರೂ ವೈರಿ ದೇಶದಲ್ಲಿ ಖೈದಿಗಳಾಗುತ್ತಾರೆ. ಮುಂದಿನ ಎರಡು ದಶಕ ಅವರದ್ದು ಬದುಕಲ್ಲದ ಬದುಕು.
ಕತ್ತಲ ಕೋಣೆಯಲ್ಲಿ ಕ್ರೌರ್ಯ, ಯಾತನೆ, ವ್ಯರ್ಥ ಕನಸು, ಕಾಡುವ ನೆನಪುಗಳನ್ನು ವ್ಯಕ್ತಪಡಿಸುವ ಪ್ರಯತ್ನ ದ್ವಾರ್ಕಿ ಮಾಡಿದ್ದಾರೆ. ಅಲ್ಲಿ ತುಂಡು ಚಪಾತಿಗೂ ಪರದಾಟ, ಹನಿ ನೀರಿಗೆ ಹಾಹಾಕಾರ, ಬೆಳಕು ದುಸ್ಥರ. ಜೈಲಿನೊಳಗಿನ ಯುದ್ಧ ಖೈದಿಯಾದ ಭಾರತೀಯ ಸೇನಾಧಿಕಾರಿಯ ಪಾತ್ರವಾಗಿ ಅಂಬರೀಷರ ಧ್ವನಿಯಿದೆ. ಮುಖವೇ ತೋರಿಸದೆ ಹಿನ್ನೆಲೆ ಧ್ವನಿ ಮಾತ್ರದಿಂದ ಪಾತ್ರ ಚಿತ್ರಿಸಿದ್ದರಲ್ಲಿ ಹೊಸತನವಿದೆ.
ಆದರೆ ಕಥೆಯಿರುವಷ್ಟು ಚಂದಗೆ ಸಿನಿಮಾ ಕೆತ್ತಲು ದ್ವಾರ್ಕಿ ಸೋತಿದ್ದಾರೆ. ಮೊದಲ ಅರ್ಧ ಗಂಟೆ ಹಾಗೂ ಕೊನೆಯ ಕಾಲು ಗಂಟೆ ಹೊರತು ಇಡೀ ಸಿನಿಮಾ ಒಂದು ಸಾಕ್ಷ್ಯ ಚಿತ್ರದಂತೆ ಭಾಸವಾಗುತ್ತದೆ. ಅಲ್ಲಲ್ಲಿ ಮಣಿರತ್ನಂರ ರೋಜಾ ನೆನಪಾಗುತ್ತದೆಯಾದರೂ ಅಂಥ ನಿರೂಪಣೆ ಇಲ್ಲಿ ಕಾಣುವುದಿಲ್ಲ. ಇಂದಿರಾ, ರಾಜೀವ್ ಗಾಂಧಿ ಹತ್ಯೆಗಳು, ಬಾಬರಿ ಮಸೀದಿ ಧ್ವಂಸ ಪ್ರಕರಣ, ದೆಹಲಿ - ಲಾಹೋರ್ ಬಸ್ ಯಾತ್ರೆ, ಕಾರ್ಗಿಲ್ ಯುದ್ಧಗಳು ಡೈರಿಯ ಪುಟಗಳಲ್ಲಿನ ಒಣ ಇತಿಹಾಸದಂತೆ ತೋರಿಸಿರುವುದು ಪ್ರೇಕ್ಷಕನ ದುರಾದೃಷ್ಟ. ಎಲ್ಲಾ ವಿವರಣೆಗಳು ಬರಿಯ ದಿನಾಂಕ ಮಾತ್ರವಾಗಿದೆ. ನೋಡುವಾಗ ಇತಿಹಾಸ ಪುಸ್ತಕ ಓದಿದ ಅನುಭವ ಆಗುತ್ತದೆಯೇ ಹೊರತು ಅವ್ಯಾವುದರ ಚಿತ್ರಣವೂ ಮನೋಜ್ಞವಾಗಿ ಮೂಡಿಬಂದಿಲ್ಲ.
ಅಲ್ಲದೆ ಪಾಕ್ ಸೈನ್ಯದ ಕೇಂದ್ರ ಕಛೇರಿ ಕರಾಚಿಯಲ್ಲಿ ಇದೆ ಎಂದು ದ್ವಾರ್ಕಿ ಅದೇಕೆ ಬಿಂಬಿಸಿದರೋ ಗೊತ್ತಿಲ್ಲ. ಅಂಬರೀಷ್ ಧ್ವನಿ ನುಡಿಯುವ ದಾರ್ಶನಿಕನಂತಹ ಮಾತುಗಳು ಕೆಲವೊಮ್ಮೆ ಬರಿಯ ಕಮೆಂಟ್ರಿಯಾಗಿದೆ. ಅಲ್ಲಿ ಲಾಜಿಕ್ ಹುಡುಕಿದರೆ ಸಂಭಾಷಣೆಕಾರ ಸೋತದ್ದು ಕಾಣುತ್ತದೆ.
ಸಿನಿಮಾದಲ್ಲಿ ಜೈಲಿನೊಳಗೆ ವಿಚಾರಣೆ ನಡೆಯುವುದು ಪಾಕಿ ಸೈನಿಕರಿಂದ. ಅಲ್ಲಿ ಕರಾವಳಿ ಕಾವಲು ಪಡೆಯ ಅಥವಾ ಐಎಸ್‌ಐಯ ಪ್ರಸ್ತಾಪವೂ ಬರದಿರುವುದು ಪಾಕಿಸ್ಥಾನದ ಬಗ್ಗೆ ತಿಳಿದಿದ್ದವರಿಗೆ ಆಶ್ಚರ್ಯವಾಗಬಹುದು.
ಸುಂದರನಾಥ ಸುವರ್ಣ ಕೆಮರಾದ ಹಿಂದೆ ದುಡಿದದ್ದು ತೆರೆ ಮೇಲೆ ಖಂಡಿತ ಕಾಣುತ್ತದೆ. ಪಾಲ್ ರಾಜ್ ಹಾಡುಗಳಿಗೆ ರಾಗ ಸಂಯೋಜಿಸಿದಷ್ಟೇ ಶ್ರದ್ಧೆಯಿಂದ ಹಿನ್ನೆಲೆ ಸಂಗಿತನ್ನೂ ನೀಡಿದ್ದಾರೆ. ಉಳಿದಂತೆ ಕಿಟ್ಟಿ, ರವಿಶಂಕರ್, ಏಣಗಿ ನಟರಾಜ್ ಮುನಿ, ನೀನಾಸಂ ಅಶ್ವಥ್ ಎಲ್ಲರೂ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡದಲ್ಲಿ ಮೊದಲ ಗೀತೆ ಹಾಡಿದ ಆಶಾ ಬೋಂಸ್ಲೆಯನ್ನು ಕರೆತಂದದ್ದು ತೀರಾ ತಡವಾಗಿದ್ದರಿಂದ ಅಲ್ಲಿ ಗಾಯಕಿಯ ಹೆಸರಿಗಿರುವ ಚರಿಷ್ಮಾ ಕಂಠದಲ್ಲಿ ಮೂಡಿ ಬಂದಿಲ್ಲ.
ನೈಜ ಘಟನೆ ಆಧರಿಸಿ ಮಾಡಿದ ಚಿತ್ರದ ಶೂಟಿಂಗಿಗೆ ಹೊರಡುವ ಮೊದಲು ಸ್ಕ್ರಿಪ್ಟ್ ಹಂತದಲ್ಲಿ ಒಂದಷ್ಟು ಸೂಕ್ಷ್ಮ ವಿಚಾರಗಳ ಕಡೆಗೆ ಗಮನ ಹರಿಸಿದ್ದಿದ್ದರೆ ಮತ್ತೆ ಮುಂಗಾರು ಅದ್ಭತ ಸಿನಿಮಾವಾಗುತ್ತಿತ್ತು. ಕಡಲ ತೀರದೆ ಕವಿತೆ ಇನ್ನಷ್ಟು ಸುಂದರವಾಗುತ್ತಿತ್ತು.