ಚೀನೀ ಹೆಣ್ಣ ಚೆಲುವಿನ ಕಣ್ಣ

ಮೊಬೈಲ್ ಫೋನುಗಳಿಗೆ IMEI (International Mobile Equipment Identity) ಸಂಖ್ಯೆ ಎಂಬುದೊಂದು ಇರುತ್ತದೆ ಎಂದು ಹೆಚ್ಚಿನ ಭಾರತೀಯರಿಗೆ ತಿಳಿದದ್ದು ಕಳೆದ ವರ್ಷವಷ್ಟೆ.
ದೇಶಕ್ಕೆ ಮೊಬೈಲ್ ಸೇವೆ ಕಾಲಿಟ್ಟು ಸುಮಾರು ಹತ್ತು ವರ್ಷಗಳಾಗುವ ಹೊತ್ತಿಗೆ ಧುತ್ತೆಂದು ಅಗ್ಗದ ಚೈನಾ ಮೊಬೈಲ್‌ಗಳು ಕಾಲಿಟ್ಟವು. ಅಷ್ಟಾಗುವ ಹೊತ್ತಿಗೆ ಕರೆ ದರಗಳೂ ಬಹಳಷ್ಟು ಇಳಿದಿದ್ದರಿಂದ ಮೊಬೈಲ್ ಹೊಂದುವುದು ಐಶಾರಾಮಿ ಎಂಬ ಭಾವನೆ ಹೋಗಿ ಅಗತ್ಯ ಎಂಬಲ್ಲಿಗೆ ಬಂದಿತ್ತು. ಆದರೆ ಅಪ್ಪ ಇಲ್ಲದ ಕಂಪೆನಿಗಳ ಈ ಚೈನಾ ಮೊಬೈಲ್‌ಗಳಿಗೆ ಐಎಂಇಐ ಸಂಖ್ಯೆಯೇ ಇರುತ್ತಿರಲಿಲ್ಲ. ಇದು ದೇಶದ ಭದ್ರತೆ ದೃಷ್ಟಿಯಿಂದ ಮೊಬೈಲನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಕು ಉಂಟುಮಾಡುತ್ತದೆ ಎಂಬ ಕಾರಣದಿಂದ ಸರಕಾರ ಐಎಂಇಐ ಸಂಖ್ಯೆ ಇಲ್ಲದ ಫೋನುಗಳನ್ನು ಕಳೆದ ಡಿಸೆಂಬರ್‌ನಿಂದ ನಿಷೇಧಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಇದಾದ ನಂತರ ಚೈನಾ ಮೊಬೈಲ್‌ನಲ್ಲಿ ಎಲ್ಲೋ ಮಳೆಯಾಗಿದೆಯೆಂದು ಹಾಡು ಕೇಳುತ್ತಿದ್ದವರ ನೋಡಿ ನೀವೂ ನಕ್ಕಿರುತ್ತೀರಿ.

ಹೊಸ ದೇಸೀ ಕಂಪೆನಿಗಳು:
ಇಷ್ಟಾಗುವ ಹೊತ್ತಿಗೆ ಜನರಿಗೆ ಚೈನಾ ಮೊಬೈಲ್‌ಗಳ ಮೇಲಿದ್ದ ವ್ಯಾಮೋಹ ಕಡಿಮೆಯಾಗಿ ಅವುಗಳ ಮಾರಾಟದಲ್ಲಿ ತೀವ್ರ ಇಳಿಮುಖವಾಗಲು ಆರಂಭವಾಯಿತು. ಸುಮರು ೩.೫ ಕೋಟಿ ಮೊಬೈಲ್ ಗ್ರಾಹಕರಿರುವ ನಮ್ಮ ದೇಶದಲ್ಲಿ ಈ ಸಂದರ್ಭ ಬಳಸಿಕೊಂಡು ಕೆಲವು ಹೊಸ ಮೊಬೈಲ್ ಕಂಪೆನಿಗಳು ಹುಟ್ಟಿಕೊಂಡವು. ಮೈಕ್ರೋಮ್ಯಾಕ್ಸ್, ಲೆಮೆನ್, ಕಾರ್ಬನ್ ಅಲ್ಲದೆ ಒನಿಡ, ಆಲಿವ್ ವೀಡಿಯೋಕಾನ್‌ನಂಥ ಇತರೆ ಎಲೆಕ್ಟ್ರಾನಿಕ್ ಕಂಪೆನಿಗಳೂ ಮೊಬೈಲ್ ಮಾರಾಟ ಮಾಡಲು ಅಣಿಯಾದವು.
ಈ ಎಲ್ಲಾ ಕಂಪೆನಿಗಳು ಆರಂಭದಲ್ಲಿ ಮಾಡಿದ್ದು ಇಷ್ಟೆ. ಚೀನಾದಲ್ಲಿ ಗುಡಿಕೈಗಾರಿಕೆ ರೂಪದಲ್ಲಿ ತಯಾರಾಗುವ ಪೋನುಗಳನ್ನು ಇಲ್ಲಿಗೆ ತರಿಸಿ ತಮ್ಮದೇ ಹೆಸರು; ಅಂದರೆ ಬ್ರ್ಯಾಂಡ್‌ನಡಿಯಲ್ಲಿ ಮಾರಾಟ ಮಾಡಿದ್ದು. ಚೀನಾದಲ್ಲಿ ಇವುಗಳ ತಯಾರಿ ಯಾವ ಮಟ್ಟಕ್ಕೆ ಇದೆ ಎಂದರೆ ಒಂದೊಂದು ಕಂಪೆನಿಯೂ ವಾರಕ್ಕೆ ಸುಮಾರು ಹತ್ತು ಸಾವಿರ ಮೊಬೈಲುಗಳನ್ನು ಮಾರಾಟ ಮಾಡಿ ಬಸಾಕುತ್ತದೆ.
ಆದರೆ ಚೀನಾದಿಂದ ಆಮದು ಮಾಡುವ ಮೊಬೈಲ್‌ಗಳ ಜವಾಬ್ದಾರಿ ಸಂಪೂರ್ಣವಾಗಿ ಇಲ್ಲಿಗೆ ಆಮದು ಮಾಡಿಕೊಳ್ಳುವ ಕಂಪೆನಿಗಳ ಹೆಗಲ ಮೇಲೆ ಬೀಳುತ್ತದೆ. ಅವುಗಳಿಗೆ ನೀಡುವ ಐಎಂಇಐ ಸಂಖ್ಯೆ, ವಾರೆಂಟಿ, ಮಾರುಕಟ್ಟೆ ಜಾಲ ಇವೆಲ್ಲವುಗಳ ಜವಾಬ್ದಾರಿ ಹೊರುವುದು ಇಲ್ಲಿ ಪೋನುಗಳನ್ನು ದತ್ತು ತೆಗೆದುಕೊಳ್ಳುವ ಕಂಪೆನಿಗಳು.
ಆರಂಭದಲ್ಲಿ ಹೀಗೆ ವ್ಯಾಪಾರ ಶುರು ಮಾಡಿದ ಕೆಲವು ದೇಸೀ ಕಂಪೆನಿಗಳು ಮುಳುಗಿ ಹೋದವು, ಜತೆಯಲ್ಲಿ ಅಂತಹ ಮೊಬೈಲ್ ಕೊಂಡವರೂ ಮುಳುಗಿದರು. ಆದರೆ ಇಂಥವಕ್ಕೆ ಸಿದ್ಧವಿದ್ದೇ ಅಗ್ಗದ ಮೊಬೈಲ್ ಕೊಂಡ ಜನತೆ ಪೂರ್ಣ ಮುಳುಗುವುದಕ್ಕು ಮೊದಲು ಬರೇ ಕೈ-ಕಾಲು ಒದ್ದೆ ಮಾಡಿಕೊಂಡು ಬಂದರು.
 
ತಂತ್ರಜ್ಞಾನ:
ಹೀಗೆ ಆಮದಾಗುವ, ಬೇರೆ ಬೇರೆ ಮಾಡೆಲ್, ಹೆಸರುಗಳ ಹಣೆಪಟ್ಟಿ ಹೊತ್ತು ಬರುವ ಬಹುತೇಕ ಮೊಬೈಲ್‌ಗಳು ಹೆಚ್ಚೂ ಕಮ್ಮಿ ಒಂದೇ ಸಮನೆ ಇರುತ್ತವೆ. ಆಕಾರ, ಬಣ್ಣಗಳಲ್ಲಿ ತುಸು ವ್ಯತ್ಯಾಸ ಇರಬಹುದಷ್ಟೆ. ಕಾರಣ, ಇವೆಲ್ಲವೂ ಒಂದೇ OS ಅಂದರೆ Operating System ನಲ್ಲಿ ಕಾರ್ಯನಿರ್ವಹಿಸುವವು. ಅದು ನ್ಯೂಕ್ಲಿಯಸ್ ರಿಯಲ್ ಟೈಮ್ ಆಪರೇಟಿಂಗ್ ಸಿಸ್ಟೆಮ್ (Nucleus Real Time Operating System).
RTOS ನ ಮೂಲ ಕರ್ತೃ ಆಕ್ಸಲರೇಟೆಡ್ ಟೆಕ್ನಾಲಜಿ. ಮತ್ತು ಇದು ಉಪಯೋಗಿಸುವುದು MK sreies ನ ಚಿಪ್. ಈ ತಂತ್ರಜ್ಞಾನ ಬರೀ ಮೊಬೈಲ್‌ಗಳಿಗಷ್ಟೇ ಅಲ್ಲ. ಚೀನಾದಿಂದ ಆಮದಾಗುವ ಎಂಪಿ೩ ಪ್ಲೇಯರ್, ದಿಶ್ ಟಿವಿ, ಬಿಗ್ ಟಿವಿಯವರ ಸೆಟ್ ಟಾಪ್ ಬಾಕ್ಸ್‌ಗಳು ಎಲ್ಲವುಗಳ ಮೂಲ ತಂತ್ರಜ್ಞಾನ ಇದೇ.
RTOSನ ಒಂದು ಅನುಕೂಲವೆಂದರೆ ಇದು ತಿರಾ ಸರಳ ಕಾರ್ಯಭಾರ ಹೊಂದಿದೆ. ಇದರಲ್ಲಿ ಫೋನುಗಳಿಗೆ ಬೇಕಾದ ಕೆಮರಾ, ಕ್ಯಾಲ್‌ಕುಲೇಟರ್, ಕ್ಯಾಲೆಂಡರ್‌ನಂಥ ಇತರೆ ಇತರೆ ಸಾಮಗ್ರಿ ಮತ್ತು ಜಾವವನ್ನು ಸರಳವಾಗಿ ನಿಭಾಯಿಸಬಹುದು. ಮತ್ತು ಈ ತಂತ್ರಜ್ಞಾನ ಬೇರೆ Operating Systemಗಳಿಗೆ ಹೋಲಿಸಿದರೆ ಇದು ತೀರಾ ಅಗ್ಗ. ಮತ್ತು ಅಲವಡಿಕೆ ಸರಳ. ಅಲ್ಲದೆ ಮತ್ತೂ ಒಂದು ಅನುಕೂಲತೆ ಎಂದರೆ ಇದು Real Time Operating System, ಹಾಗಾಗಿ ಹೆಚ್ಚಿನ ಮೆಮೊರಿ ಅಥವಾ ನಿರ್ಧಿಷ್ಟವಾಗಿ ಹೇಳುವುದಾದರೆ RAMನ ಅಗತ್ಯವಿಲ್ಲ. ಇದು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ.
ಚೀನಾದಿಂದ ಆಮದಾಗುವ ಎಲ್ಲಾ ಫೋನುಗಳೂ ಇದೇ ಸರಕನ್ನು ಹೊತ್ತು ತರುತ್ತವೆ. ಆದರೆ ಇಲ್ಲಿಯೂ ಒಂದು ಚೋದ್ಯವಿದೆ. ಈ ಚಿಪ್‌ಗಳು ಎಲ್ಲಾ ಒಂದೇ ತಂತ್ರಜ್ಞಾನ ಹೊಂದಿದ್ದರೂ ಗುಣಮಟ್ಟದಲ್ಲಿ ತೀವ್ರ ವ್ಯತ್ಯಾಸವಿದೆ. ಹಾಗೆ ನೋಡಿದರೆ ನೋಕಿಯಾದಂಥ ಹಳೇಹುಲಿಗಳ ತಯಾರಿ ಘಟಕದ ಬಹುಪಾಲು ಇರುವುದು ಚೈನಾದಲ್ಲಿ. ಆದರೆ ಅವುಗಳ ಗುಣಮಟ್ಟವನ್ನು ಸ್ವತಃ ನೋಕಿಯಾವೇ ಖಾತ್ರಿಗೊಳಿಸುತ್ತದೆ. ಯಾಕೆಂದರೆ ಚೀನಾದ ತಯಾರಿಕಾ ಘಟಕದ ಸರ್ವ ಉಸ್ತುವಾರಿಯೂ ನೋಕಿಯಾ ಕೈಯಲ್ಲಿಯೇ ಇರುತ್ತದೆ.
ಆದರೆ ಇಲ್ಲಿ ಫೋನ್ ದತ್ತು ಪಡೆಯುವ ಕಂಪೆನಿಗಳು ಎಲ್ಲವೂ ಹಾಗೆಯೇ ಇರಬೇಕೆಂದೇನೂ ಇಲ್ಲ. ಅಲ್ಲಿ ಯಾವುದೋ ಒಂದು ಕಂಪೆನಿ ವಾರಕ್ಕೆ ಹತ್ತು ಸಾವಿರ ಮೊಬೈಲ್ ತಯಾರು ಮಾಡುವಾಗ ಒಟ್ಟಿಗೆ ಇವರದ್ದನ್ನೂ ಮಾಡಿ ಇತ್ತ ತಂದು ಹಾಕುತ್ತವೆ. ಬಹುತೇಕ ಸಂದರ್ಭಗಳಲ್ಲಿ ಈ ಕಂಪೆನಿಗಳಿಗೆ ಸ್ವತಃ ಡಿಸೈನ್ ಎಂಜಿನಿಯರುಗಳಾಗಲೀ, ತಂತ್ರಜ್ಞಾನ ಎಂಜಿನಿಯರುಗಳಾಗಲೀ ಇರುವುದಿಲ್ಲ. ಸಮ್ಮನೆ ಒಂದಷ್ಟು ಮಂದಿ ಮಾರ್ಕೆಟಿಂಗ್‌ನವರು ಕೂತಿರುತ್ತಾರೆ. ಇಂತಹ ನಾಯಿ ಸಂತೆ ಕಂಪೆನಿಗಳು ಅವರ ಎಲ್ಲಾ ಸಾಮರ್ಥ್ಯವನ್ನು ಅಡವಿಡುವುದು ಮಾರಾಟ ಮಾಡಲಷ್ಟೇ ಹೊರತು ತಂತ್ರಜ್ಞಾನ ಅಭಿವೃದ್ಧಿಗಲ್ಲ.
ಚೀನಾದಲ್ಲಿ ಗುತ್ತಿಗೆ ಪಡೆದ ಕಂಪೆನಿಯೇ ಇವರಿಗೆ ಇಂಥಿಂಥಾದ್ದು ನಮ್ಮಲ್ಲಿವೆ ಎಂದು ಪಟ್ಟಿ ನೀಡುತ್ತದೆ. ಅವುಗಳಿಂದ ಕೆಲವು ಮಾಡೆಲ್‌ಗಳನ್ನು ಆರಿಸಿ ಇವರು 'ಇಷ್ಟು ವರ್ಷಕ್ಕೆ' ಎಂದು ಒಂದು ಕರಾರು ಮಾಡಿಕೊಳ್ಳುತ್ತಾರೆ. ಅದರಂತೆ ಚೀನೀಯರು ಕಳಿಸುವ ಮೊಬೈಲುಗಳಿಗೆ ಇವರು ಇಲ್ಲಿ ಏನೇನೋ ಐಲುಗಳನ್ನು ಸೇರಿಸಿ ಜಾಹೀರಾತು ಬರೆಯುವುದು, ಹೊಸ ಹೊಸ ಕೊಡುಗೆಯ ಆಮಿಷ ನೀಡಿ ಇಲ್ಲಿನವರನ್ನು ಮಂಗ ಮಾಡುವ ಕೆಲಸದಲ್ಲಿ ಮಗ್ನರಾಗುತ್ತಾರೆ.

ಇಂತಿ ನಿಮ್ಮ ಪ್ರೀತಿಯ ion:
ಹೀಗೆ ಹೇಳಲು ಒಂದು ಕಾರಣವಿದೆ. ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ನನ್ನ ಸಂಬಂಧಿಯೊಬ್ಬರು ಮಣಿಪಾಲದವರ ಅಯಾನ್ ಫೋನನ್ನು ಕೊಂಡರು. ತೀರಾ ಕಡಿಮೆಯೆನಿಸುವ ದುಡ್ಡಿಗೆ ಎರಡೆರಡು ಸಿಮ್ ಹಾಕುವ, ಕೆಮೆರಾ ಇರುವ, ಹಾಡು ಕೇಳಬಹುದಾದ ಮತ್ತು ಸಿನಿಮಾವೂ ನೋಡಬಹುದಾದ ಫೋನ್ - ಆಹಾ! ಹೊಸತರಲ್ಲಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆದರೆ ಅವರ ಆನಂದ ಹೆಚ್ಚು ಕಾಲ ಉಳಿಯಲಿಲ್ಲ. ಒಂದೇ ತಿಂಗಳಿಗೆ ಫೋನು ತನ್ನ ಮಾತು ನಿಲ್ಲಿಸಿತು. ಯಾವ ಗುಂಡಿ ಒತ್ತಿದರೂ ಮೌನವೇ ಉತ್ತರ. ಸರಿ. ಹೇಗೂ ವಾರೆಂಟಿ ಇದೆ ಎಂದು ಪುನಃ ಅಂಗಡಿ ಒಯ್ದರು. ಅವರು ಎರಡು ವಾರ ಕಳೆದು ರಿಪೇರಿಯಾಗದ ಈ ಫೋನನ್ನು ಬದಲಿಸಿ ಕೊಟ್ಟರು.
ಪುನಃ ಹೊಚ್ಚ ಹೊಸಾ ಫೋನು. ಆದರೆ ಈ ಆನಂದವೂ ಕ್ಷಣಿಕವೇ ಆಯಿತು. ಹದಿನೈದು ದಿನದಲ್ಲಿ ಮತ್ತೆ ಮೌನ. ಪುನಃ ಅಂಗಡಿಯತ್ತ. ಪುನಃ ಹೊಸ ಫೋನು. ಹೀಗೆ ವಾರೆಂಟಿ ಅವಧಿ ಮುಗಿಯುವುದರ ಒಳಗೆ ಅವರು ನಾಲ್ಕು ಫೋನು ಬದಲಿಸಬೇಕಾಯಿತು.

ಮೂಲ ಕಾರಣ ಇಷ್ಟೆ:
ಎಲ್ಲರೂ ಫೊನಿಗಿಳಿದಾಗ 'ಯಾನ್‌ಲಾ ಉಳ್ಳೆ' ಎಂದು ಮಣಿಪಾಲ ಸಂಸ್ಥೆಯೂ ಅಯಾನ್ ಹೆಸರಲ್ಲಿ ಮೊಬೈಲ್ ವ್ಯಾಪಾರಕ್ಕಿಳಿಯಿತು. ಎಲ್ಲಾ ಫೋನುಗಳೂ ಇದೇ Nucleus RTOS ಹೊಂದಿದ್ದವು. ಅದನ್ನು ಇಟ್ಟುಕೊಂಡು ಕರ್ನಾಟಕದಾದ್ಯಂತ ಇವರ ಮಾರಾಟ. ಜಾಹೀರಾತಿಗೆ ಹೇಗಿದ್ದರೂ ಸಹ ಸಂಸ್ಥೆ ಉದಯವಾಣಿ ಇದ್ದದ್ದರಿಂದ ಅದಕ್ಕೇನೂ ತೊಂದರೆಯಾಗದೆ ಮಾರಾಟ ಜಾಲ ಸುಲಲಿತವಾಯಿತು.
ಆದರೆ ನೈಜ ಸಮಸ್ಯೆ ಆರಂಭವಾದದ್ದು ಫೋನುಗಳು ಗ್ರಾಹಕರ ಕೈ ಸೇರಿದ ನಂತರ. ಮಾತನಾಡಲು ಆರಂಭಿಸಿದ ಕೆಲವೇ ದಿನಗಳಲ್ಲಿ ಫೋನಿಗೆ ಒಂದೊಂದೇ ಗ್ರಹಚಾರ ಬಡಿಯಲು ಶುರುವಾಯಿತು. ಒಂದೊಂದಾಗಿ ಫೋನುಗಳು ವಾರೆಂಟಿ ಅವಧಿ ಮುಗಿಯುವ ಮುನ್ನ ಬಂದು ಬಂದು ಮಣಿಪಾಲದ ಸರ್ವೀಸ್ ಸೆಂಟರಿಗೆ ಬಂದು ಬೀಳತೊಡಗಿತು.
ಆದರೆ ದಿನಕ್ಕೆ ನೂರಾರು ಫೋನುಗಳು ಬಂದು ಬೀಳುವ ಸರ್ವೀಸ್ ಸೆಂಟರಲ್ಲಿ ಕೆಲಸಕ್ಕೆ ಇದ್ದದ್ದು ಕೇವಲ ಹನ್ನೆರಡು ಜನ! ಆ ಒಂದು ಡಜನ್ ಜನ ಪಾಪ ಏನು ಮಾಡಿಯಾರು?
ಆದರೆ ಇವುಗಳ ನಡುವೆಯೇ ಕೆಲವು ಬುದ್ಧಿವಂತ ಕಂಪೆನಿಗಳು ತಲೆ ಓಡಿಸಿ ಗುಣಮಟ್ಟದ ಫೋನುಗಳಿಗೆ ಮಾತ್ರ ಕೈ ಹಾಕಿವೆ. ಮಾರಾಟ ಭರಾಟೆಯೂ ಜೋರಾಗಿಯೇ ಇದೆ. ಆದರೆ ಇವು ಹೆಚ್ಚಿನ ಲಾಭದ ಆಸೆಗೆ ಬಿದ್ದು ಗುಣಮಟ್ಟ ಕಡಿಮೆಗೊಳಿಸಿದರೆ ಮತ್ತೊಮ್ಮೆ ಇತಿಹಾಸ ಪುನರಾವರ್ತನೆಯಾಗುತ್ತದೆ. ಗ್ರಾಹಕನ ಪರಿಸ್ಥಿತಿ ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿ ತಂದು ಕಕ್ಕಾಬಿಕ್ಕಿಯಾದಂತೆ ಆಗುತ್ತದೆ.