ಹಂದಿ ಜ್ವರವಲ್ಲ, ಆದರೂ ಇದು ಜ್ವರ






ಪ್ಲೇಗ್ ಮಾರಿ ಒಂದು ಕಾಲಕ್ಕೆ ಊರಿಗೆ ಊರನ್ನೇ ಸರ್ವನಾಶ ಮಾಡಿತ್ತು. ಅದಕ್ಕೂ ಮೊದಲು TB ಹೀಗೆಯೇ ಒಂದಷ್ಟು ಬಲಿ ತೆಗೆದುಕೊಂಡಿತ್ತು. ಪಾಶ್ಚಾತ್ಯ ರಾಷ್ಟಗಳಲ್ಲಿ ಖಾಯಿಲೆಗೆ consumption ಎಂಬ ಹೆಸರು ಅನ್ವರ್ಥವೇ ಆಗಿತ್ತು. ಇದಕ್ಕೆ ತುತ್ತಾದವರನ್ನೆಲ್ಲಾ ಆ ಖಾಯಿಲೆ ನುಂಗಿಹಾಕುತ್ತಿದ್ದುದಕ್ಕೆ ಅನ್ವರ್ಥನಾಮ. HIV, SAARS, Elephantiasis ನಂತಹ ಮಾರಣಾಂತಿಕ ರೋಗಗಳೂ ಸೇರಿ ಇತ್ತೀಚಿನ H1N1 ವರೆಗೆ ಮನುಕುವನ್ನು ಆಗ್ಗಿಂದಾಗ್ಗೆ ಬಾಧಿಸುತ್ತಲೇ ಬಂದ ವೈರಸ್ ಗಳು ಹಲವು. ಕಾಲಕಾಲಕ್ಕೆ ಹೊಸ ಹೊಸ ವೈರಸ್ಸುಗಳು ಹೊಸ ರೂಪ, ಗುಣ, ಹೆಸರಿನೊಂದಿಗೆ ಮಾನವ ಜನಾಂಗ ಇರುವ ವರೆಗೆ ಖಂಡಿತವಾಗಿ ಭಾದಿಸುತ್ತಲೇ ಇರುತ್ತವೆ.
ಕಂಪ್ಯೂಟರ್ ಯುಗ ಆರಂಭವಾದ ನಂತರ ಕಂಪ್ಯೂಟರ್ ಒಳ ಹೊಕ್ಕು ಅವುಗಳ ಮೂಲೋದ್ದೇಶ ಹಾಳು ಮಾಡು ವೈರಸ್ಸುಗಳು ಹುಟ್ಟಿಕೊಂಡವು. trojan, sharukh.exe, zibingo, ಹೀಗೆ ಥರ ಥರಹೆಸರಿನೊಂದಿಗೆ ವಿಧ ವಿಧದ ಗುಣಗಳುಳ್ಳ ವೈರಸ್ಸುಗಳು ಅಡಿಯಿಟ್ಟವು. ವೈರಸ್ಸುಗಳು ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಹುಸಿ ಕಡತ ಸೈಷ್ಟಿಸಿ ಹಾರ್ಡ್ಡಿಸ್ಕಿನ ಸ್ಥಳವನ್ನು ಅನಗತ್ಯವಾಗಿ ಆಕ್ರಮಿಸುತ್ತವೆ. ನೀವು ಉಪಯೋಗಿಸುವ ತಂತ್ರಾಂಶ-ಕಡತಗಳ ಹೆಸರನ್ನೆಲ್ಲ ಮರುನಾಮಕರಣ ಮಾಡಿ ನಿರುಪಯೋಗಿ ಆಗುವಂತೆ ಮಾಡುವ ದುರುದ್ದೇಶ ಕೆಲ ವೈರಸ್ಸುಗಳದ್ದು. ಇಷ್ಟಲ್ಲದೆ ಇನ್ನೂ ಏನೇನೋ ಖಯಾಲಿ ಇಟ್ಟುಕೊಂಡು ಕಂಪ್ಯೂಟರ್ ಜೊತೆಜೊತೆಗೆ ನಮ್ಮ ನಿಮ್ಮಂತ ಸಾತ್ವಿಕರ ತಲೆಯನ್ನೂ ಹಾಳು ಮಾಡುತ್ತವೆ.

ಮನುಷ್ಯರಿಗೆ HIV ಭಾದೆ ತಡೆಗಟ್ಟಲು ದಾರಿಗಳಿರುವಂತೆ ಕಂಪ್ಯೂಟರಿಗೂ ವೈರಸ್ ನಿರೋಧ ತಂತ್ರಾಂಶಗಳು ಲಭ್ಯವಿರುವುದು ನಿಮಗೆಲ್ಲ ತಿಳಿದೇ ಇದೆ. ಹಾಗಂತ ಅವುಗಳನ್ನು ಕಾಲ ಕಾಲಕ್ಕೆ ಅಪ್ ಡೇಟ್ ಮಾಡಿಕೊಳ್ಳದಿದ್ದರೆ ಸೂಕ್ತ ರಕ್ಷಣೆ ಸಿಗುವುದಿಲ್ಲ. ಹಾಗೆ ಮಾಡದಿದ್ದರೆ "ಥತ್! anti virus ಚೆನ್ನಾಗಿದೆ ಚೆನ್ನಾಗಿದೆ ಅಂತ ಎಲ್ಲಾ ಹೇಳ್ತಾರೆ. ಆದ್ರೆ ಏನೂ ಸೆಕ್ಯೂರಿಟಿ ಇಲ್ಲ. ವೈರಸ್ಸು ಬಂದು ಬಂದು ಬೀಳ್ತಾನೇ ಇದೆ. ಸಿಸ್ಟಮ್ಮು ಪ್ಯಾಸೆಂಜರ ರೈಲಿಗಿಂತಲೂ ನಿಧಾನ ಆಗಿದೆ" ಎಂದು ನನ್ನ ಪರಿಚಿತರಿಬ್ಬರು ಅಳಲು ತೋಡಿಕೊಂಡಂತೆ ನೀವೂ ಪರಿತಪಿಸುತ್ತೀರಿ. ಹೀಗೆ ಅಳಲು ತೋಡಿಕೊಂಡ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಸಹಪಾಠಿ, ಮತ್ತೊಬ್ಬ ಅವನಿಗೆ ಪಾಠ ಹೇಳುವ ಉಪನ್ಯಾಸಕ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಷ್ಟು ಗುರುಭಕ್ತನೇನಲ್ಲ ಶಿಷ್ಯ. ಆದರೆ ಜ್ಞಾನದ ಕೊರತೆಯಿಂದ ಅವರಿಬ್ಬರು ವೈರಸ್ಸಿನ ಗುಲಾಮರಾಗಿದ್ದಾರೆ. "ಆಗಾಗ ಅಪ್ ಡೇಟ್ ಮಾಡುವ ತನಕ ದೊರೆಯದಣ್ಣ ಶಕುತಿ" ಎಂದು ವೈರಸ್ ನಿರೋಧ ತಂತ್ರಾಂಶ ಪಿಸುಗಿಟ್ಟಿದ್ದು ದಿಗ್ಗಜರಿಗೆ ಕೇಳಿಸಲಿಲ್ಲವಷ್ಟೆ.
ಕಂಪ್ಯೂಟರ ಇಂಟರ್ನೆಟ್ ಬಳಕೆ ವ್ಯಾಪಕವಾಗಿರುವ ಕಾಲದಲ್ಲಿ ವೈರಸ್ಗಳಿಗೆ ಧಾಳಿಯಿಡಲು  ಹಲವು ಮಾರ್ಗಗಳಿವೆ. ಹಾಗಾಗಿ ಇವತ್ತು anti virus software ನಿರ್ಮಾಣವೂ ಒಂದು ದೊಡ್ಡ ಉದ್ಯಮ. ಸೆಕ್ಯುರಿಟಿ ಹೆಸರಿನಲ್ಲಿ ಒಂದಷ್ಟು ದುಡ್ಡು ಮಾಡುತ್ತವೆ ಕಂಪೆನಿಗಳು. ಕೆಲವು ವೈರಸ್ಸುಗಳನ್ನು ಇಂತಹ ಕಂಪೆನಿಗಳೇ ಬರೆಸುತ್ತವೆ ಎಂಬ ಆರೋಪ ಇವರ ಮೇಲೆ ಹೊರಿಸುವವರು ಇದ್ದಾರೆ. ಆದರೆ ಸತ್ಯಾಂಶವೇನೆಂದು ಸರಿಯಾಗಿ ನನಗೆ ತಿಳಿದಿಲ್ಲ. ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಕಂಡುಕೊಳ್ಳಲು ಲಿಬರ್ಹಾನ್ ಆಯೋಗ ರಚಿಸಲು ಮಾನ್ಯ ಸೋನಿಯಾ ಗಾಂಧಿಯವರನ್ನು ಓದುಗ ಮಹಾಶಯರು ವಿನಂತಿಸಿಕೊಳ್ಳಬಹುದು. ಸುಮಾರು ೨೦೨೪ರ ಹೊತ್ತಿಗೆ ವಿಸ್ತೃತ ವರದಿಯೊಂದು ಹೊರಬೀಳಬಹುದು. ಮತ್ತು ಅದರಲ್ಲಿ ಲಾಲ್ ಕೃಷ್ಣ ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿಯಂತಹ ಮುತ್ಸದ್ದಿಗಳು ಆರೋಪಿ ಸ್ಥಾನದಲ್ಲಿ ನಿಂತಿರಬಹುದು!
ಇತ್ತೀಚೆಗೆ ವೈರಸ್ ಕ್ಷೇತ್ರದಲ್ಲಿ ಹೊಸತೊಂದು ಬೆಳವಣಿಗೆ ಕಾಣಿಸುತ್ತಿದೆ. ಇಷ್ಟು ಕಾಲ ಪಿಸಿಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದ ವೈರಸ್ ಗಳು ಈಗೀಗ ಮೊಬೈಲ್ ಫೋನುಗಳತ್ತ ದೃಷ್ಟಿ ಬೀರಿದೆ. ಮೊಬೈಲು ಈಗ ನಿತ್ಯ ಬದುಕಿನ ಅವಿಭಾಜ್ಯ ಅಂಗ. ಕ್ಞೇತ್ರ ಟೆಕ್ಕಿ ಪಂಡಿತರ ಸರ್ವ ಲೆಕ್ಕಾಚಾರಗಳನ್ನೂ ಮೀರಿದ ವೇಗದಲ್ಲಿ ಬೆಳೆಯುತ್ತಿರುವುದು ಸತ್ಯ. ಇಂತಹ ಸನ್ನಿವೇಷದಲ್ಲಿ ವೈರಸ್ಸುಗಳು ಇತ್ತ ಕಡೆ ಹೊರಳಿದ್ದು ಅಚ್ಚರಿಯ ಸಂಗತಿಯಲ್ಲ.
ಕೆಲ ತಿಂಗಲ ಹಿಂದೆ ರಷ್ಯಾದ anti virus ದೈತ್ಯ ಕ್ಯಾಸ್ಪರ ಸ್ಕೈ (kaspersky) ಕೇಂದ್ರ ಕಚೇರಿಯಿಂದ ವರದಿಯೊಂದು ಹೊರ ಬಿದ್ದಿದೆ. GPRS ಬಳಸುವ ನೋಕಿಯ ಫೋನುಗಳನ್ನು ಒಂದು ಬಗೆಯ ವೈರಸ್ ಹೊಕ್ಕಿತಂತೆ. ಬಳಕೆಯ ಬಿಲ್ಲನ್ನು ತನ್ನಿಂದ ತಾನೇ ಒಂದಷ್ಟು ಹೆಚ್ಚುವಂತೆ ಮಾಡುವುದು ಕ್ರಿಮಿಗಳ ಕೆಲಸ.

ನೊಕಿಯದ ಕಥೆ ಹೀಗಾದರೆ ಫೋನಿನದ್ದು ಬೇರೆಯೇ ಕುತೂಹಲಕಾರಿ ಕಥೆಯಿದೆ. ನಿಮಗೆ ಗೊತ್ತಿರಬಹುದು, ಫೋನಿಗೆ ಅದರದ್ದೇ ಆದ ಕೆಲ ಸಿದ್ಧಾಮತಗಳಿದೆ. ಆಪಲ್ ಅನುಮೋದಿಸಿದ ತಂತ್ರಾಂಶವನ್ನು ಮಾತ್ರ ಅದರಲ್ಲಿ ಬಳಸಲು ಸಾಧ್ಯ. ಕಾಲಕಾಲಕ್ಕೆ ಹೊಸ ಆವಿಷ್ಕಾರಗಳಾದಂತೆ ಅದನ್ನು ಹಾಗ್ಹಾಗೇ ಅಪ್ಡೇಟ್ ಮಾಡಬಹುದು. ಆದರೆ ಕೆಲವು ಹ್ಯಾಕರ ಗಳು ಫೋನಿನ ತಂತ್ರಾಂಶವನ್ನು ಒಂದಷ್ಟು ಬದಲಿಸಿ ಅದರ ಕಟ್ಟುಪಾಡುಗಳನ್ನು ಮೀರಿ ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ. ಇಂತಹ ಫೋನುಗಳನ್ನು jailbroken iPhones ಎಂದು ಕರೆಯುತ್ತಾರೆ.
ಇಂತಹ ಫೋನುಗಳೆಡೆ ಇಟ್ಟು ಆಷ್ಟ್ರೇಲಿಯಾದ ಒಬ್ಬ ಪೋರ ಇಂದು ಪ್ರಯೋಗ ನಡೆಸಿದ. ಇವನ ಪ್ರಾಯೋಗಿಕ ವೈರಸ್ ಹೆಚ್ಚೇನೂ ಕಿತಾಪತಿ ಮಾಡಲಿಲ್ಲ. ಬದಲಾಗಿ ವೈರಸ್ ಭಾದಿತ jailbroken iPhoneಗಳು ೮೦ರ ದಶಕದ ಹೆಸರಾಂತ ಪಾಪ್ ತಾರೆ ರಿಕ್ ಆಸ್ಲೆಯ ಫೋಟೊವೊಂದನ್ನು ತನ್ನ ಪರದೆಯಲ್ಲಿ ತೋರಿಸುತ್ತದಷ್ಟೆ. ವೈರಸ್ ಬರೆದ ಬುದ್ದಿವಂತ ಪೋರ (ರೇಣುಕಾಚಾರ್ಯ ಅಲ್ಲ) ಪಾಪ್ ತಾರೆಯ ಪಾಪದ ಅಭಿಮಾನಿಯಿರಬೇಕು.
ಇದೇನೂ ಅಂತಹ ಘನವಿಚಾರವಲ್ಲ ಅನ್ನುತ್ತೀರಾ..? ಆದರೆ ಇಲ್ಲಿ ಗಹನವಾದ ಒಂದಂಶವನ್ನು ರಕ್ಷಣಾ ತಜ್ಞರು ಗಮನಿಸಿದ್ದಾರೆ. ಎರಡು ಪ್ರಕರಣಗಳು ಮುಂದಿನ ದಿನಗಳಲ್ಲಿ ಆಗಬಹುದಾದ ತೊಂದರೆಯ ಸೂಚನೆ ಎಂದು ಅವರ ಅಂಬೋಣ. ಮುಂದಿನ ದಿನಗಳಲ್ಲಿ Mobile XP, Blackberry, ಗೂಗಲ್ Androidಗಳನ್ನು ಗುರಿಯಾಗಿಸಿ ಘಟಾನುಘಟಿ ವೈರಸ್ಸುಗಳು ಬರಲಿದೆಯೆಂದು ಭವಿಷ್ಯ ನುಡಿದಿದ್ದಾರೆ.
ಇದೆಲ್ಲ ಕೇಳಿದ ಮೇಲೆ ನನಗೆ ಅಂತಹ ಐಶಾರಾಮಿ ಫೊನುಗಳ ಮೇಲೆ ಮೋಹವಿಲ್ಲ. ಇದು "ಕೈಗೆಟುಕದ ದ್ರಾಕ್ಷೆ...." ಎಂಬ "ನರಿ" ಸಿದ್ಧಾಂತವಲ್ಲ. ಫೋನುಗಳು ದೂರದವರೊಂದಿಗೆ ಮಾತನಾಡಲು ಇರುವ ಸಾಧನ. ಅದರಿಂದ ಒಂದು ಕಾರ್ಯ ಸಮರ್ಥವಾಗಿ ನಡೆದರೆ ಸಾಕು ಎಂಬ ordiನರಿ ಸಿದ್ಧಾಂತದ ಸಾಮಾನ್ಯ ಮನುಷ್ಯ ನಾನು.