ಬೆಳದಿಂಗಳ ಬಾಲೆ...



ನೆನಪುಗಳ ಸಂತೆಯಲಿ ನಿನ್ನ ನಗೆಯು ಕೂಗಿ ತಂದ
ಹಗಲು ಬಂದ ಬೆಳದಿಂಗಳು ನೀನೇ ಚಂದ


ಚುಕ್ಕಿ ತಾರೆ ನೀಹಾರಿಕೆ ಇಲ್ಲದಿರುವ ಪರಿವಾರಕೆ
ನೀಲಿ ಬಾನನೂ ನುಂಗಿ ನಲಿವ ಬೆಳ್ಳಗಿನ ಪರಿಚಾರಿಕೆ
ಮೆಲ್ಲ-ಮೆಲ್ಲಗೆ ಹೆಜ್ಜೆಯಿಡುವ ಪಾದದಡಿಯಲಿ ಪದವು ಮೂಡಿ
ಮೇಲೆ ಚಿಮ್ಮಿ ಮತ್ತೆ ಮಲಗಿ ಮತ್ತೆ ಮೆತ್ತಗೆ ಹಾಡಿದೆ


ಹಾಡಿದ ಆ ರಾಗ ಕೇಳಿ ಗಾಳಿಯುಸಿರು ಸರಾಗವಾಗಿ
ಓಡುತಿದ್ದರೆ ನಿನ್ನ ನೋಡಿ ಮತ್ತೆ ಹಿಂದಕೆ ಓಡಿದೆ
ತುಟಿಯ ಮೇಲೆ ಕಾಣದಂತೆ ಮೂಡಿನಿಂತ ನಗೆಯ ನೋಡಿ
ಏಳು ಬಣ್ಣದ ಮಳೆಯ ಬಿಲ್ಲು ನಿನ್ನ ನೋಡಲು ಬಾಗಿದೆ


ನಿನ್ನ ತೆಕ್ಕೆಗೆ ಜೋತುಬಿದ್ದ ಕಣವು ಕಣವೂ ಮಾಗಲಿ
ನಿನ್ನ ಕಣ್ಣಲಿ ನೋಟವಿಟ್ಟು ಹೊಸತು ಜೀವ ಬೆಳಗಲಿ
ಮಾತನಾಡಲು ಹೊರಟ ಮಾತು ಅಲ್ಲಿಗಲ್ಲಿಗೆ ನಿಲ್ಲಲಿ
ಚಿಪ್ಪಿನೊಳಗಿನ ಮುತ್ತಿನಂತೆ ಓಲೆಯಾಗಲು ಹೊರಡಲಿ


ಎಷ್ಟು ಬರೆದರೂ ಸಾಲದಂಥ ಅಂದವದುವೇ ನಿನ್ನದೇ
ಎಷ್ಟು ಸೋತರೂ ಗೆಲ್ಲುವಂಥ ಕೃಷ್ಣನಂಥ ನಿನ್ನೆದೆ
ಇಂಥ ನಿನಗೆ ಬರೆದು ಕಳಿಸಲು ನೂರು ಪದದ ಸಾಲಿದೆ
ಸಾಲದಿದ್ದರೆ ಒಮ್ಮೆ ಕೇಳು ಮತ್ತೆ ಬರೆಯುವ ಹುರುಪಿದೆ