ಧರ್ಮ by ಹೊಟೆಲ್ ಮಾಣಿ

 ಧರ್ಮ ಎಂದರೆ ಏನು? ಇದು ಸರಳವಾಗಿ ಹೊಟೆಲ್ ಮಾಣಿಯೆದುರು ಹರವಿಕೊಂಡ ಬಗೆ ಹೇಗೆ? ಎಂದು ಗಂಭೀರ ವಿಚಾರದ ಬಗ್ಗೆ light ಚೆಲ್ಲುವ light ಬರಹ:





ಧರ್ಮ ಎಂದರೆ ಏನು?
ಬಹುಕಾಲದಿಂದ ಬಹುಜನರಿಗೆ ಕಾಡಿದ ಪ್ರಶ್ನೆಯಿದು. ಕುರುಕ್ಷೇತ್ರದಲ್ಲಿ ಅರ್ಜುನ ಈ ಪ್ರಶ್ನೆ ಮುಂದಿಟ್ಟಲ್ಲವೇ ಕುಸಿದು ಕುಳಿತದ್ದು. ಸ್ವಾಮಿ ವಿವೇಕಾನಂದರು ಶಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದೂ ಇದೇ ಪ್ರಶ್ನೆಗೆ ಉತ್ತರ ಹೇಳಲಲ್ಲವೆ? ಕೆಲವೊಮ್ಮೆ ಇದಕ್ಕೆ ಉತ್ತರ ಬಹಳ ಸರಳ; ಕೆಲವೊಮ್ಮೆ ಅಷ್ಟೇ ಸಂಕೀರ್ಣ. ಏನೇ ಆಗಲಿ ಪ್ರಶ್ನೆಯಂತೂ ಗಂಭೀರ.
ಹೀಗೆಲ್ಲ ಲಹರಿ ಹರಿದದ್ದು ನೆನ್ನೆ ಖಾನಾವಳಿಯೊಂದಕ್ಕೆ ಚಹಾ ಪಾನಕ್ಕೆ ಹೋಗಿದ್ದಾಗ. ಅದ್ಯಾರು ಆವಿಷ್ಕರಿಸಿದರೋ ಗೊತ್ತಿಲ್ಲ, ಚಹಾ ಒಂದು ಒಳ್ಳೆಯ ಚೇತೋಹಾರಿ ಪಾನೀಯ. ಅಂಕೋಲ - ಕಾರವಾರದ KT, ಶಬರಿಮಲೆ ಯಾತ್ರೆಯ ಉದ್ದಕ್ಕೂ ಸಿಗುವ ಕಟ್ಟನ್ ಚಾಯ, ಕಾಸ್ಮೊಪಾಲಿಟನ್ ನ ಲೆಮೆನ್ ಟಿ, ಮಿಂಟ್ ಟಿ - ಉಸ್ಸಪ್ಪ ಅದೆಷ್ಟು ನಮೂನೆಗಳು.
ಚಹಾದ ಈ ಗುಣಕ್ಕಾಗಿ ಆಗಾಗ ಛಾ ಇಳಿಸುವ ಚಾಳಿ ನನಗಿದೆ ಎಂದು ನಿಮ್ಮೆದುರು ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ. ನಿಮ್ಮ ಮುಂದೆ ಯಾಕೆ ಮುಚ್ಚು ಮರೆ. ನೀವೇನು ನನಗೆ ಹುಡುಗಿ ಧಾರೆ ಎರೆದು ಕೊಡುವವರ? ಅಷ್ಟಕ್ಕೂ ಚಹಾದಲ್ಲಿರೋದು ಹಾಲು, ಆಲ್ಕೋಹಾಲೇನೂ ಅಲ್ವಲ್ಲ!
ಈ ನಿರುಪದ್ರವಿ ಚೇತೋಹಾರಿ ದ್ರವ್ಯ ಸವಿಯಲು ನಾವೊಂದಷ್ಟು ಟಿ ಪಾರ್ಟಿ ಗೆಳೆಯರು ಹೋಟೆಲ್ಲಿಗೆ ಅಡಿಯಿಟ್ಟೆವು. ಒಂದು ಬದಿಯಲ್ಲಿನ ಟೇಬಲ್  ಯಾವತ್ತೂ ನಮ್ಮ ಮೆಚ್ಚಿನ ತಾಣ. ನಾವೆಲ್ಲ ಅಲ್ಲಿ ಆಸನ ಅಲಂಕರಿಸಿದ ಮೇಲೆ ಒಬ್ಬ ’ಮಾಣಿ’ ಬಂದು ನಮ್ಮ ಅಗತ್ಯಗಳನು ವಿಚಾರಿಸಲು ಬಂದ (ಹೋಟೆಲ್ ಮಾಣಿಗೆ ವಯಸ್ಸು ಅರುವತ್ತೇ ಆಗಿರಲಿ, ಅವನು ಮಾಣಿಯೆ. ನಮ್ಮ ದೇವ್ ಆನಂದ್ ನಂತೆ ಚಿರ ಯುವಕ)
ನಮ್ಮ ಬೇಡಿಕೆ ಆಲಿಸಿ ’ನಾಲ್ಕು ಛಾಯ...’ ಎನ್ನುತ್ತ ಅತ್ತ ಹೋಗಿದ್ದಾನಷ್ಟೆ. ಅಷ್ಟರಲ್ಲಿ ಮತ್ತೊಬ್ಬ ಮಾಣಿಗೂ ಈ ಮಾಣಿಗೂ ವಾಗ್ವಾದ ಶುರುವಾಯಿತು. ವಿಷಯ ಏನೆಂದರೆ ನಾವಿದ್ದ  ಮೇಜಿನ ಉಸ್ತುವಾರಿ ಆ ಇನ್ನೊಬ್ಬ ಮಾಣಿಗೆ ಮೀಸಲಂತೆ. ಇವನಿಗೆ ಎ.ಸಿ.ಯೊಳಗೆ ಮಾತ್ರ ಕಾಯಕ.
ನೀನ್ಯಾಕೆ ಇಲ್ಲಿ ಬಂದೆ? ಬಂದದ್ದೂ ಅಲ್ಲದೆ order ಬೇರೆ ತಕೊಂಡ್ಯಲ್ಲ ಎಂದು ಅವನ ವರಾತ.
ಅಲ್ಲಿ ಜನ ಇಲ್ಲ. ಈ ಚಳಿಗಾಲದಲ್ಲಿ ಎ.ಸಿ.ಗೆ ಯಾರು ಬರ‍್ತಾರೆ? ಇಲ್ಲಿ ಜನ ಜಾಸ್ತಿ ಇದ್ದಾರೆ, ಇಲ್ಲಿ ನನ್ನ ಅಗತ್ಯ ಇದೆ. ಅದಕ್ಕೆ ಬಂದೆ. ನಿಂಗೇನು ಸಂಕಟ? ಎಂದು ಇವನ ಸ್ಪಷ್ಟೀಕರಣಯುಕ್ತ ಮರು ಪ್ರಶ್ನೆ.
ನಮಗೂ ಒಂದಷ್ಟು ಬಿಡುವಿತ್ತು. ಚಕಾರವೆತ್ತದೆ ಅವರ ವಾಗ್ವಾದ ಗಮನಿಸುತ್ತ ಕುಳಿತೆವು. ರಾಜಕೀಯ ಮುಖಂಡರ ವಾಗ್ಯುದ್ಧ ಕೇಳಿ ಕೇಳಿ ಬೇಸತ್ತಿದ್ದ ಮನಸ್ಸಿಗೆ ಹೊಸ ವಾದ ನೋಡುವ ಮನಸ್ಸಿತ್ತು. ವಾದದ ಗಾಂಭೀರ್ಯ ಅರಿತ ಹೋಟೆಲ್ ಮಾಲೀಕ ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲಿ pressನವರು ಯಾರೂ ಇಲ್ಲದ್ದರಿಂದ ಸಂಧಾನ ಸೂತ್ರ ಹೇಗಾಯಿತೆಂದು ವರದಿ ಪ್ರಕಟ ಆಗಲಿಲ್ಲ. ಟಿವಿ ಚಾನಲ್ ನವರು ಇದ್ದಿದ್ದರೆ ಬಹುಶಃ ಆ ಘಟನೆಯನ್ನು ಮುಕ್ಕಾಲು ದಿನ ತೋರಿಸಿ, ’ನಮ್ಮ ಪ್ರತಿನಿಧಿ’ಯೊಂದಿಗೆ ನೇರ ಸಂಪರ್ಕ ಸಾಧಿಸಿ ’ಹೆಚ್ಚಿನ ಮಾಹಿತಿ’ ಪಡೆಯುತ್ತಿದ್ದರು. ಹಾಗೆ ಆಗದೆ ಇದ್ದದ್ದು ಮಾಲೀಕರ, ಗಿರಾಕಿಗಳ ಮತ್ತು ಸಾರ್ವಜನಿಕರ ಭಾಗ್ಯ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಬ್ಬ ತನಗೆ ಕೊಟ್ಟ ಕೆಲಸ ನಜಿಷ್ಠೆಯಿಂದ ಮಾಡುತ್ತಿದ್ದ. ಮತ್ತೊಬ್ಬ ತನ್ನ ವೃತ್ತಿ ಧರ್ಮ ನಿಷ್ಠೆಯಿಂದ ಪಾಲಿಸುತ್ತಿದ್ದ. ಇವರಿಬ್ಬರಲ್ಲಿ ಯಾರು ಸರಿ? ಎರಡನೆಯವನದ್ದೇ ಅಲ್ವ? ಆದರೆ ಒಬ್ಬ ಹೋಟೆಲ್ ಮಾಣಿಯ ಉತ್ತಮ

ಚಿಂತನೆ ನನ್ನನ್ನು ಚಿಂತನೆಗೀಡು ಮಾಡಿತು. ಆ ಮಾಣಿಗಿರುವ ಬುದ್ದಿ ನಮ್ಮ ಅಂಬಾನಿಗಳಿಗೆ ಇಲ್ಲವಲ್ಲ. ಇದ್ದಿದ್ದರೆ ಅವರು ಪಾಲುದಾರಿಕೆಗಾಗಿ ಸುಪ್ರೀಂ ಕೋರ್ಟ್‌ನ ಕದ ತಟ್ಟುತ್ತಿರಲಿಲ್ಲ.
ಯಾರೇನ ಮಾಡುವರು
ಯಾರಿಂದಲೇನಹುದು
ಪೂರ್ವ ಜನುಮದ ಕರ್ಮ
ವಿಧಿ ಬೆನ್ನ ಬಿಡದು.

ಇನ್ನೊಂದ್ಸಲ ನೀವು ಸಿಕ್ಕಾಗ ಒಟ್ಟಿಗೆ ಛಾ ಕುಡಿಯೋಣ. ಬಿಲ್ ನಾನೇ ಕೊಡ್ತೀನಿ, ಪರ‍್ವಾಗಿಲ್ಲ.