ಹೊಸ ದಾರಿ. . . .


"ಅಭಿವೃದ್ಧಿಗಾಗಿ ರಸ್ತೆಗಳು", ಬೆಂಗಳೂರಿನಿಂದ ಮಂಗಳೂರು ಕಡೆಗೆ ನೀವು ಮೈಸೂರು ಬಳಸಿ ಬಂದಿದ್ದೀರೆಂದರೆ ಈ ಫಲಕವನ್ನು ನೋಡಿರುತ್ತೀರಿ. ಬೆಂಗಳೂರಿನಿಂದ ಹುಣಸೂರಿನ ವರೆಗೆ ಚತುಷ್ಪತ, ನಂತರ ಕುಶಾಲನಗರದ ವರೆಗೆ ದ್ವಿಪಥ, ಆದರೆ ಕುಶಾಲನಗರದಿಂದ ಮುಂದೆ ಎಲ್ಲವೂ ತಟ ಪಟ. ಕೆಲವು ಕಡೆ ರಸ್ತೆ ರಿಪೇರಿ ಕಾಮಗಾರಿ ನಡೆಯುತ್ತಿದೆ, ಎಚ್ಚರಿಕೆಯಿಂದ ಚಲಿಸಬೇಕು. ಮತ್ತೆ ಕೆಲವು ಕಡೆ ರಿಪೇರಿಯೇ ನಡೆಯುತ್ತಿಲ್ಲ, ಮತ್ತು ಎಷ್ಟೋ ವರ್ಷದಿಂದ ರಿಪೇರಿ ನಡೆದೇ ಇಲ್ಲ. ಅಲ್ಲೂ ಎಚ್ಚರಿಕೆಯಿಂದ ಚಲಿಸಬೇಕು.
ಇನ್ನೇನು ಈ ರಸ್ತೆ ಅಭಿವೃದ್ಧಿ ಆಗಿಯೇ ಬಿಟ್ಟಿತು ಎಂಬ ಕನಸು ಹೊತ್ತು ನಾನೂ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಸಾಗಿದ್ದೇ ಸಾಗಿದ್ದು. ಉಹುಂ.. ಮೈಗೆ ಒಂದಷ್ಟು ಧೂಳು ಅಂಟಿದೆಯೇ ವಿನಃ ಕಂಡ ಕನಸು ನನಸಾಗಿಯೇ ಇಲ್ಲ. "ನಾನು, ನನ್ನ ಕನಸು" ಎಂದು ನಾನೂ ಒಂದು ಸಿನಿಮಾ ಮಾಡಿದರೆ ಹ್ಯಾಗೆ? ಗಾಂಧಿನಗರಕ್ಕೆ ಹೋಗಿ "ಪಿಚ್ಚರ್ ಫುಲ್ಲು ಔಟ್ ಡೋರೇ ತೆಗ್ದಿದೀವಿ. ಎಡಿಟಿಂಗ್ ಎಲ್ಲಾ ರಾಂ ಗೋಪಾಲ್ ವರ್ಮಾ ಸ್ಟೈಲಲ್ಲಿದೆ. ನಾಲಕ್ ಚೇಸಿಂಗ್ ಸೀನು, ಮೂರ್ ಫೈಟು.." ಎಂದು ನಾನೂ ಮಾತಾಡಬಹುದಿತ್ತು.
ಮೊನ್ನೆ ಮೈಸೂರಿಗೆ ಹೋಗುವಾಗಲೇ ಯಾವುದಾದರೂ ಬೇರೆ ದಾರಿ ಇದೆಯಾ ಎಂದು ಲೆಕ್ಕ ಹಾಕಿದ್ದೆ. ಸಮಯದ ಅಭಾವದಿಂದಾಗಿ ಅನ್ವೇಷಣೆಗೆ ಹೊರಡದೆ ಹಳೆ ಪಾತ್ರೆ ಹಳೆ ಕಬ್ಣ ಎಂದು ಅದರಲ್ಲೇ ಸಾಗಿದೆ. ಆದರೆ ಅಲ್ಲಿಗೆ ಹೋದ ಮೇಲೆ ಒಂದು ಹೊಸ ದಾರಿ (ನನ್ನ ಮಟ್ಟಿಗೆ) ಇರುವ ವಿಚಾರ ತಿಳಿಯಿತು. ಸರಿ ಬರುವಾಗ ಪ್ರಯೋಗಿಸಿಯೇ ಬಿಡೋಣವೆಂದು ತೀರ್ಮಾನಿಸಿದೆ.

ಕುಶಾಲನಗರದ ಕಾವೇರಿ ನಿಸರ್ಗಧಾಮ ಕಳೆದು ಸುಮಾರು ಒಂದು ಕಿಲೋಮೀಟರಿಗೆ ದುಬಾರೆಗೆ ಹೋಗುವ ಮಾರ್ಗ ಎಡಕ್ಕೆ ತಿರುಗುತ್ತದೆ. ನಾಲ್ಕೈದು ಗೂಡಂಗಡಿಯ ಸನಿಹ ಒಂದು ಪುಟ್ಟದಾದ ಹಸಿರು ಫಲಕದಲ್ಲಿ ಆನೆ ಶಿಬಿರದ ಬೋರ್ಡು! ಆ ರಸ್ತೆಗೆ ತಿರುಗಿ ಹತ್ತು ಕಿಮೀ ಸಾಗಿದರೆ ಎಡಕ್ಕೆ ದುಬಾರೆ. ಆ ಒಳದಾರಿ ನೋಡಿದರೆ ಅದು ಆನೆಗೇ ಸೈ, ನಮಗಲ್ಲ ಎಂದು ಅನಿಸುತ್ತದೆ.
ಇದ್ಯಾವುದಕ್ಕೂ ವಿಚಲಿತರಾಗದೆ ನಾವು ಮುಖ್ಯ ರಸ್ತೆಯಲ್ಲಿ ಮುಂದಕ್ಕೆ ಸಾಗಬೇಕು. ಐದು ಕಿಮೀ ಸಾಗಿದಾಗ ಬಲ ಬದಿಗೆ ಒಂದು ಪುಟ್ಟ ರಸ್ತೆ, ಅದರ ಪಕ್ಕದಲ್ಲಿ ಒಂದು ದೊಡ್ಡ ಬೋರ್ಡು. ಈ ರಸ್ತಯೇ ನಮ್ಮನ್ನು ರಾಜ್ಯ ಹೆದ್ದಾರಿ ೮೯ಕ್ಕೆ ಸಂಪರ್ಕಿಸುವುದು. ಹೆಚ್ಚೇನಿಲ್ಲ, ಬರೇ ಎರಡು ಕಿಮೀ ಮಟ್ಟಿಗೆ ಆ ಮಾರ್ಗವನ್ನು ಸಹಿಸಿದರಾಯಿತು. ಹೆದ್ದಾರಿ ಸಿಕ್ಕ ಕೂಡಲೆ ಬಲಕ್ಕೆ ಹೊರಳಬೇಕು.
ಮುಂದಿನ ನಾಲ್ಕನೇ ಕಿ.ಮೀಗೆ ಚೆಟ್ಟಳ್ಳಿ, ಬಲಕ್ಕೆ ತಿರುಗುವ ಶುಂಟಿಕೊಪ್ಪ ಮಾರ್ಗವನ್ನು ಗಮನಿಸದೆ ನೇರ ಮಡಿಕೇರಿಗೆ ಸಾಗಿದರಾಯಿತು. ಕುಶಾಲನಗರ - ಮಡಿಕೇರಿ ರಸ್ತೆಯಷ್ಟು ಹದಗೆಟ್ಟಿಲ್ಲ. ವಾಹನ ದಟ್ಟಣೆಯೂ ಕಮ್ಮಿ. ಈ ಎಲ್ಲಾ ಅಂಶಗಳನ್ನು ಬದಿಗೊತ್ತಿದರೂ ಈ ದಾರಿಗೆ ಇದರದ್ದೇ ಆದ ಸೊಗಸಿಗೆ. ಮದ್ಯಾಹ್ನ ೨ ಗಂಟೆಯಲ್ಲೂ ಬೀಸುವ ತಂಪು ಗಾಳಿ, ಕೀ ಕೊಡುವ ಗೋಡೆ ಗಡಿಯಾರದ ವೈಂಡಿಂಗಿನಂತೆ ಸುರುಳಿ ಸುರುಳಿ ತಿರುವು. ಎಡಕ್ಕೆ ಎತ್ತರದಲ್ಲಿ ಕಾಫಿ ತೋಟ, ಬಲಕ್ಕೆ ಆಳ ಆಳದ ಕಣಿವೆ, ಕಣಿವೆಗಳಲ್ಲಿ ಕಣ್ಣು ಹಾಯಿಸುವಾಗ ಮಂಗಳೂರು ಬೆಂಗಳೂರು ಹಗಲು ರೈಲು ನೆನಪಾದರೆ ಆಕಸ್ಮಿಕವಲ್ಲ.
ಇಲ್ಲಿ ಸಾಗುತ್ತಿದ್ದಾಗ ನನ್ನಷ್ಟೇ ಹೊಸ ಹುರುಪು ನನ್ನ ಬೈಕಿಗೆ. ದಣಿವೇ ಇಲ್ಲದಂತೆ ಡೀಸಿಲ್ ಎಂಜಿನ್ ಹೊತ್ತ ಬುಲೆಟ್ ಬೈಕು

ತಿರುವುಗಳಲ್ಲಿ ಬಾಗುತ್ತ ಮಾಗುತ್ತ ಚಳಿಯನ್ನೂ ನಿಶ್ಶಬ್ದವನ್ನೂ ಏಕಕಾಲಕ್ಕೆ ಸೀಳಿ ಸಾಗುತ್ತಿತ್ತು. ಹೆಚ್ಚೇನೂ ವಾಹನ ಸಂಚಾರವಿಲ್ಲದ ಈ ಮಾರ್ಗದ ಬದಿಯಲ್ಲಿ ಒಮ್ಮೆ ನಿಲ್ಲಿಸಿದಾಗ ಅನುಭವಕ್ಕೆ ಬರುತ್ತಿದ್ದದ್ದು ಚುಮು ಚುಮು ಚಳಿ, ನೀರವ ಮೌನ ಮತ್ತು ಮುದ ನೀಡುವ ಏಕಾಂತ.
ಮನಸು ಹಾಗೇ ಒಮ್ಮೆ ಮೈಸೂರು ಬೆಂಗಳೂರಿನ ಬಿಡುವಿಲ್ಲದ ಹೆದ್ದಾರಿಯನ್ನು ನೆನಪಿಗೆ ತಂದುಕೊಂಡಿತು. ನೀಳವೇಣಿಯ ಬೈತಲೆಯಂತೆ ನೀಟಾದ ಆ ಹೆದ್ದಾರಿಯಲ್ಲಿ ಹೋಗಿದ್ದಾಗ ಬೈಕಿನ ಎಕ್ಸಲೇಟರ್ ಕೇಬಲ್ ತುಂಡಾಗಿತ್ತು. ಸಣ್ಣ ಪುಟ್ಟ ರಿಪೇರಿಗೆ ಬೇಕಾದ ಒಂದಷ್ಟು ಸರಂಜಾಮುಗಳು ಯಾವತ್ತೂ ನನ್ನ ಪ್ರಯಾಣದೊಂದಿಗೆ ಇರುತ್ತದೆ. ತೊಂದರೆಯೇನೂ ಆಗಲಿಲ್ಲ. ಆದರೆ ಆ ಅರ್ಧ ಗಂಟೆ ಹೈವೇ ಬದಿಯಲ್ಲಿ ನಿಲ್ಲಿಸಿ, ಗ್ರೀಸು  ಮೆತ್ತಿದ ಕೈಗಳಲ್ಲಿ ಸ್ಕ್ರೂ ಡ್ರೈವರ್ ಹಿಡಿದು ನಿಂತಿದ್ದರೆ, ರೊಯ್ಯನೆ ಸಾಗುವ ಒಬ್ಬರೂ ಕ್ಯಾರೆ ಅನ್ನಲಿಲ್ಲ. ಆ ಜನಸಾಗರದಲ್ಲಿನ ಏಕಾಂತಕ್ಕಿಂತ ಈ ನಿರ್ಜನ-ನಿಶ್ಶಬ್ದ, ಏಕಾಂತ ಎಷ್ಟೋ ವಾಸಿ.
ನಾವು ಯಾವತ್ತೂ ಹೀಗೆ. ಎಲ್ಲರೂ ಸಾಗಿ ಸಾಗಿ ಸವೆದ ದಾರಿಯನ್ನೇ ಹೆಚ್ಚಾಗಿ ಆಯ್ಕೆ ಮಾಡುತ್ತೇವೆ. ಎಲ್ಲರೂ ಬಿಇ ಮಾಡುವಾಗ ನಾವೂ ಅದಕ್ಕೇ ಅರ್ಜಿ ಹಿಡಿಯುತ್ತೇವೆ. ಅನಿಮೇಶನ್ನಿಗೆ ಒಳ್ಳೆ ಅವಕಾಶವಿದೆಯಂತೆ ಎಂದು ಯಾರೋ ಹೇಳಿದ್ದು ನಂಬಿ ೫೦ ಸಾವಿರ ತೆತ್ತು ಸೇರುತ್ತೇವೆ. ಈಗ ಬಯೋಟೆಕ್ನಾಲಜಿಗೆ ಭಾರೀ ಡಿಮಾಂಡು ಅಂತ ಪಕ್ಕದ ಮನೆಯ ಬ್ಯಾಂಕ್ ನೌಕರ ಹೇಳಿದರೆ ನಮ್ಮದು ಅದಕ್ಕೇ ಜೈ. ನಮ್ಮ ಹೆಚ್ಚಿನ ನಿರ್ಧಾರಗಳು ಇತರರ ಹೇಳಿಕೆ ಮೇಲೆ ಅವಲಂಬಿತ ಹೊರತು ಸ್ವಂತ ವಿವೇಕಕ್ಕೆ ಒಂದಿನಿತೂ ಕೆಲಸ ಕೊಡುವುದಿಲ್ಲ. ಸುಮ್ನೆ ರಿಸ್ಕ್ ಯಾಕೆ...

ಆದರೆ ರಿಸ್ಕು ಎಲ್ಲದರಲ್ಲೂ ಇದೆ. ತೋಟಕ್ಕೆ ಹೋಗುವುದೂ ಒಂದು ರೀತಿ ರಿಸ್ಕೇ. ತಲೆಗೆ ತೆಂಗಿನಕಾಯಿ ಬಿದ್ದರೆ? ಬಿಸಿನೆಸ್ಸು ರಿಸ್ಕು, ಲಾಸಾದರೆ? ರಿಸ್ಕು ಯಾವುದರಲ್ಲಿಲ್ಲ ಹೇಳಿ. ವ್ಯಾಪಾರ ಮಾಡಿ, ಡ್ರೈವ್ ಮಾಡಿ, ಕೃಷಿ ಮಾಡಿ... ಬೇಡ, ಕೊನೆಗೆ ರೊಮ್ಯಾನ್ಸ್ ಮಾಡಿದ್ರೂ ರಿಸ್ಕಿಲ್ವ ಹೇಳಿ...!