ಕಲಿಗಾಲ ಸ್ವಾಮಿ... ಕಲಿಗಾಲ


ಉಪೇಂದ್ರ ಎಂಬ ಸಿನಿಮಾ ನಿಮಗೆ ನೆನಪಿರಬಹುದು. ಅದರಲ್ಲಿ ಕಥಾ ನಾಯಕ ಉಪೇಂದ್ರ ನಾಯಕಿ ರತಿ(ಧಾಮಿನಿ) ಎದುರು ಒಂದು ಮಾತು ಹೇಳುತ್ತಾನೆ. ದೇಶದಲ್ಲಿ ಅದೆಷ್ಟು ಅಕ್ರಮ ಸಂಬಂಧಗಳಿಲ್ಲ ಹೇಳು.. ಪ್ರತಿ ರೂಮಿನ ಗೋಡೆಗಳಿಗೆ ಮಂಚಗಳಿಗೆ ನೋಡಕೆ ಕಣ್ಣಿದ್ದು ಮಾತಾಡೋಕೆ ಬಾಯಿ ಇದ್ದಿದ್ರೆ ದಿನಕ್ಕೊಂದೊಂದು world war ಆಗೋದು ಪ್ರಪಂಚದಲ್ಲಿ.
            ಮಾತು ಅವತ್ತಿಗೆ ಒಂದು ಸಿನಿಮಾ ಸಂಭಾಷಣೆ ಮತ್ತು ಸಿನಿಮೀಯ ಮಾತು. ಆದರೆ ಇಂದು ಸತ್ಯಕ್ಕೆ ಇದು ಕೊಂಚ ಕೊಂಚವೇ ಸನಿಹ ಬರುತ್ತಿದೆ. ಒಂದು ಕಡೆ ಸ್ವಾಮಿ ನಿತ್ಯಾನಂದ ನಟಿ ರಂಜಿತಾ ಜೊತೆಗೆ ತಾಂತ್ರಿಕ ಧ್ಯಾನ ಮಾಡುತ್ತಿರುವುದನ್ನು ಹಾಗೆಯೇ ಚಿತ್ರೀಕರಿಸಿ ಮಾಧ್ಯಮಗಳಿಗೆ ಸಿಗುವಂತೆ ಮಾಡಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಎಂದು ನಿತ್ಯಾನಂದ ಬಾಯಿ ಬಿಟ್ಟು ಹೇಳದೇ ಇದ್ದರೂ ಓಹೋ.. ಸ್ವಾಮಿ ಹೀಗೆ ಎಂದು ಜನ ಮಾತಾಡಿಕೊಂಡರು. ಮೊಬೈಲಿನಲ್ಲಿ ನಿತ್ಯಾನಂದನ ಎಸ್ಸೆಮ್ಮೆಸ್ಸುಗಳು ಬಿರುಸಿನ ವೇಗದಲ್ಲಿ ಹರಿದಾಡಲಾರಂಭಿಸಿತು. ಅದನ್ನು ಓದಿ ಓದಿ ಬೇಸತ್ತು ಹೋದೆವು ಎಂದು ಜನರಿಗೆ ಅನಿಸುವ ಹೊತ್ತಿಗೆ ಹರತಾಳು ಹಾಲಪ್ಪನಿಂದ ಹೊಸತೊಂದು ಸಂದೇಶ ಬಂತು.
            ಅಲ್ರೀ ಹೆಂಡತೀನ ಅತ್ಯಾಚಾರ ಮಾಡೋವಾಗ ಯಾರಾದ್ರೂ ಮೊಬೈಲ್ ಹಿಡ್ಕೊಂಡು ರೆಕಾರ್ಡ್ ಮಾಡ್ತಾರೇನ್ರೀ ಎಂದು ಕೆಲವರು ಕೇಳಿದರು. ಅಷ್ಟಾಗುವ ಹೊತ್ತಿಗೆ ಅದು ಅವನ ಹೆಂಡತೀನೇ ಅಲ್ವಂತೆ, ಅವನಿಗೆ ಮೊದಲು ಬೇರೇ ಹೆಣ್ಣಿನ ಜೊತೆ ಮದುವೆ ಆಗಿತ್ತಂತೆ. ಇವಳು ಹೆಂಡತಿ ಅಂತ ಆಗೋದಿಲ್ಲ, ಇದೊಂಥರಾ ಬೇರೆ ಹೆಸರಿನ ವ್ಯವಹಾರ  ಅಂತ ಇನ್ನು ಕೆಲವರು ಮಾತಾಡಲು ಶುರು ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ಆಹಾರ ಪೂರೈಕೆ ಮಾಡಿದರು.
            ನಿತ್ಯಾನಂದ, ಹಾಲಪ್ಪ ಪ್ರಕರಣಗಳು ಆಗುವುದಕ್ಕೂ ಮೊದಲು ಆಂಧ್ರ ಪ್ರದೇಶದ ರಾಜ್ಯಪಾಲ ಆಗಿದ್ದ ಎನ್.ಡಿ.ತಿವಾರಿ ಹೈದರಾಬಾದಿನ ರಾಜಭವನದಲ್ಲಿ ಲಲನೆಯರೊಂದಿಗೆ ಹೈದರಾಬಾದ್ ನಿಜಾಮನ ಸ್ಟೈಲಿನಲ್ಲಿ ವಿರಾಜಮಾನರಾಗಿ ರಾಜಯೋಗ ಅನುಭವಿಸುತ್ತಿದ್ದುದನ್ನು ಸಮಸ್ತ ಪ್ರಜೆಗಳೂ ನೋಡಿದ್ದಾರೆ. ನಂತರ ಆಸಾಮಿ ರಾಜೀನಾಮೆ ನೀಡಿ ತಮಗೆ ದಕ್ಕಿದ್ದ ರಾಜಯೋಗವನ್ನು ಅದೇ ಮಂಚದಲ್ಲಿ ಬಿಟ್ಟು ಮನೆಗೆ ತೆರಳಿದರು.
            ಇದು ನಮ್ಮ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಭಾವಿಸಲಾದ ಕೆಲವು ವ್ಯಕ್ತಿಗಳ ಚಿತ್ರಣ ಮತ್ತು ಚಿತ್ರೀಕರಣ. ಇವುಗಳಲ್ಲಿ ಹೆಚ್ಚಿನವು ಮೊಬೈಲ್‌ನಲ್ಲಿ ದಾಖಲಿಸಿದ ತುಣುಕುಗಳು.
ಅದು ಬಿಡಿ. ಆದರೆ ಮೊಬೈಲ್ ಎಂಬ ಮಾಂತ್ರಿಕ ಬಂದ ಮೇಲೆ ಅದ್ಹೇಗೆ ನಮ್ಮಲ್ಲಿ ಖಾಸಗಿತನ ಎಂಬುದೇ ಇಲ್ಲವಾಗಿ ಹೋಗಿದೆ ನೋಡಿ. ಗೆಳತಿ ಜೊತೆಗೆ ಒಂದರ್ಧ ಗಂಟೆ ಮಾತಾಡೋಣ ಎಂದು ಹೋಟೆಲ್ಲಿಗೆ ಹೋದರೆ ಹನ್ನೆರಡು ವರ್ಷಗಳ ಹಿಂದೆ ತಪ್ಪಿ ಹೋಗಿದ್ದ ಒಬ್ಬ ಗೆಳೆಯ ಫೋನ್ ಮಾಡುತ್ತಾನೆ. ಬಹಳ ವರ್ಷಗಳ ನಂತರ ಮಾತಿಗೆ ಸಿಕ್ಕವನೊಂದಿಗೆ ಒಂದು ಹತ್ತು ನಿಮಿಷವಾದರೂ ಮಾತಾಡದಿದ್ದರೆ ಹೇಗೆ? ಕರಗುತ್ತಿರುವ ಐಸ್‌ಕ್ರೀಂ ಎದುರಿಗಿದ್ದರೂ ದಾಕ್ಷೀಣ್ಯಕ್ಕೆ ನೀವು ಅವನೊಂದಿಗೆ ಮಾತಾನಾಡಿ ಮುಗಿಸುತ್ತೀರಿ.
            ಅಷ್ಟಾಗುವ ಹೊತ್ತಿಗೆ ನಿಮ್ಮ ಗೆಳತಿಯ ಫೋನು ರಿಂಗಿಣಿಸುತ್ತದೆ. ಇನ್ನು ಒಂದು ತಿಂಗಳಲ್ಲಿ ಮದುವೆಯಾಗಲಿರುವ ಆಕೆಯ ಗೆಳತಿ ಸಿರೆ- ಆಭರಣದ ವಿಚಾರವಾಗಿ ಒಂದಿಷ್ಟು ಗಂಭೀರ ವಿಚಾರ ಮಾಡುತ್ತಾಳೆ.
            ಐದು ನಿಮಿಷದ ಬಳಿಕ ನಿಮ್ಮ ಮಾತು ಪುನಃ ಶುರುವಾಗಿರುತ್ತದೆ, ಅಷ್ಟರಲ್ಲಿ ಅವಳ ಅಮ್ಮ ಎಲ್ಲಿದ್ದೀಯ ಎಂದು ಫೋನಾಯಿಸುತ್ತಾರೆ. ಅಲ್ಲಿಗೆ ನಿಮ್ಮ ಅಂದಿನ ಖಾಸಗಿ ಭೇಟಿ ಮುಗಿಯಿತು.
ಒಂದು ವರ್ಷದ ಹಿಂದೆ ಇದೇ ಫೋನಿನಲ್ಲಿ ನೀವುಗಳು ಮಾತಾಡಿ ಮಾತಾಡಿ ಇವತ್ತು ಹೋಟೆಲ್ಲಿಗೆ ಹೋಗುವ ಮಟ್ಟಕ್ಕೆ ಬಂದಿದ್ದೀರಿ, ಆದರೆ ಇವತ್ತು ಇದೇ ಫೋನು ನಿಮ್ಮನ್ನು ದೂರ ತಳ್ಳುತ್ತಿದೆ! ಕಲಿಕಾಲ...
            ಇದೇನೋ ಸಾರ್ವಜನಿಕ ತಾಣವಾಯಿತು. ಆದರೆ ಮೊಬೈಲು ಬೆಡ್‌ರೂಮಿನ ಒಳಕ್ಕೂ ಹೊಕ್ಕಿತು ನೋಡಿ. ನಮ್ಮ ಹೈಸ್ಕೂಲು ಮಕ್ಕಳೂ ಮಕ್ಕಳಾಗೋದು ಹ್ಯಾಗೆ ಎಂಬ ರಹಸ್ಯವನ್ನು ಭೇದಿಸಿ ಬಿಟ್ಟರು. ಉತ್ತರ ಭಾರತದ ಒಂದು ಕಾಲೇಜಿನ ಪಿಯುಸಿ ಹುಡುಗಿ ಅದೇ ಕಾಲೇಜಿನ ಹುಡುಗನೊಂದಿಗೆ ಒಂದಷ್ಟು ಪ್ರೀಯಾಗಿ ಮೂವ್ ಆಗಿರುತ್ತಾಳೆ. ಇದನ್ನು ಫಟಿಂಗ ಹಾಗೇ ಸುಮ್ಮನೆ ರೆಕಾರ್ಡ್ ಮಾಡಿರುತ್ತಾನೆ. ಇದು ಎಲ್ಲೆಲ್ಲೋ ಸಾಗಿ ನಮ್ಮ ಪಕ್ಕದ್ಮನೆ ಹುಡುಗನ ಮೊಬೈಲಿಗೆ ಬಂದು ಸೇರಿರುತ್ತದೆ. ಅಲ್ಲಿಂದ ನಾವೂ ನೀವು ಬ್ಲೂ ಟೂತ್‌ನಿಂದ ಸೆಂಡ್ ಮಾಡಿಕೊಡಿರುತ್ತೇವೆ.
            ಇಷ್ಟೆಲ್ಲಾ ಆದ್ರೂ ನಾವು ಸಾಚಾಗಳು. ಆದ್ರೆ ನಿತ್ಯಾನಂದ, ಹಾಲಪ್ಪ.. ಛೇ.. ಮನುಷ್ಯ ಮರ್ಯಾದಿಯಿಂದ ಬದುಕೋದು ಕಲೀಬೇಕ್ರೀ..